ಹಾವೇರಿ: ಸಚಿವ ಕೆ.ಎಸ್.ಈಶ್ವರಪ್ಪಗೆ ಬೆದರಿಕೆ ಕರೆ ಬಂದಿರೋದು ನಿಜ. ಅದು ತಮಿಳುನಾಡಿನ ನಂಬರ್ ನಿಂದ ಕರೆ ಬಂದಿದೆ. ಕರೆ ಮಾಡಿದವರ ಪತ್ತೆ ಮತ್ತು ಈಶ್ವರಪ್ಪಗೆ ಸೂಕ್ತ ಭದ್ರತೆ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಬಸವರಾಜ್ ಬೊಮ್ಮಾಯಿ, ಪೌರತ್ವ ವಿಚಾರದ ಬಗ್ಗೆ ಮಾತನಾಡಿದ್ದಕ್ಕೆ ಬೆದರಿಕೆ ಬಂದಿದೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಜ್ಯದ ಬಗ್ಗೆ ಹೆಚ್ಚಿನ ಕಾಳಜಿ ಇದೆ. ಪ್ರಧಾನಿಯವರು ಸಿಎಂ ಜೊತೆ ಮಾತನಾಡಿದ್ದಾರೆ. ನಮಗೆ ಬರ ಬಂದಾಗ ಅತಿ ಹೆಚ್ಚು ಹಣ ನೀಡಿದ್ದು ಪ್ರಧಾನಿ ನರೇಂದ್ರ ಮೋದಿ. ಪ್ರತಿಪಕ್ಷದವರು ಬಾಯಿಗೆ ಬಂದಂತೆ ಮಾತನಾಡೋದು ಬೇಡ. ಇದಕ್ಕೆ ಸದನದಲ್ಲಿ ಈ ಬಗ್ಗೆ ಸೂಕ್ತ ಉತ್ತರ ನೀಡುತ್ತೇವೆ ಎಂದರು.
ರಾಜ್ಯದಲ್ಲಿ ಸಿಎಎ ಪರ ಮತ್ತು ವಿರೋಧದ ಬಗ್ಗೆ ಪ್ರತಿಭಟನೆ ಮತ್ತು ಸಮಾವೇಶಗಳು ನಡೆಯುತ್ತವೆ. ಎರಡೂ ಕಡೆಯವರು ಶಾಂತಿಯುತವಾಗಿ ತಮ್ಮ ಪ್ರತಿಭಟನೆ ನಡೆಸಬೇಕೆಂದು ತಿಳಿಸಲಾಗಿದೆ. ಇದೇ ವೇಳೆ ಸಚಿವ ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ಸಿಗುತ್ತಾ ಪ್ರಶ್ನೆಗೆ ಉತ್ತರಿಸಲು ಸಚಿವರು ನಿರಾಕರಿಸಿದರು.