– ಯುಪಿಎ ಇದ್ದಾಗ 8%, ಮೋದಿ ಬಂದ ಮೇಲೆ 38% ಅನುದಾನ ಹೆಚ್ಚಳ
– ಕಾವೇರಿ ವಿವಾದದ ರಾಜಕೀಯ ಮಾಡುತ್ತಿರುವುದು ಕಾಂಗ್ರೆಸ್
ಬೆಂಗಳೂರು: ರಾಜ್ಯದ ಜನಕ್ಕೆ ಕಾಂಗ್ರೆಸ್ ಚೊಂಬು ಕೊಟ್ಟಿದ್ದು, ಅದಕ್ಕೇ ಈ ರೀತಿ ಸುಳ್ಳು ಜಾಹೀರಾತು ಕೊಡುತ್ತಿದೆ ಎಂದು ತಮಿಳುನಾಡಿನ ಬಿಜೆಪಿ (BJP) ರಾಜ್ಯಾಧ್ಯಕ್ಷ ಅಣ್ಣಾಮಲೈ (K. Annamalai) ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಯುಪಿಎ ಸರ್ಕಾರ ಇದ್ದಾಗ 19,500 ಕೋಟಿ ರೂ. ಬರ ನಷ್ಟಕ್ಕೆ, 1500 ಸಾವಿರ ಕೋಟಿ ರೂ. ಅಷ್ಟೇ ಪರಿಹಾರ ಬಂದಿತ್ತು. ಅದು ಕೇವಲ 8% ಮಾತ್ರ ಅನುದಾನ, ಆದರೆ ಎನ್‍ಡಿಎ ಸರ್ಕಾರ ಬಂದ ನಂತರ 7000 ಕೋಟಿ ರೂ. ಪ್ರಕೃತಿ ವಿಕೋಪ ಪರಿಹಾರ ಬಂದಿದೆ, ಇದು 38% ಅನುದಾನ ಸಿಕ್ಕಿದೆ ಎಂದು ಅವರು ತಿಳಿಸಿದ್ದಾರೆ.
2023-24ರಲ್ಲಿ ಕರ್ನಾಟಕ ಸರ್ಕಾರ 18 ಸಾವಿರ ಕೋಟಿ ಬರ ಪರಿಹಾರ ಕೇಳಿದೆ, ಇದು ಸರಿನಾ? ತಮಿಳುನಾಡು ಸರ್ಕಾರ ಬಾಯಿಗೆ ಬಂದಷ್ಟು ಬರ ಪರಿಹಾರ ಕೇಳ್ತಿದೆ. ತಮಿಳುನಾಡು 37 ಸಾವಿರ ಕೋಟಿ ರೂ. ಬರ ಪರಿಹಾರ ಕೇಳ್ತಿದೆ ಇದು ಸರಿನಾ? ಅನುದಾನದಲ್ಲಿ ಕೇಂದ್ರ ತಾರತಮ್ಯ ಮಾಡಿಲ್ಲ. ಕರ್ನಾಟಕದ ಜನಕ್ಕೆ ಚೊಂಬು ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ (Congress) ಯಾವಾಗಲೂ ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜಕೀಯ ಮಾಡುತ್ತಾ ಬರುತ್ತಿದೆ. ಬಿಜೆಪಿ ಅವಧಿಯಲ್ಲಿ ಕಾವೇರಿ ರಾಜಕಾರಣ ಇರಲಿಲ್ಲ. ಎರಡೂ ರಾಜ್ಯಗಳ ಜನ ಅಣ್ಣತಮ್ಮಂದಿರ ಹಾಗೆ ಇದ್ದೆವು. ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಕಾವೇರಿ ಸಮಸ್ಯೆ ಶುರು ಮಾಡಿದರು ಎಂದು ಆರೋಪಿಸಿದ್ದಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ (Tejasvi Surya) ಪರ ಜಯನಗರ ವಿಧಾನಸಭಾ ಕ್ಷೇತ್ರ, ಬೈರಸಂದ್ರ, ಸಿದ್ದಾಪುರ, ಲಾಲ್ ಬಾಗ್ ಸುತ್ತಮುತ್ತ ರೋಡ್ ಶೋ ಮೂಲಕ ಪ್ರಚಾರ ನಡೆಸಿದರು. ತಮಿಳು ಮತದಾರರು ಬಿಜೆಪಿಗೆ ಮತ ನೀಡುವಂತೆ ತಮಿಳಿನಲ್ಲಿ ಭಾಷಣ ಮಾಡಿ ಮತ ಯಾಚಿಸಿದರು.
ಈ ವೇಳೆ, ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಜನ ಯಾವಾಗಲೂ ಮೋದಿ ಪರ ಇರ್ತಾರೆ. ಕಳೆದ ಎರಡು ಬಾರಿ ಬಿಜೆಪಿಗೆ ದೊಡ್ಡ ಬೆಂಬಲ ಸಿಕ್ಕಿದೆ. ಈ ಬಾರಿ 28 ಲೋಕಸಭಾ ಕ್ಷೇತ್ರಗಳಲ್ಲಿಯೂ ಗೆಲ್ಲಲಿದ್ದೇವೆ. ಅಲ್ಲದೇ ತಮಿಳುನಾಡಿನಲ್ಲಿ ಕಳೆದ ಸಲಕ್ಕಿಂತ 8% ರಷ್ಟು ಹೆಚ್ಚುವರಿ ಮತಗಳು ನಮಗೆ ಸಿಗಲಿದೆ ಎಂದು ಅವರು ಹೇಳಿದ್ದಾರೆ.