ನವದೆಹಲಿ: ನಿವಾಸದಲ್ಲಿ ಕಂತೆ ಕಂತೆ ನೋಟು ಪತ್ತೆಯಾಗಿ ಸುದ್ದಿಯಲ್ಲಿರುವ ದೆಹಲಿ ಹೈಕೋರ್ಟ್ (Delhi High Court) ನ್ಯಾ. ಯಶವಂತ ವರ್ಮಾ (Justice Yaswant Varma) ಅವರ ಹೆಸರನ್ನು ಪ್ರಕರಣ ಒಂದರಲ್ಲಿ ಸಿಬಿಐ (CBI) ಆರೋಪಿಯನ್ನಾಗಿಸಿ ಎಫ್‌ಐಆರ್ ದಾಖಲು ಮಾಡಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.
ಬ್ಯಾಂಕ್‌ನಿಂದ ಪಡೆದ ಸಾಲವನ್ನು ದುರುಪಯೋಗ ಮಾಡಿಕೊಂಡ ಆರೋಪದ ಅಡಿ ಸಿಂಭಾವೋಲಿ ಶುಗರ್ಸ್ ಕಂಪನಿ ವಿರುದ್ಧ 2018 ರಲ್ಲಿ ಸಿಬಿಐ ಮತ್ತು ಇಡಿ ಎಫ್‌ಐಆರ್ ದಾಖಲಿಸಿತ್ತು. ಅಲಹಾಬಾದ್ ಹೈಕೋರ್ಟ್ ಆದೇಶದ ಮೇರೆಗೆ ಸಿಬಿಐ ಎಫ್‌ಐಆರ್ ದಾಖಲಿಸಿಕೊಂಡಿತ್ತು. ಈ ಕಂಪನಿಯಲ್ಲಿ ಯಶವಂತ ವರ್ಮಾ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿದ್ದರು. ಸಿಬಿಐ ವರ್ಮಾ ಅವರನ್ನು 10ನೇ ಆರೋಪಿಯನ್ನಾಗಿ ಉಲ್ಲೇಖಿಸಿತ್ತು. ಕ್ರಿಮಿನಲ್ ದುರ್ನಡತೆ, ವಂಚನೆ ಮತ್ತು ಕ್ರಿಮಿನಲ್ ಪಿತೂರಿ ಅಡಿ ಎಫ್‌ಐಆರ್ ದಾಖಲಾಗಿತ್ತು.
ಯಶವಂತ ವರ್ಮಾ ಅವರು 2014 ರಲ್ಲಿ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಬಡ್ತಿ ಪಡೆಯುವ ಮೊದಲು ಕಂಪನಿಯ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿದ್ದರು. ಸಿಬಿಐ ತನಿಖೆಗೆ ಆದೇಶಿಸಿದ್ದ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಕಳೆದ ವರ್ಷ ರದ್ದುಗೊಳಿಸಿತ್ತು. ಇದನ್ನೂ ಓದಿ: ದೆಹಲಿ ಹೈಕೋರ್ಟ್ ಜಡ್ಜ್ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ – ವರ್ಗಾವಣೆ ಕ್ರಮದ ಭಾಗವಲ್ಲ ಎಂದ ಸುಪ್ರೀಂ
ಎಫ್‌ಐಆರ್ ದಾಖಲಾದ ಸ್ವಲ್ಪ ಸಮಯದ ನಂತರ ಸಿಬಿಐ ವರ್ಮಾ ಅವರ ಹೆಸರನ್ನು ಎಫ್‌ಐಆರ್‌ನಿಂದ ತೆಗೆದುಹಾಕಿತ್ತು. ಈ ವಿಚಾರವನ್ನು ಕೋರ್ಟ್ ಗಮನಕ್ಕೆ ತಂದಿತ್ತು. ಇದನ್ನೂ ಓದಿ: ದೆಹಲಿ ಹೈಕೋರ್ಟ್ ಜಡ್ಜ್ ಮನೆಗೆ ಬೆಂಕಿ – ನಂದಿಸಲು ಹೋದಾಗ ಸಿಕ್ಕಿದ್ದು ಕಂತೆ ಕಂತೆ ನೋಟು
ಎಫ್‌ಐಆರ್ ದಾಖಲಾಗಿದ್ದು ಯಾಕೆ?
ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ನಿಂದ ಸಿಂಭಾವೋಲಿ ಶುಗರ್ಸ್ ರೈತರ ಕೃಷಿ ಉಪಕರಣಗಳು ಮತ್ತು ಇತರ ಅಗತ್ಯಗಳಿಗಾಗಿ ಸಾಲವನ್ನು ಪಡೆದುಕೊಂಡಿತ್ತು. ಈ ಸಾಲವನ್ನು ಕಂಪನಿ ಬೇರೆ ಉದ್ದೇಶಗಳಿಗೆ ಬಳಕೆ ಮಾಡಿದ ಆರೋಪ ಕೇಳಿ ಬಂದಿತ್ತು. ಕ್ರಿಮಿನಲ್ ನಂಬಿಕೆ ಉಲ್ಲಂಘನೆಯ ಕಾರಣಕ್ಕಾಗಿ 97.85 ಕೋಟಿ ರೂ.ಹಣವನ್ನು ವಂಚನೆ ಮಾಡಲಾಗಿದೆ ಎಂದು ಬ್ಯಾಂಕ್ ಘೋಷಿಸಿ 2015 ರಲ್ಲಿ ಆರ್‌ಬಿಐಗೆ ವರದಿ ನೀಡಿತ್ತು.
ಯಾವುದೇ ತನಿಖೆ ಅಗತ್ಯವಿಲ್ಲದ ಕಾರಣ ಈ ವಿಷಯದಲ್ಲಿ ಸಿಬಿಐ ತನಿಖೆಗೆ ಆದೇಶಿಸುವಲ್ಲಿ ಹೈಕೋರ್ಟ್ ತಪ್ಪು ಮಾಡಿದೆ ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷ ಹೇಳಿತ್ತು.