ಮುಂಬೈ: ನಿವೃತ್ತಿ ದಿನದಂದೇ ಲಂಚ ತೆಗೆದುಕೊಳ್ಳುತ್ತಿದ್ದ ಸರ್ಕಾರಿ ಲೆಕ್ಕ ಪರಿಶೋಧಕನನ್ನು ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ರೆಡ್‍ಹ್ಯಾಂಡ್ ಆಗಿ ಹಿಡಿದು ಬಂಧಿಸಿರುವ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆದಿದೆ.
58 ವರ್ಷದ ಸದಾಶಿವ ದ್ಯಾಂದೋಹಿಯವರು ಬಂಧಿತ ನೌಕರ. ಕೊಲ್ಲಾಪುರದ ಉಪ ಅರಣ್ಯ ಸಂರಕ್ಷಣಾ ಇಲಾಖೆಯಲ್ಲಿ ಲೆಕ್ಕ ಪರಿಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದ ಈತ ಪ್ರಮಾಣಪತ್ರ ನೀಡುವ ಕುರಿತು ವ್ಯಕ್ತಿಯೊಬ್ಬರಿಗೆ 2 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದ. ಈತನ ಬೇಡಿಕೆಯ ವಿರುದ್ಧ ವ್ಯಕ್ತಿಯು ಕೊಲ್ಲಾಪುರ ವಿಭಾಗದ ಭ್ರಷ್ಟಾಚಾರ ನಿಗ್ರಹಕ್ಕೆ ದೂರು ನೀಡಿದ್ದರು. ದೂರು ಹಿನ್ನೆಲೆಯಲ್ಲಿ ಅಧಿಕಾರಿಗಳು ಬಲೆ ಬೀಸಿ 1500 ರೂಪಾಯಿ ಲಂಚ ಪಡೆಯುತ್ತಿರುವಾಗ ಬಂಧಿಸಿದ್ದಾರೆ.
Advertisement
ಶುಕ್ರವಾರ ಸದಾಶಿವ್ ವೃತ್ತಿಯ ಕೊನೆಯ ದಿನ ಆಗಿತ್ತು. ನಿವೃತ್ತಿಯ ಕೇವಲ 2 ಗಂಟೆ ಮುಂಚೆ ಲಂಚ ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹ ಪಡೆಯ ಅಧಿಕಾರಿಗಳ ಬಲೆಗೆ ಬಿದ್ದು ಬಂಧಿತನಾಗಿದ್ದಾನೆ.