ಗಾಂಧಿನಗರ: 28 ವರ್ಷದ ನಿವಾಸಿ ವೈದ್ಯನೊಬ್ಬ ಕರ್ತವ್ಯದಲ್ಲಿದ್ದಾಗ ತನ್ನ ಕಿರಿಯ ಸಹೋದ್ಯೋಗಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಗುಜರಾತಿನ ರಾಜ್‍ಕೋಟ್ ನಲ್ಲಿ ನಡೆದಿದೆ.
ಈ ಘಟನೆ ಆಗಸ್ಟ್ ನಲ್ಲಿ ಗುಜರಾತಿನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈಗ ಸಂತ್ರಸ್ತೆ ದೂರು ದಾಖಲಿಸಿದ ಬಳಿಕ ಆರೋಪಿ ಸಚಿನ್ ಸಂತೋಷ್ ಕುಮಾರ್ ಸಿಂಗ್ ನನ್ನು ಬಂಧಿಸಲಾಗಿದೆ. ಸಂತ್ರಸ್ತೆ ಆರೋಪಿ ಬೆದರಿಕೆ ಒಡ್ಡಿದ್ದರಿಂದ ಇಷ್ಟು ದಿನ ದೂರು ದಾಖಲಿಸಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಸಂತ್ರಸ್ತೆ ಮತ್ತು ಆರೋಪಿ ಇಬ್ಬರು ಪಂಡಿತ್ ದೀನ್ ದಯಾಲ್ ಉಪಾಧ್ಯಾಯ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ಅಹಮದಾಬಾದಿನಲ್ಲಿ ವಾಸಿಸುತ್ತಿದ್ದರು. ಆರೋಪಿ ಸಿಂಗ್ ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯವನಾಗಿದ್ದು, ಅಹಮದಾಬಾದಿನಲ್ಲಿ ನೆಲಸಿದ್ದನು ಎಂದು ಜಿಲ್ಲಾ ಪೊಲೀಸ್ ಆಯುಕ್ತ ಮನೋಹರ್ಸಿನ್ಹ್ ಜಡೆಜಾ ಅವರು ಹೇಳಿದ್ದಾರೆ.
ಏನಿದು ಪ್ರಕರಣ?
ಆಗಸ್ಟ್ 31 ರಂದು ಇಬ್ಬರು ರಾತ್ರಿಯ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಆರೋಪಿ ಸಿಂಗ್ ಆಸ್ಪತ್ರೆಯ ಐದನೇ ಮಹಡಿಗೆ ವೈದ್ಯರು ವಿಶ್ರಾಂತಿ ಪಡೆಯುವ ರೂಮಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರ ಎಸಗಿದ್ದಲ್ಲದೇ ಈ ಬಗ್ಗೆ ಯಾರಿಗೂ ಹೇಳಬಾರದು ಎಂದು ಬೆದರಿಕೆ ಕೂಡ ಒಡ್ಡಿದ್ದನು. ಆದ್ದರಿಂದ ಸಂತ್ರಸ್ತೆ ಸಮಾಜಕ್ಕೆ ಹೆದರಿ ಈ ಬಗ್ಗೆ ಎಲ್ಲೂ ತಿಳಿಸಲಿಲ್ಲ.
ಪೊಲೀಸ್ ಕಮಿಷನರ್ ಬಳಿ ಸಂತ್ರಸ್ತೆ ತಂದೆ ಈ ಬಗ್ಗೆ ಹೇಳಿದ್ದಾರೆ. ಆದರೆ ಮೊದಲು ಅವರು ದೂರು ಕೊಡಲು ನಿರಾಕರಿಸಿದ್ದಾರೆ. ಬಳಿಕ ಅವರಿಬ್ಬರಿಗು ಮನವರಿಕೆ ಮಾಡಿಕೊಟ್ಟ ನಂತರ ಪ್ರದ್ಯುಮ್ನನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಅಹಮದಾಬಾದಿನಲ್ಲಿದ್ದ ಅವನ ಮನೆಯಲ್ಲಿಯೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಡೆಜಾ ಅವರು ತಿಳಿಸಿದ್ದಾರೆ.
ಸದ್ಯಕ್ಕೆ ಪೊಲೀಸರು ಆರೋಪಿಯನ್ನು ಬಂಧಿಸಿ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಿದ್ದು, ವರದಿಗಳಿಗಾಗಿ ಕಾಯುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv