ನವದೆಹಲಿ: ವಕ್ಫ್ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕ ಪಾಲ್ (Jagdambika Pal) ಅವರು ನ.7 ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ.
ಕರ್ನಾಟಕದಲ್ಲಿ ವಕ್ಫ್ ವಿವಾದ ಜೋರಾಗಿದೆ. ಇದರ ಬೆನ್ನಲ್ಲೇ ಜಗದಾಂಬಿಕ ಪಾಲ್ ಅವರು ಹುಬ್ಬಳ್ಳಿ ಭೇಟಿ ನೀಡುತ್ತಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಇತ್ತೀಚೆಗೆ ಪತ್ರ ಬರೆದಿದ್ದರು. ರೈತರ ಅಹವಾಲು ಆಲಿಸಲು, ರೈತರನ್ನು ವಕ್ಫ್ ನಿಯಮಗಳ ತಿದ್ದುಪಡಿಗೆ ಸಾಕ್ಷ್ಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು.
ಅಂದು ವಕ್ಫ್ ಬೋರ್ಡ್‌ನಿಂದ ಸಮಸ್ಯೆಗೆ ಒಳಗಾದ ರೈತರು, ಮಠ, ದೇವಸ್ಥಾನಗಳ ಪ್ರಮುಖರ ಜೊತೆ ಜೆಪಿಸಿ ಅಧ್ಯಕ್ಷ ಪಾಲ್ ಅವರು ಸಭೆ ನಡೆಸಿದ್ದರು.
ಅತಿಕ್ರಮಣವನ್ನು ತೆರವುಗೊಳಿಸಬೇಕು ಎಂದು ವಿಜಯಪುರ ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿದಾಗಿನಿಂದ ರಾಜ್ಯದಲ್ಲಿ ವಿವಾದ ಹುಟ್ಟುಕೊಂಡಿದೆ. ಇದೇ ರೀತಿ ಕರ್ನಾಟಕದ ಕೆಲವು ಭಾಗಗಳಲ್ಲಿ ಜಾಗ ತಮ್ಮದೆಂದು ವಕ್ಫ್ ಬೋರ್ಡ್ ನೋಟಿಸ್ ಹೊರಡಿಸಿದೆ. ಇದನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸಿತು.
ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಕಾಂಗ್ರೆಸ್ ಸರ್ಕಾರ ವಕ್ಫ್ ಬೋರ್ಡ್ ಹೊರಡಿಸಿದ್ದ ನೋಟಿಸ್ ಹಿಂಪಡೆಯಲು ನಿರ್ಧರಿಸಿದೆ.