ಬೆಂಗಳೂರು: ಇಂದು ವಿಧಾನಮಂಡಲದ ಅಧಿವೇಶನ ಆರಂಭವಾಗಲಿದೆ. ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಈ ನಡುವೆ ಅಧಿವೇಶನದಲ್ಲಿ ರಾಜ್ಯದಲ್ಲಿ ನಡೆದಿರುವ ಐಟಿ ದಾಳಿ ಬಗ್ಗೆ, ಬರ ನಿರ್ವಹಣೆಯ ಬಗ್ಗೆ ಚರ್ಚೆ ಕಾವೇರುವ ಸಾಧ್ಯತೆ ಇದೆ.
ವರ್ಷದ ಕೊನೆಯಿಂದಲೇ ಚುನಾವಣಾ ಜ್ವರ ಆರಂಭವಾಗಲಿದ್ದು, ಈ ದೃಷ್ಟಿಯಲ್ಲಿ ಸರ್ಕಾರದ ಯೋಜನೆ, ನೀಲಿ ನಕ್ಷೆ ಏನು ಅನ್ನೋದು ರಾಜ್ಯಪಾಲರ ಭಾಷಣದಲ್ಲಿ ಅಡಕವಾಗಿರುತ್ತೆ. ಬೆಳಿಗ್ಗೆ 11 ಗಂಟೆಗೆ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲ ವಜು ಭಾಯಿ ವಾಲಾ ಭಾಷಣ ಮಾಡಲಿದ್ದಾರೆ. ನಂತರ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ನಡೆಯಲಿದ್ದು, ನಾಳೆಯಿಂದ ಶುಕ್ರವಾರದವರೆಗೆ ಕಲಾಪಗಳು ನಡೆಯಲಿವೆ.
Advertisement
ಸರ್ಕಾರದ ವಿರುದ್ಧ `ಐಟಿ’ ಅಸ್ತ್ರ!: ರಾಜ್ಯದಲ್ಲಿ ನಡೆದಿರುವ ಐಟಿ ದಾಳಿ ಬಗ್ಗೆ ಕಲಾಪದಲ್ಲಿ ಬಿಸಿ ಬಿಸಿ ಚರ್ಚೆ ನಡೆಯಲಿದೆ. ಸಚಿವ ರಮೇಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಮನೆ ಮೇಲಿನ ಐಟಿ ದಾಳಿಯನ್ನು ವಿಪಕ್ಷಗಳು ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಸಲಿವೆ. ಇದರ ಜೊತೆಗೆ ಬರಗಾಲದ ನಿರ್ವಹಣೆ, ಕಾನೂನು ಸುವ್ಯವಸ್ಥೆ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು, ಕಪ್ಪತಗುಡ್ಡ ವಿವಾದ ಕೂಡ ಪ್ರತಿಧ್ವನಿಸಲಿದೆ.
Advertisement
ಇದರೊಂದಿಗೆ ಪ್ರಶ್ನೆಪತ್ರಿಕೆ ಸೋರಿಕೆ ತಡೆಗಟ್ಟಲು ತಿದ್ದುಪಡಿ ವಿಧೇಯಕ ಮಂಡಿಸಲು ಸರ್ಕಾರ ಚಿಂತನೆ ನಡೆಸಿದೆ. ಇನ್ನು ಕಲಾಪದ ಮಧ್ಯೆ ಎಸ್‍ಎಂ ಕೃಷ್ಣ ರಾಜೀನಾಮೆ ಸೇರಿದಂತೆ ಪ್ರಸಕ್ತ ರಾಜಕೀಯ ಬೆಳವಣಿಗಗಳೂ ಚರ್ಚೆಗೆ ಬರಲಿವೆ. ಈ ನಡುವೆ ಕೇವಲ 5 ದಿನ ಅಧಿವೇಶನ ನಡೆಸುತ್ತಿರುವುದಕ್ಕೆ ವಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ.