ಶಿವಮೊಗ್ಗ: ಜಿಲ್ಲೆಯ (Shivamogga) ಜೋಗ ಜಲಪಾತ (Jog Falls) ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮ ತಾಣ ಆಗಬೇಕು ಎಂದು ಸಂಸದ ಬಿ.ವೈ ರಾಘವೇಂದ್ರ (B.Y Raghavendra) ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲೆನಾಡಿನ ಪ್ರಕೃತಿ ಕೊಟ್ಟ ಪ್ರವಾಸೋದ್ಯಮ ಸ್ಥಳ ಜೋಗ ಜಲಪಾತ. ಇಲ್ಲಿ ಪ್ರವಾಸಿಗರಿಗಾಗಿ ಹೋಟೆಲ್ ನಿರ್ಮಾಣಕ್ಕೆ ಅನುಮತಿ ಸಿಕ್ಕಿದೆ. ಆದರೆ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಅಭಿವೃದ್ದಿ ಬಗ್ಗೆ ಅನೇಕ ಸರ್ಕಾರಗಳು ಭಾಷಣ ಮಾಡಿಕೊಂಡು ಬರುತ್ತಿವೆ. ಜೋಗ ಅಭಿವೃದ್ದಿಗೆ ಯಡಿಯೂರಪ್ಪ ಸಾಕಷ್ಟು ಅನುದಾನ ಕೊಟ್ಟು, ಸಾಕಷ್ಟು ಅಭಿವೃದ್ಧಿಯಾಗುತ್ತಿದೆ. ಹೋಟೆಲ್ ನಿರ್ಮಾಣ ಮಾಡಲು ಅನುಮತಿ ಸಿಕ್ಕಿದೆ. ಹೊರಗಡೆಯಿಂದ ಬರುವ ಪ್ರವಾಸಿಗರಿಗೆ ಹೋಟೆಲ್ ಅವಶ್ಯಕತೆ ಇತ್ತು. ಆದಷ್ಟು ಬೇಗ ಕಾಮಗಾರಿ ಮುಗಿಯಬೇಕು. ಶಿವಮೊಗ್ಗ ಸಮಗ್ರ ಪ್ರವಾಸಿ ತಾಣವಾಗಬೇಕು ಎಂದಿದ್ದಾರೆ.
ಪ್ರವಾಸಿಗರು ಬಂದಾಗ ಎಲ್ಲಾ ರೀತಿಯ ಸೌಲಭ್ಯಗಳು ಇಲ್ಲಿ ಸಿಗಬೇಕು. ನೋವಿನ ಸಂಗತಿ ಎಂದರೆ ಪ್ರವಾಸೋದ್ಯಮ ಇಲಾಖೆ ಸಕ್ರೆಬೈಲು ಅಭಿವೃದ್ಧಿಯ 60 ಕೋಟಿ ರೂ. ಹಣ ವಾಪಸ್ ಪಡೆದಿದೆ. ಜೋಗದ ಅಭಿವೃದ್ದಿಗೆ 180 ಕೋಟಿ ರೂ. ಹಣ ಹಿಂದಿನ ಸರ್ಕಾರ ಬಿಡುಗಡೆ ಮಾಡಿತ್ತು. ಈಗ ಕೇವಲ 80 ಕೋಟಿ ರೂ. ಮಾತ್ರ ಹಣ ಬಿಡುಗಡೆ ಮಾಡಿದ್ದಾರೆ. 100 ಕೋಟಿ ರೂ. ಬಿಡುಗಡೆ ಆಗಬೇಕಿದೆ. ಅಲ್ಲಮಪ್ರಭು ಜನ್ಮಸ್ಥಳ, ಚಂದ್ರಗುತ್ತಿ ಅಭಿವೃದ್ಧಿ ಹಣ ಹಿಂಪಡೆದಿದ್ದಾರೆ. ಪ್ರವಾಸೋದ್ಯಮ ಸಚಿವರಿಗೆ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡುತ್ತೇನೆ ಎಂದಿದ್ದಾರೆ.
ಕಳಸವಳ್ಳಿ – ಸಿಗಂದೂರು ಸೇತುವೆ ಆಗುತ್ತಿದೆ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಈಗ ನಷ್ಟ ಆಗಬಹುದು ಆದರೆ ಮುಂದೆ ಲಾಭ ಬರುತ್ತದೆ. ವಿಮಾನ ನಿಲ್ದಾಣದಿಂದ ಹೆಚ್ಚಿನ ವಿಮಾನ ಹಾರಾಟ ಮಾಡುತ್ತಿವೆ. ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಿದರೆ 2-3 ವರ್ಷದಲ್ಲೇ ಸರ್ಕಾರಕ್ಕೆ ಹಣ ವಾಪಸ್ ಬರಲಿದೆ ಎಂದಿದ್ದಾರೆ.