ಅಮೆರಿಕನ್ ಬ್ಯಾಂಕ್ ದಿವಾಳಿ – ಮಾಧ್ಯಮಗಳ ಪ್ರಶ್ನೆ ನಿರ್ಲಕ್ಷಿಸಿ ಹೊರನಡೆದ ಬೈಡನ್

Public TV
2 Min Read
Joe Biden

ವಾಷಿಂಗ್ಟನ್: ಅಮೆರಿಕದಲ್ಲಿ (America) ಬ್ಯಾಂಕ್‌ಗಳು ದಿವಾಳಿಯಾಗುತ್ತಿರುವ (Bankrupt) ಹಿನ್ನೆಲೆ ಅಧ್ಯಕ್ಷ ಜೋ ಬೈಡನ್‌ಗೆ (Joe Biden) ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರು ಈ ಕುರಿತು ಪ್ರಶ್ನೆಯನ್ನು ಕೇಳಿದ್ದರು. ಆದರೆ ಯುಎಸ್ ಅಧ್ಯಕ್ಷ ಅವರ ಪ್ರಶ್ನೆಗಳನ್ನು ನಿರ್ಲಕ್ಷಿಸಿ ಹೊರನಡೆದಿದ್ದಾರೆ. ಇದರಿಂದ ಬೈಡನ್ ಭಾರೀ ಟೀಕೆಗೆ ಗುರಿಯಾಗಿದ್ದಾರೆ.

ಬೈಡನ್ ಸುದ್ದಿಗೋಷ್ಠಿಯಲ್ಲಿ ಕೊನೆಯದಾಗಿ ಚೇತರಿಸಿಕೊಳ್ಳುವ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಿರ್ವಹಿಸುವುದು ಹಾಗೂ ನಮ್ಮ ಐತಿಹಾಸಿಕ ಚೇತರಿಕೆಯನ್ನು ರಕ್ಷಿಸುವಲ್ಲಿ ಕೆಲಸ ಮಾಡುವುದಾಗಿ ತಿಳಿಸಿ ಮಾತನ್ನು ಮುಗಿಸಿದ್ದಾರೆ. ಈ ವೇಳೆ ವರದಿಗಾರರೊಬ್ಬರು, ಬ್ಯಾಂಕ್‌ಗಳು ಏಕೆ ದಿವಾಳಿಯಾಗುತ್ತಿದೆ? ನೀವು ಇನ್ನು ಮುಂದೆ ಈ ರೀತಿ ಬ್ಯಾಂಕ್‌ಗಳು ದಿವಾಳಿಯಾಗುವುದಿಲ್ಲ ಎಂದು ಅಮೆರಿಕನ್ನರಿಗೆ ಭರವಸೆ ನೀಡಬಹುದೇ ಎಂದು ಪ್ರಶ್ನಿಸಿದ್ದಾರೆ.

joe biden 1

ಅಮೆರಿಕ ಅಧ್ಯಕ್ಷ ವರದಿಗಾರರ ಪ್ರಶ್ನೆಗೆ ಉತ್ತರಿಸದೇ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದೇ ವೇಳೆ ಮತ್ತೊಬ್ಬ ವರದಿಗಾರರು ಈಗಾಗಲೇ ದಿವಾಳಿಯಾಗಿರುವ ಬ್ಯಾಂಕುಗಳಂತೆ ಇತರ ಬ್ಯಾಂಕುಗಳ ಸ್ಥಿತಿಯೂ ಆಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಆದರೆ ಬೈಡನ್ ವರದಿಗಾರರೆಡೆ ಕಣ್ಣು ಹಾಯಿಸದೇ ಸುದ್ದಿಗೋಷ್ಠಿ ನಡೆಯುತ್ತಿದ್ದ ಕೊಠಡಿಯನ್ನು ತೊರೆದಿದ್ದಾರೆ. ಇದನ್ನೂ ಓದಿ: Bengaluru Mysuru Expressway- ಟೋಲ್ ಸಂಗ್ರಹ ಪ್ರಾರಂಭವಾದ ಮೊದಲ ದಿನವೇ ತಾಂತ್ರಿಕ ದೋಷ

ಇದೀಗ ಬೈಡನ್ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸದೇ ಅಲ್ಲಿಂದ ಜಾಗ ಖಾಲಿ ಮಾಡಿರುವ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಅಮೆರಿಕದಲ್ಲಿ ಬ್ಯಾಂಕುಗಳು ದಿವಾಳಿಯಾಗುತ್ತಿರುವ ಬಗ್ಗೆ ಅಧ್ಯಕ್ಷರು ಜನರಿಗೆ ಯಾವುದೇ ರೀತಿಯ ಭರವಸೆ ನೀಡುತ್ತಿಲ್ಲ ಎಂದು ಟೀಕಿಸಿದ್ದಾರೆ.

ಕಳೆದ ವಾರ ಸಿಲಿನಾನ್ ವ್ಯಾಲಿ ಬ್ಯಾಂಕ್ (Silicon Valley Bank) ದಿವಾಳಿಯಾದ ಬೆನ್ನಲ್ಲೇ ಅಮೆರಿಕದ ಅಧಿಕಾರಿಗಳು ಮತ್ತೊಂದು ಟೆಕ್ ಸ್ನೇಹಿ ಸಿಗ್ನೇಚರ್ ಬ್ಯಾಂಕ್ ಅನ್ನು ಮುಚ್ಚಿದ್ದಾರೆ. ಬ್ಯಾಂಕ್‌ಗಳ ಠೇವಣಿದಾರರು ಹಾಗೂ ಹೂಡಿಕೆದಾರರು ಬೃಹತ್ ಮೊತ್ತದ ಹಣವನ್ನು ಹಿಂಪಡೆದಿರುವ ಪರಿಣಾಮವಾಗಿ ಬ್ಯಾಂಕ್‌ನ ನಗದು ವ್ಯವಹಾರದಲ್ಲಿ ಕೊರತೆ ಕಂಡುಬಂದಿದೆ. ಈ ಹಿನ್ನೆಲೆ ಈ ಬ್ಯಾಂಕ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಿಗೆ ಫುಲ್ ಡಿಮ್ಯಾಂಡ್: ಹಿಂದೆ ಎಷ್ಟಿತ್ತು? ಈಗ ಎಷ್ಟು ಹೆಚ್ಚಾಗಿದೆ?

Share This Article