ಬೆಂಗಳೂರು: ಸುಪ್ರೀಂಕೋರ್ಟ್ ಇತ್ತೀಚೆಗೆ ಮೀಸಲಾತಿ ಕುರಿತು ನೀಡಿದ ತೀರ್ಪು ಆಘಾತಕಾರಿ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಪ್ರತಿಪಾದಿಸಿದ್ದಾರೆ. ಮೀಸಲಾತಿ ಕುರಿತು ಇತ್ತೀಚೆಗೆ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠದ ತೀರ್ಪು ವಿಚಾರವಾಗಿ ಮಲ್ಲಿಕಾರ್ಜುನ ಖರ್ಗೆಯವರು ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿದರು. ಉದ್ಯೋಗದಲ್ಲಿ ಮೀಸಲಾತಿ ಕೊಡುವ ವಿಚಾರ ರಾಜ್ಯಗಳಿಗೆ ಬಿಟ್ಟಿದ್ದು, ಮೀಸಲಾತಿ ಪರಿಶಿಷ್ಟ ಸಮುದಾಯಗಳ ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ಕೊಟ್ಟಿದೆ. ಸುಪ್ರೀಂಕೋರ್ಟ್ ನ ಈ ತೀರ್ಪು ಆಘಾತ ತಂದಿದ್ದು, ತೀರ್ಪನ್ನು ವೈಯಕ್ತಿಕವಾಗಿ ಖಂಡಿಸುತ್ತೇನೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
Advertisement
ಮುಂದುವರೆದು ಮಾತಾಡಿದ ಮಲ್ಲಿಕಾರ್ಜುನ ಖರ್ಗೆ, ಇಡೀ ರಾಷ್ಟ್ರದಲ್ಲಿ ತಲ್ಲಣಗೊಳಿಸುವ ತೀರ್ಪು ಸುಪ್ರೀಂಕೋರ್ಟ್ ನಿಂದ ಬಂದಿದೆ. ಈ ತೀರ್ಪಿನ ಹಿನ್ನೆಲೆಯಲ್ಲಿ ದೇಶದಲ್ಲಿ ತಪ್ಪು ದಾರಿಗೆ ಕೆಲವರು ಇಳಿಯುವ ಆತಂಕವಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇಂತಹ ತೀರ್ಪುಗಳು ಬರಲು ಸರ್ಕಾರಗಳ ಕುಮ್ಮಕ್ಕು ಕಾರಣ. ಈ ತೀರ್ಪಿಗೆ ಉತ್ತರಾಖಂಡ ಸರ್ಕಾರವೇ ಕಾರಣ. ಸರ್ಕಾರ ಆಗಲೇ ವಾದ ಮಾಡಬೇಕಿತ್ತು. ಈಗ ಬಿಜೆಪಿ ಆಡಳಿತವಿರುವ ಉತ್ತರಪ್ರದೇಶ ಸರ್ಕಾರ ಕೂಡಾ ಇದನ್ನು ಫಾಲೋ ಮಾಡಲಿದೆ. ಕೇಂದ್ರ ಸರ್ಕಾರ ತುರ್ತಾಗಿ ಮಧ್ಯಪ್ರವೇಶ ಮಾಡುವ ಅಗತ್ಯ ಇದೆ. ತೀರ್ಪು ಕುರಿತು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು.
Advertisement
ಹಲವು ವರ್ಷಗಳ ನಿರಂತರ ಪರಿಶ್ರಮದ ಭಾಗವಾಗಿ ಜಾರಿಯಾದ ಮೀಸಲಾತಿಯನ್ನು ರದ್ದುಗೊಳಿಸಿದರೆ ಇದಕ್ಕಾಗಿ ತ್ಯಾಗ, ಹೋರಾಟ ಮಾಡಿದವರಿಗೆ ಅಪಮಾನ ಎಸಗಿದಂತೆ.
ಹಾಗಾಗಿ ಮೀಸಲಾತಿ ರದ್ದುಗೊಳಿಸಿದರೆ ಸಂಸತ್ತಿನ ಒಳಗೂ, ಹೊರಗೂ ಹೋರಾಟ ಮಾಡುತ್ತೇವೆ.
ಸಾಮಾಜಿಕ ನ್ಯಾಯದ ಪರವಾಗಿ ದೇಶದಾದ್ಯಂತ ಬೀದಿಗಿಳಿದು ಪ್ರತಿಭಟನೆಗಳನ್ನು ನಡೆಸಲಾಗುವುದು.
– @kharge pic.twitter.com/zuu9QIgJ6l
— Karnataka Congress (@INCKarnataka) February 9, 2020
Advertisement
Advertisement
ಪರಿಶಿಷ್ಟರ ಹಕ್ಕುಗಳನ್ನು ಮೊಟಕು ಮಾಡುವ ಪ್ರಯತ್ನಗಳು ನಡೀತಿವೆ. ಬಿಜೆಪಿ ಸರ್ಕಾರಗಳು ಇರುವ ಕಡೆ ಇಂಥ ಪ್ರಯತ್ನ ನಡೀತಿವೆ. ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಟ್ಟು ಗೊಂದಲ ಸೃಷ್ಟಿಸ್ತಿದ್ದಾರೆ. ಮೀಸಲಾತಿ ರದ್ದು, ಸಂವಿಧಾನ ಬದಲು ಮಾಡುವ ಪ್ರಯತ್ನಕ್ಕೆ ಬಿಜೆಪಿ ಮೊದಲಿಂದಲೂ ಕೈ ಹಾಕಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪ ಮಾಡಿದರು.
ಎಸ್.ಸಿ, ಎಸ್.ಟಿ, ಹಿಂದುಳಿದ ವರ್ಗಗಳಿಗೆ ನೀಡುವ ಮೀಸಲಾತಿಯ ಅವಕಾಶವನ್ನೇ ತೆಗೆದು ಹಾಕುವ ವ್ಯವಸ್ಥಿತ ಹುನ್ನಾರ ದೇಶದಲ್ಲಿ ನಡೆದಿದೆ.
ಆರ್.ಎಸ್.ಎಸ್ ನಾಯಕರು ಇದಕ್ಕೆ ಪೂರಕವಾದ ಹೇಳಿಕೆಗಳನ್ನು ನೀಡಿದ್ದಾರೆ.
ಸಂವಿಧಾನ ತೆಗೆಯುವ, ಮೀಸಲಾತಿ ನಿಲ್ಲಿಸುವ ಪ್ರಯತ್ನವನ್ನು ಕೋರ್ಟ್
ತೀರ್ಪುಗಳ ಮೂಲಕ ನೆರವೇರಿಸಿ ಕೊಳ್ಳುತ್ತಿದ್ದಾರೆ.
– @kharge pic.twitter.com/YmpjqoO9Ou
— Karnataka Congress (@INCKarnataka) February 9, 2020
ಕಾಂಗ್ರೆಸ್ ನಿಂದ ಹೋರಾಟದ ಎಚ್ಚರಿಕೆ: ಪರಿಶಿಷ್ಟ ಸಮುದಾಯದವರಿಗೆ ಮೀಸಲಾತಿ ಮೂಲಭೂತ ಹಕ್ಕೇ ಇಲ್ಲ ಅಂದ್ರೆ ಹೇಗೆ? ನಿಮಗೆ ಮೀಸಲಾತಿ ಮೂಲಭೂತ ಹಕ್ಕೇ ಅಲ್ಲ ಅಂದ್ರೆ ಪರಿಶಿಷ್ಟರು ಎಲ್ಲಿಗೆ ಹೋಗಬೇಕು? 70 ವರ್ಷಗಳಿಂದ ನಡೆದು ಬಂದಿರುವ ಮೀಸಲಾತಿಗೆ ಕೊಡಲಿ ಪೆಟ್ಟು ಕೊಡೋದು ಸರಿಯಲ್ಲ. ಮೀಸಲಾತಿ ರದ್ದು ಪ್ರಯತ್ನಗಳ ವಿರುದ್ಧ ಸಂಸತ್ ನಲ್ಲೂ ಸಂಸತ್ ನ ಹೊರಗೂ ಹೋರಾಟ ಮಾಡ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಂಸದ ಚಂದ್ರಪ್ಪ, ಕಾಂಗ್ರೆಸ್ ಮುಖಂಡ ವಿ.ಆರ್.ಸುದರ್ಶನ್ ಸೇರಿ ಮತ್ತಿತರು ಭಾಗವಹಿಸಿದ್ದರು.