J&K Election | ಇಂಡಿಯಾ ಒಕ್ಕೂಟದ ಸೀಟು ಹಂಚಿಕೆ ಒಪ್ಪಂದ ಸುಖಾಂತ್ಯ – ಎನ್‌ಸಿ 51, ಕಾಂಗ್ರೆಸ್‌ 32 ಸ್ಥಾನಗಳಲ್ಲಿ ಸ್ಪರ್ಧೆ

Public TV
3 Min Read
National Conference

ಶ್ರೀನಗರ: ಮುಂಬರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ (Jammu And Kashmir Assembly Poll) ಕಾಂಗ್ರೆಸ್‌ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನಡುವಿನ ಸೀಟು ಹಂಚಿಕೆಯ ಹಗ್ಗಜಗ್ಗಾಟ ಅಂತ್ಯಕಂಡಿದೆ. 90 ಸ್ಥಾನಗಳ ಪೈಕಿ 51 ಕ್ಷೇತ್ರಗಳಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ (National Conference) ಸ್ಪರ್ಧಿಸಲಿದ್ದು, ಕಾಂಗ್ರೆಸ್‌ 32 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ. ಪಕ್ಷಗಳ ಉಭಯ ನಾಯಕರು ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಅಧಿಕೃತವಾಗಿ ಹೇಳಿದ್ದಾರೆ.

ಸೀಟು ಹಂಚಿಕೆ ಒಪ್ಪಂದ ಪ್ರಕಟಿಸುವಾಗ, ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್ (Congress) ಮುಖ್ಯಸ್ಥ ತಾರಿಕ್ ಹಮೀದ್ ಕರ್ರಾ, ಮೈತ್ರಿಕೂಟವು ಕೇಂದ್ರಾಡಳಿತ ಪ್ರದೇಶದ 5 ಸ್ಥಾನಗಳಲ್ಲಿ ಸೌಹಾರ್ದಯುತ ಮತ್ತು ಶಿಸ್ತಿನ ಸ್ಪರ್ಧೆ ಹೊಂದಿರುತ್ತದೆ ಎಂದು ಹೇಳಿದ್ದಾರೆ.

ನ್ಯಾಶನಲ್ ಕಾನ್ಫರೆನ್ಸ್ 51 ಸ್ಥಾನಗಳಲ್ಲಿ, ಕಾಂಗ್ರೆಸ್ 32 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಮತ್ತು ಪ್ಯಾಂಥರ್ಸ್ ಪಾರ್ಟಿಗೆ ತಲಾ 1 ಸ್ಥಾನ ನಿಯೋಜಿಸಿದೆ.

ವಿಪಕ್ಷಗಳ ವಿರುದ್ಧ ವಾಗ್ದಾಳಿ:
ಇನ್ನೂ ಸೀಟು ಹಂಚಿಕೆ ಘೋಷಣೆ ಬಳಿಕ ಕಾಂಗ್ರೆಸ್‌ & ಎನ್‌ಸಿ ನಾಯಕರು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು, ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಶಕ್ತಿಗಳ ವಿರುದ್ಧ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಒಟ್ಟಾಗಿ ಹೋರಾಡಲಿವೆ. ಅದಕ್ಕಾಗಿ ಈ ಅಭಿಯಾನವನ್ನು ಆರಂಭಿಸಿದ್ದೇವೆ. ಕೋಮುವಾದ ಬಯಸುವ ಶಕ್ತಿಗಳನ್ನು ಬಗ್ಗು ಬಡಿಯಲು ಈ ಒಕ್ಕೂಟ ರಚಿಸಿದ್ದೇವೆ ಎಂದು ಗುಡುಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟದ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿರುವ ಕಾಂಗ್ರೆಸ್‌ ನಾಯಕ ಕೆ.ಸಿ ವೇಣುಗೋಪಾಲ್, ಬಿಜೆಪಿಯು ಜಮ್ಮು ಮತ್ತು ಕಾಶ್ಮೀರದ ಆತ್ಮವನ್ನೇ ನಾಶಮಾಡಲು ಪ್ರಯತ್ನಿಸುತ್ತಿದೆ. ಆದ್ರೆ ನಮ್ಮ ಸರ್ಕಾರ ಜನಸ್ನೇಹಿಯಾಗಿರಲಿದೆ. ಒಗ್ಗಟ್ಟಿನಿಂದ ಹೋರಾಡಿ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.

ದಶಕಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಇದಾಗಿದೆ. ಒಟ್ಟು 90 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಸೆ.18, 25, ಹಾಗೂ ಅ.1 ರಂದು ಮೂರು ಹಂತಗಳಲ್ಲಿ ನಡೆಯಲಿದೆ ಮತ್ತು ಅ.4 ರಂದು ಮತ ಎಣಿಕೆ ನಡೆಯಲಿದೆ.

Share This Article