ಮೈಸೂರು: ಈ ಭಾಗದ ಜೆಡಿಎಸ್ ರಾಜಕಾರಣದಲ್ಲಿ ಎಚ್.ಡಿ. ಕುಮಾರಸ್ವಾಮಿ ಮತ್ತು ಎಚ್.ಡಿ. ರೇವಣ್ಣ ಗುಂಪು ಹುಟ್ಟಿಕೊಂಡಿದೆ ಎನ್ನಲಾಗಿದ್ದು, ಅಭ್ಯರ್ಥಿಗಳ ನಡುವೆ ಟಿಕೆಟ್ ಗಾಗಿ ಶೀತಲ ಸಮರ ನಡೆಯುತ್ತಿದೆ ಎಂಬ ಮಾಹಿತಿಗಳು ಲಭ್ಯವಾಗಿದೆ.
ವಿಧಾನಸಭಾ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಎಚ್‍ಡಿ ರೇವಣ್ಣ ಬೆಂಬಲಿಗರಿಗೆ ಟಿಕೆಟ್ ಕೈತಪ್ಪಿದೆ. ಇದ್ರಿಂದ ಮೈಸೂರು ಭಾಗದಲ್ಲಿ ಎಚ್.ಡಿ. ರೇವಣ್ಣ ಹಿಡಿತ ಕಡಿಮೆ ಮಾಡಲು ಎಚ್‍ಡಿ ಕುಮಾರಸ್ವಾಮಿ ಮುಂದಾಗಿದ್ದಾರಾ ಅನ್ನೋ ಪ್ರಶ್ನೆ ಎದುರಾಗಿದೆ.
ಎಚ್.ಡಿ. ರೇವಣ್ಣ ಅಪ್ಪಟ ಬೆಂಬಲಿಗ ಹರೀಶ್ ಗೌಡ ಅವರಿಗೆ ಚಾಮರಾಜ ಕ್ಷೇತ್ರದ ಟಿಕೆಟ್ ನೀಡಲಾಗುತ್ತೆ ಎನ್ನಲಾಗಿತ್ತು. ಅದ್ರೆ ಕುಮಾರಸ್ವಾಮಿ ತಮ್ಮ ಕುಟುಂಬದ ಸದಸ್ಯರಾಗಿರೋ ನಿವೃತ್ತ ಕುಲಪತಿ ರಂಗಪ್ಪಗೆ ಚಾಮರಾಜ ಕ್ಷೇತ್ರದ ಟಿಕೆಟ್ ನೀಡಿದ್ದಾರೆ. ನರಸಿಂಹರಾಜ ಕ್ಷೇತ್ರದಲ್ಲಿ ಕಳೆದ ಬಾರಿ ಕಡಿಮೆ ಅಂತರದಿಂದ ಸೋತಿದ್ದ ಎಚ್.ಡಿ. ರೇವಣ್ಣ ಬೆಂಬಲಿಗ ಸಂದೇಶ್ ಸ್ವಾಮಿಗೆ ಬದಲಾಗಿ ಇತ್ತೀಚೆಗೆ ಜೆಡಿಎಸ್ ಸೇರಿದ್ದ ಮಹಮದ್ ಅಬ್ದುಲ್‍ಗೆ ಟಿಕೆಟ್ ನೀಡಲಾಗಿದೆ.
ಟಿ. ನರಸೀಪುರ ಕ್ಷೇತ್ರದಲ್ಲಿ ಕಳೆದ ಬಾರಿ 250 ಮತಗಳಿಂದ ಸೋತು ಕಳೆದ ವರ್ಷ ನಿಧನರಾಗಿದ್ದ ಸುಂದರೇಶ್ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಿಲ್ಲ. ಚಾಮರಾಜ ಕ್ಷೇತ್ರ ಟಿಕೆಟ್ ವಂಚಿತ ಹರೀಶ್ ಗೌಡ ಈಗಾಗಲೇ ಬಂಡಾಯ ಬಾವುಟ ಹಾರಿಸಿದ್ದಾರೆ. ಇನ್ನು ನರಸಿಂಹರಾಜ ಕ್ಷೇತ್ರದ ಸಂದೇಶ್ ಸ್ವಾಮಿ ಮತ್ತು ಟಿ. ನರಸೀಪುರ ಕ್ಷೇತ್ರದಲ್ಲಿ ಸುಂದರೇಶ್ ಕುಟುಂಬಕ್ಕೆ ಬಿಜೆಪಿ ತಮ್ಮತ್ತ ಸೆಳೆಯುವ ಪ್ರಯತ್ನದಲ್ಲಿದೆ.