ಬೆಂಗಳೂರು: ನನ್ನ ಕುಟುಂಬ ಹಾಗೂ ನನ್ನ ವಿರುದ್ಧ ಷಡ್ಯಂತ್ರ ಮಾಡಿ ತೇಜೋವಧೆ ಮಾಡುವ ದುರುದ್ದೇಶದಿಂದ ಪ್ರಕರಣ ದಾಖಲಿಸಿದ್ದಾರೆ. ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ ಆದಷ್ಟು ಬೇಗ ಹೊರಬರಲಿದೆ ಎಂದು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಹೇಳಿದ್ದಾರೆ.
ಎರಡು ಪ್ರಕರಣದಲ್ಲಿ ಜಾಮೀನು ಸಿಕ್ಕಿದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ (Parappana Agrahara) ಇಂದು ಸೂರಜ್ ರೇವಣ್ಣ (Suraj Revanna) ಬಿಡುಗಡೆಯಾದರು. ಬಿಡುಗಡೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದ ರಾಜಕಾರಣ ಏನಿದೆ ಅದು ನಡೆದೇ ನಡೆಯುತ್ತದೆ. ಸತ್ಯವನ್ನು ಯಾರಿಂದಲೂ ಮುಚ್ಚಿಡಲು ಸಾಧ್ಯವಿಲ್ಲ. ಕುತಂತ್ರ ಮಾಡಿ ನಮ್ಮ ಕುಟುಂಬ ಮುಗಿಸಲು ಹೊರಟಿದ್ದಾರೆ. ಪ್ರತಿಯೊಂದು ವಿಚಾರಕ್ಕೂ ಎರಡು ಮೂರು ದಿನದಲ್ಲಿ ಪತ್ರಿಕಾಗೋಷ್ಠಿ ಕರೆದು ಸ್ಪಷ್ಟೀಕರಣ ಕೊಡುತ್ತೇನೆ ಎಂದಿದ್ದಾರೆ.
ಎಲ್ಲಾ ತನಿಖೆಗೂ ನಾನು ಸಹಕಾರ ಕೊಟ್ಟಿದ್ದೇನೆ. ಕಾನೂನಿನ ಮೇಲೆ ನನಗೆ ವಿಶ್ವಾಸ ಇದೆ. ಹೆದರಿ ಓಡಿ ಹೋಗುವುದಿಲ್ಲ. ಇದು ನನ್ನ ಮೇಲೆ ನಡೆದಿರುವ ಷಡ್ಯಂತ್ರ ಎಂದೇ ಹೇಳ್ತೀನಿ. ಶಿವಕುಮಾರ್ ನನ್ನಕಾರು ಚಾಲಕ ಅಲ್ಲ. ನನಗೆ ಇರುವುದು ಲೋಕೇಶ್ ಒಬ್ಬನೇ ಕಾರು ಚಾಲಕ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಏನಿದು ಪ್ರಕರಣ?
ಅಸಹಜ ಲೈಂಗಿಕ ಪ್ರಕರಣ ಸಂಬಂಧ ಹೊಳೆ ನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 377ರ ಅಡಿ ದಾಖಲಾಗಿದ್ದ ಎಫ್‍ಐಆರ್‍ನಲ್ಲಿ ಸೂರಜ್ ರೇವಣ್ಣ ಅವರನ್ನು ಜೂ.23 ರಂದು ಸಿಐಡಿ ಅರೆಸ್ಟ್ ಮಾಡಿತ್ತು.
ಮೊದಲ ಪ್ರಕರಣದ ಹೊತ್ತಲ್ಲೇ ಸೂರಜ್ ರೇವಣ್ಣ ಕಾರ್ ಚಾಲಕ ಎರಡನೇ ದೂರು ದಾಖಲಿಸಿದ್ದರು. ಆದರೆ ಈ ಪ್ರಕರಣದಲ್ಲಿ ಬಂಧನ ಆಗಿರಲಿಲ್ಲ. ಹೀಗಾಗಿ ವಿಶೇಷ ಜನಪ್ರತಿನಿಧಿಗಳ ಕೋರ್ಟ್ ಜು.22 ರಂದು ಷರತ್ತು ಬದ್ಧ ಜಾಮೀನು ನೀಡಿತ್ತು.