ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ಲೋಕಸಭಾ ಸೀಟ್ ಹಂಚಿಕೆ ವಿಚಾರದಲ್ಲಿ ನಡೆಯುತ್ತಿರುವ ಹಗ್ಗಜಗ್ಗಾಟ ಇತ್ಯರ್ಥಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮುಂದೆ ಈ ವಿಚಾರವನ್ನು ಪ್ರಸ್ತಾಪಿಸುವಂತೆ ಜೆಡಿಎಸ್ ಶಾಸಕರು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನಗರದ ಖಾಸಗಿ ಹೋಟೆಲ್‍ನಲ್ಲಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ಜೆಡಿಎಸ್ ಶಾಸಕಾಂಗ ಸಭೆ (ಜೆಡಿಎಲ್‍ಪಿ) ನಡೆಯಿತು. ಈ ವೇಳೆ ಶಾಸಕರು ಲೋಕಸಭಾ ಕ್ಷೇತ್ರಗಳ ಹಂಚಿಕೆ, ಖಾಲಿ ಇರುವ ಎರಡು ಸಚಿವ ಸ್ಥಾನ ಭರ್ತಿ, ನಿಗಮ ಮಂಡಳಿ ನೇಮಕ, ಪರಿಷತ್ ನಾಮನಿರ್ದೇಶನ, ಸಂಸದೀಯ ಕಾರ್ಯದರ್ಶಿ ಸ್ಥಾನ, ರಾಜಕೀಯ ಕಾರ್ಯದರ್ಶಿ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.
Advertisement
Advertisement
ರಾಜ್ಯ ಕಾಂಗ್ರೆಸ್ ನಾಯಕರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ರಾಜ್ಯದ ಒಟ್ಟು 28 ಕ್ಷೇತ್ರಗಳಲ್ಲಿ 12 ಸೀಟ್‍ಗಳನ್ನು ಜೆಡಿಎಸ್‍ಗೆ ನೀಡುವಂತೆ ರಾಹುಲ್ ಗಾಂಧಿ ಬಳಿಯೇ ಮಾತನಾಡಿ ಅಂತಿಮ ನಿರ್ಧಾರ ಕೈಗೊಳ್ಳಬೇಕು. ಹಾಸನ, ಮಂಡ್ಯ, ಮೈಸೂರು, ಬೆಂಗಳೂರು ಉತ್ತರ, ಕೋಲಾರ, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ ಸೇರಿದಂತೆ ಜೆಡಿಎಸ್ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಸೀಟ್ ನೀಡುವಂತೆ ಒತ್ತಾಯಿಸಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
Advertisement
ನಿಗಮ-ಮಂಡಳಿ ನೇಮಕಾತಿಯೂ ಸಂಕ್ರಾಂತಿ ಬಳಿಕ ನಡೆಯಲಿದ್ದು, ಮಾಜಿ ಶಾಸಕರಿಗೆ ನಿಗಮ-ಮಂಡಳಿ ಬಿಟ್ಟುಕೊಡುವಂತೆ ದೇವೇಗೌಡ ಅವರು ಶಾಸಕರ ಮನವೊಲಿಕೆ ಮಾಡಿದ್ದಾರೆ. ಶಾಸಕರು ತ್ಯಾಗ ಮಾಡಬೇಕು, ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತದೆ. ಆದರೆ ಯಾವುದೇ ರೀತಿಯ ಅಧಿಕಾರ ಸಿಗುವುದಿಲ್ಲ ಎಂದು ಮನವಿ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
Advertisement
ಖಾಲಿ ಇರುವ ಜೆಡಿಎಸ್‍ನ ಎರಡು ಸಚಿವ ಸ್ಥಾನ ಭರ್ತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ದೇವೇಗೌಡ ಅವರು, ಸಂಕ್ರಾಂತಿ ಬಳಿಕ ಸಚಿವರನ್ನು ನೇಮಿಸಲಾಗುತ್ತದೆ. ಯಾರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಕುರಿತು ಮುಂದಿನ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಜೊತೆಗೆ ಶಾಸಕರ ಅಭಿಪ್ರಾಯ ಸಂಗ್ರಹ ಮಾಡಿ ಮಂತ್ರಿ ಸ್ಥಾನ ತುಂಬುತ್ತೇವೆ ಎಂದು ಸಭೆಯಲ್ಲಿ ತಿಳಿಸಿದ್ದಾರೆ.
ಸಭೆಯ ಇನ್‍ಸೈಡ್ ಸುದ್ದಿ:
ಜೆಡಿಎಸ್ ಬಳಿ ಇರುವ ಎರಡು ಸಚಿವ ಸ್ಥಾನಗಳನ್ನ ಸಂಕ್ರಾಂತಿ ಬಳಿಕ ತುಂಬಲು ನಿರ್ಧಾರ. 10 ನಿಗಮ – ಮಂಡಳಿಗಳಲ್ಲಿ 8 ಸ್ಥಾನ ಶಾಸಕರಿಗೆ, ಇಬ್ಬರು ಮಾಜಿ ಶಾಸಕರಿಗೆ ನೀಡಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನಾಲ್ವರಿಗೆ ಸಂಸದೀಯ ಕಾರ್ಯದರ್ಶಿ ಸ್ಥಾನ ನೀಡಲು ಚರ್ಚೆ ನಡೆದಿದ್ದು ಅಂತಿಮವಾಗಿ ಉತ್ತರ ಕರ್ನಾಟಕ, ಅಲ್ಪಸಂಖ್ಯಾತ, ಓಬಿಸಿ, ದಲಿತರಿಗೆ ಒಂದೊಂದು ಸ್ಥಾನ ಹಂಚಿಕೆ ಮಾಡಲಾಗಿದೆ.
ವಿಧಾನ ಪರಿಷತ್ ಮುಖ್ಯ ಸಚೇತಕ ಸ್ಥಾನ ಭರ್ತಿಗೆ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಸಚಿವ ಸ್ಥಾನ, ಸಂಸದೀಯ ಕಾರ್ಯದರ್ಶಿ, ನಿಗಮ-ಮಂಡಳಿ ಯಾರಿಗೆ ಅವಕಾಶ ನೀಡಬೇಕು ಎನ್ನುವ ತೀರ್ಮಾನ ಜೆಡಿಎಸ್ ವರಿಷ್ಟರಿಗೆ ಬಿಡಲಾಗಿದೆ.
ನಿಗಮ – ಮಂಡಳಿ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕರಿಗೆ ಬಹಿರಂಗವಾಗಿ ಹೇಳಿಕೆ ಕೊಡದಂತೆ ವರಿಷ್ಠರು ಸೂಚನೆ ನೀಡಿದ್ದಾರೆ. ಕಾಂಗ್ರೆಸ್ ಅಸಮಾಧಾನ ಬಗ್ಗೆ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರ ಜೊತೆ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬೇಕು. ಯಾವುದೇ ನಾಯಕರು ಮಾಧ್ಯಮಗಳ ಮುಂದೆ ಅಸಮಾಧಾನ ತೋರಿಸಬೇಡಿ ಎಂದು ವರಿಷ್ಟರು ಸೂಚಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಜೆಡಿಎಸ್ ಬೇಡಿಕೆಯಂತೆ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಕಾಂಗ್ರೆಸ್ ಬಿಟ್ಟುಕೊಟ್ಟರೆ ವೀರಪ್ಪ ಮೊಯ್ಲಿ ಚುನಾವಣಾ ಕ್ಷೇತ್ರ ಕಳೆದುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಕೇರಳದಲ್ಲಿಯೂ ಮತ ಕ್ಷೇತ್ರಗಳನ್ನು ಬಿಟ್ಟುಕೊಡಬೇಕು ಎಂದು ದೇವೇಗೌಡ ಅವರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕಿದೆ. ಲೋಕಸಭಾ ಚಳಿಗಾಲ ಅಧಿವೇಶನಕ್ಕೆ ಮಂಗಳವಾರ ತೆರೆ ಬೀಳಲಿದ್ದು, ಕೆಲ ದಿನಗಳಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಸೀಟು ವಿಚಾರವಾಗಿ ಚರ್ಚೆ ಮಾಡಿ ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv