– ಮೇಡಂ ಅವರೇ ಕೆರೆಗೆ ಪೂಜೆ, ಕೆರೆ ತುಂಬಿಸಿದ್ದು
ಮಂಡ್ಯ: ನಾನು ಏನೂ ಕೆಲಸ ಮಾಡ್ತಾ ಇಲ್ಲ. ಬಿಳಿ ಪಂಚೆ, ಶರ್ಟ್ ಹಾಕಿಕೊಂಡು ಓಡಾಡುತ್ತಿದ್ದೇನೆ. ಮಳವಳ್ಳಿಯಲ್ಲಿ ನಂಗೆ ಇದೇ ಕೆಲಸ. ಆದರೆ ಸುಮಲತಾ ಅವರೇ ಪ್ರತಿದಿನ ಇಲ್ಲಿನ ಜನರ ಕಷ್ಟ ಸುಖವನ್ನು ನೋಡ್ತಾ ಇರೋದು ಎಂದು ಸಂಸದೆ ಸುಮಲತಾ ಅಂಬರೀಶ್‍ಗೆ ಜೆಡಿಎಸ್ ಶಾಸಕ ಅನ್ನದಾನಿ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಜೆಡಿಎಸ್ ಶಾಸಕರ ಬಗ್ಗೆ ಸುಮಲತಾ ಅವರ ಹೇಳಿಕೆಗೆ ತಿರುಗೇಟು ಕೊಟ್ಟ ಶಾಸಕರ ಅನ್ನದಾನಿ, ತಾಲೂಕು ಆಫೀಸ್, ಪೊಲೀಸ್ ಸ್ಟೇಷನ್ ಎಲ್ಲವನ್ನೂ ಅವರೇ ಮಾಡುತ್ತಿದ್ದಾರೆ. ಕೆರೆಗೆ ಪೂಜೆ, ಕೆರೆ ತುಂಬಿಸಿದ್ದು ಅಲ್ಲದೇ ಪಿಂಚಣಿ ಕೂಡ ಮೇಡಂ ಅವರೇ ಕೊಡಿಸುತ್ತಿರೋದು. ಅವರೇ ಜಗಳಗಳನ್ನು ಇತ್ಯರ್ಥ ಮಾಡುತ್ತಾ ಇರೋದು. ಈ ತಾಲೂಕಿನ ಕೆಲಸವನ್ನೆಲ್ಲಾ ಅವರೇ ಮಾಡುತ್ತಾ ಇರೋದು. ನಾನು ಏನೂ ಕೆಲಸ ಮಾಡುತ್ತಾ ಇಲ್ಲ. ಬಿಳಿ ಪಂಚೆ, ಶರ್ಟ್ ಹಾಕಿಕೊಂಡು ಓಡಾಡುತ್ತಿದ್ದೇನೆ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ದರ್ಶನ್, ಯಶ್ ನಟನೆ ಸಿನಿಮಾರಂಗಕ್ಕೆ ಸೀಮಿತವಾಗಿರಲಿ ರಾಜಕೀಯಕ್ಕೆ ಬೇಡ: ಶಿವರಾಮೇಗೌಡ
Advertisement
Advertisement
ಈ ಜಿಲ್ಲೆಯಲ್ಲಿ ನಾರಾಯಣಗೌಡರನ್ನು ಬಿಟ್ಟು ನಾವು ಈಗ 6 ಜನ ಇದ್ದೇವೆ. ನಾವು ಏನೂ ಕೆಲಸ ಮಾಡುತ್ತಿಲ್ಲ. ಊಟ ಮಾಡಿಕೊಂಡು ತಿರುಗಾಡುತ್ತಾ ಇದ್ದೇವೆ. ದಯವಿಟ್ಟು ಸುಮಲತಾ ಅವರು ಇನ್ನೂ ಹೆಚ್ಚಿನ ರೀತಿ ಕೆಲಸ ಮಾಡಬೇಕು. ನಮ್ಮ ಹೊರೆಯನ್ನು ಇಳಿಸಬೇಕು ಎಂದು ಕೈ ಜೋಡಿಸಿ ಮನವಿ ಮಾಡುತ್ತೇನೆ. ಶಾಸಕರೇನು ಇಲ್ಲ, ಅವರ ಕೆಲಸ ನಾನೇ ಮಾಡುತ್ತಿದ್ದೇನೆ ಎಂದು ಅವರೇ ಹೇಳಿದ್ದಾರಲ್ಲ. ಎಲ್ಲಾ ಅವರೇ ಕೆಲಸ ಮಾಡುವಾಗ ನಮಗೇನೂ ಇಲ್ಲ. ನಮ್ಮ ಜವಾಬ್ದಾರಿಯನ್ನು ಮೇಡಂ ಅವರೇ ತೆಗೆದುಕೊಂಡಿದ್ದಾರಂತೆ. ನಮ್ಮ ಜವಾಬ್ದಾರಿ ಏನೂ ಇಲ್ಲ ಎಂದು ಜನರಿಗೆ ಹೇಳಿ ತಿರುಗಾಡಿಕೊಂಡು ಇರುತ್ತೇವೆ ಎಂದು ಕಿಡಿಕಾರಿದರು.
Advertisement
Advertisement
ಸುಮಲತಾ ಅವರಿಗೆ ರಾಜಕೀಯ ಪ್ರಬುದ್ಧತೆ ಇದೆ. ಅದಕ್ಕೆ ಅವರು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾರು ಕರೆದರೂ ಹೋಗುತ್ತೇನೆ ಅಂತಾರೆ. ಈ ಪ್ರಬುದ್ಧತೆಯಿಂದಲೇ ಅವರು ಈ ಬಾರಿ ಚುನಾವಣೆಯಲ್ಲಿ ಆಯ್ಕೆ ಆಗಿರೋದು. ಅವರು ಎಲ್ಲಾ ಪಾರ್ಟಿಗಳಿಗೂ ಹೋಗಲಿ ಎಲ್ಲರನ್ನೂ ಮಾತಾಡಿಸಲಿ ಎಂದು ನಗು-ನಗುತ್ತಲೇ ವ್ಯಂಗ್ಯವಾಗಿ ಸುಮಲತಾ ಅವರ ವಿರುದ್ಧ ಅನ್ನದಾನಿ ಹರಿಹಾಯ್ದರು.
ಸಂಸದೆ ಹೇಳಿದ್ದೇನು?
ಅ. 9ರಂದು ಮಂಡ್ಯ ಬಿಜೆಪಿ ಕಚೇರಿಯಲ್ಲಿ ನಡೆದಿದ್ದ ಕೋರ್ ಕಮಿಟಿ ಸದಸ್ಯರ ಸಭೆಯಲ್ಲಿ ಭಾಗಿಯಾಗಿದ್ದ ಸಂಸದೆ ಸುಮಲತಾ, ಜೋಡೆತ್ತುಗಳು ಈಗ ಎಲ್ಲಿ ಹೋದರು ಎಂಬ ಟೀಕೆಗೆ ತಿರುಗೇಟು ನೀಡಿದ್ದರು. ಜೆಡಿಎಸ್ ಪಕ್ಷದ ಎಂಟು ಜನ ಶಾಸಕರು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಒಬ್ಬ ಸಂಸದರು ಗೆದ್ದ ತಕ್ಷಣ, ಆ ಎಂಟು ಜನ ಶಾಸಕರು ಕೆಲಸ ಮಾಡಬಾರದು ಎಂದು ನಿಯಮ ಇದೆಯೇ ಎಂದು ಪ್ರಶ್ನಿಸಿದ್ದರು.