ಬೆಂಗಳೂರು: ಸರ್ಕಾರ ನಡೆಸುತ್ತಿರೋ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಇನ್ಫೋಸಿಸ್ ಮುಖ್ಯಸ್ಥರಾದ ನಾರಾಯಣಮೂರ್ತಿ (Narayana Murthy), ಸುಧಾಮೂರ್ತಿ (Sudha Murty) ಕುಟುಂಬದ ಮಾಹಿತಿ ಬಹಿರಂಗ ಮಾಡಿದ ಸರ್ಕಾರದ ನಡೆಗೆ ಜೆಡಿಎಸ್ ಕಿಡಿಕಾರಿದೆ. ಈ ಸಂಬಂಧ X ನಲ್ಲಿ ಕಿಡಿಕಾರಿರುವ ಜೆಡಿಎಸ್ ಸಿದ್ದರಾಮಯ್ಯ, ಡಿಕೆಶಿವಕುಮಾರ್, ಹರಿಪ್ರಸಾದ್ ವಿರುದ್ದ ಕಿಡಿಕಾರಿದೆ.
X ಪೋಸ್ಟ್‌ನಲ್ಲಿ ಏನಿದೆ?
ಕಾಂಗ್ರೆಸ್ ಸರ್ಕಾರ (Congress Government) ನಡೆಸುತ್ತಿರುವ ಜಾತಿಗಣತಿ ಸಮೀಕ್ಷೆ ಮಾಹಿತಿಗಳು ಸೋರಿಕೆಯಾಗಿರುವುದು ಆತಂಕಕಾರಿ ಬೆಳವಣಿಗೆ. ಸಮೀಕ್ಷೆಯಲ್ಲಿ ಜನರಿಂದ ಸಂಗ್ರಹಿಸಿದ ಮಾಹಿತಿಗಳು ಎಷ್ಟು ಸುರಕ್ಷಿತ? ಇನ್ಫೋಸಿಸ್ ಸಂಸ್ಥೆಯ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ಅವರು ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂದು ನೀಡಿದ್ದ ಸ್ವಯಂ ದೃಢೀಕರಣ ಪತ್ರವನ್ನು, ಸಾರ್ವಜನಿಕಗೊಳಿಸಿ ಮಾಹಿತಿ ಸೋರಿಕೆ ಮಾಡಲಾಗಿದೆ.
ಇದು ನ್ಯಾಯಾಂಗ ನಿಂದನೆ ಆಗುವುದಿಲ್ಲವೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರೇ. ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸುವುದು ಜನರ ಸ್ವಯಂ ಇಚ್ಛೆಗೆ ಬಿಟ್ಟಿದ್ದು, ಇದು ಕಡ್ಡಾಯವಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಸಮೀಕ್ಷೆಯಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಗೌಪ್ಯವಾಗಿಡಬೇಕು ಮತ್ತು ಅದರ ದುರ್ಬಳಕೆಯನ್ನು ತಡೆಯಬೇಕು ಎಂದು ರಾಜ್ಯ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಿದೆ. ಜಾತಿಗಣತಿಯಲ್ಲಿ ಭಾಗವಹಿಸದವರು “ದೇಶದ್ರೋಹಿಗಳು” ಎಂಬ ಹಣೆಪಟ್ಟಿಯನ್ನು ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ ಹರಿಪ್ರಸಾದ್ ಕಟ್ಟಿದ್ದಾರೆ.
ಮಾಹಿತಿ ಸೋರಿಕೆ ಮಾಡಿ ಸುಧಾಮೂರ್ತಿ ಮತ್ತು ಅವರ ಕುಟುಂಬದವರ ತೇಜೋವಧೆ ಮಾಡಲಾಗುತ್ತಿದೆ. ಈ ದುಷ್ಕೃತ್ಯದಲ್ಲಿ ಕಾಂಗ್ರೆಸ್ಸಿನ ನಾಯಕರೇ ಮುಂಚೂಣಿಯಲ್ಲಿ ಇದ್ದಾರೆ. ಮಾಹಿತಿ ಸೋರಿಕೆ ಸರ್ಕಾರದ ಪ್ರಾಯೋಜಿತ ಕೃತ್ಯ ಎಂಬ ಶಂಕೆಗೆ ಇದು ಪುಷ್ಠಿ ನೀಡಿದೆ. ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಸಮೀಕ್ಷೆಯ ವಿಶ್ವಸಾರ್ಹತೆ ಬಗ್ಗೆ ಅನುಮಾನ ಪಡುವಂತಾಗಿದೆ. ಸಮೀಕ್ಷೆಯು ಪಾರದರ್ಶಕವಾಗಿಲ್ಲ. ಮಾಹಿತಿಯೂ ಸುರಕ್ಷಿತವಾಗಿಲ್ಲ ಎಂಬುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿ ಅಂತ ಕಿಡಿಕಾರಿದೆ.