ಬೆಂಗಳೂರು: ಜುಲೈ 5ರಂದು ಸಿಎಂ ಹೆಚ್‍ಡಿಕೆ ಮಂಡಿಸುವ ಬಜೆಟ್‍ಗೆ ಮುನ್ನ ಎದುರಾಗಿದ್ದ ಅಡ್ಡಿ ಆತಂಕಗಳು ಮಾಯವಾಗಿದ್ದು, ತೀವ್ರ ಕುತೂಹಲ ಕೆರಳಿಸಿದ್ದ ಇಂದಿನ ಸಮನ್ವಯ ಸಮಿತಿ ಸಭೆ ಸಾಂಗವಾಗಿ ನಡೆದಿದೆ.
ಚುನಾವಣಾ ಪ್ರಣಾಳಿಕೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನೀಡಿದ್ದ ಭರವಸೆಗಳ ಸಂಬಂಧ ಸಿಎಂಪಿಯ ಶಿಫಾರಸುಗಳಿಗೆ ಸಿದ್ದರಾಮಯ್ಯ ನೇತೃತ್ವದ ಸಮನ್ವಯ ಸಮಿತಿ ಸಭೆ ಒಪ್ಪಿಗೆ ನೀಡಿದೆ. ಬೆಂಗಳೂರಿನ ಕುಮಾರಕೃಪಾ ಗೆಸ್ಟ್‍ಹೌಸ್‍ನಲ್ಲಿ ನಡೆದ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಡ್ಯಾನಿಶ್ ಆಲಿ, ಕೆಸಿ ವೇಣುಗೋಪಾಲ್ ಪಾಲ್ಗೊಂಡು ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ವಿತ್ತೀಯ ಶಿಸ್ತು ಉಲ್ಲಂಘನೆ ಆಗದ ರೀತಿಯಲ್ಲಿ ಸಾಲ ಮನ್ನಾ ಮಾಡಲು ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಧಾರಕ್ಕೆ ಬರಲಾಯಿತು.
ಮೂಲಗಳ ಪ್ರಕಾರ ಬೆಳೆ ಸಾಲವನ್ನಷ್ಟೇ ಮನ್ನಾ ಮಾಡಲು ತೀರ್ಮಾನಿಸಲಾಗಿದೆ. ಇದೇ ವೇಳೆ ಕಾಂಗ್ರೆಸ್ ಸರ್ಕಾರದ ಯೋಜನೆಗಳ ಮುಂದುವರಿಕೆ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಇನ್ನು ತೀವ್ರ ವಿವಾದ ಹುಟ್ಟು ಹಾಕಿದ್ದ ಸಿದ್ದರಾಮಯ್ಯನವರ ಆಫ್ ದಿ ರೆಕಾರ್ಡ್ ವೀಡಿಯೋ ಬಗ್ಗೆಯೂ ಚರ್ಚೆ ನಡೆದು, ಕೊನೆಗೆ ಇದು ಕಿಡಿಗೇಡಿ ಕೃತ್ಯ ಎಂಬ ನಿರ್ಧಾರಕ್ಕೆ ಸಭೆ ಬಂತು. ಆದರೆ ಸಿಎಂ ಮಾತ್ರ ಎಲ್ಲವನ್ನು ಈಗಲೇ ಹೇಳೋಕೆ ಆಗಲ್ಲ ಎಂದು ಹೇಳಿ ಕುತೂಹಲ ಮೂಡಿಸಿದ್ದು, ಕಾಂಗ್ರೆಸ್ ರೈತರ ಸಾಲ ಮನ್ನಾದ ವಿರೋಧಿಯಲ್ಲ ಎಂದು ಕೆಸಿ ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ.
ಸಮನ್ವಯ ಸಮಿತಿ ಸಭೆ ನಿರ್ಧಾರಗಳು:
ತೀರ್ಮಾನ 1 – ವಿತ್ತೀಯ ಶಿಸ್ತಿಗೆ ಧಕ್ಕೆಯಾಗದ ರೀತಿ ರೈತರ ಸಾಲ ಮನ್ನಾ
ತೀರ್ಮಾನ 2 – ನೀರಾವರಿ ಯೋಜನೆಗಳಿಗೆ 5 ವರ್ಷದಲ್ಲಿ 1.25 ಲಕ್ಷ ಕೋಟಿ ಅನುದಾನ
ತೀರ್ಮಾನ 3 – ಹಿಂದಿನ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳ ಮುಂದುವರಿಕೆ
ತೀರ್ಮಾನ 4 – ಐದು ವರ್ಷದಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿ
ತೀರ್ಮಾನ 5 – 5 ವರ್ಷದಲ್ಲಿ ಆರೋಗ್ಯ ಕರ್ನಾಟಕ ಯೋಜನೆ ಜಾರಿ
ತೀರ್ಮಾನ 6 – 5 ವರ್ಷದಲ್ಲಿ 20 ಲಕ್ಷ ವಸತಿಹೀನರಿಗೆ ಮನೆ ನಿರ್ಮಾಣ
ತೀರ್ಮಾನ 7 – ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ
ತೀರ್ಮಾನ 8 – ಬಜೆಟ್ ಬಳಿ ಬಳಿಕ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳಿಗೆ ನೇಮಕ, ನಾಳೆ ಸ್ಥಾನಗಳ ಹಂಚಿಕೆ