ಹಾಸನ: ನೀರಾವರಿ ಹೋರಾಟದ ಸ್ಥಳಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಭೇಟಿ ನೀಡಿದ್ದ ವೇಳೆ ಜೆಡಿಎಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ ನಡೆದಿರುವ ಘಟನೆ ಹಾಸನದಲ್ಲಿ ನಡೆದಿದೆ.
ಬೇಲೂರು ತಾಲೂಕಿನ ರಣಘಟ್ಟ ಒಡ್ಡು ಬಳಿ ಈ ಘಟನೆ ನಡೆದಿದೆ. ಜೆಡಿಎಸ್ ಹಿರಿಯ ನಾಯಕರಾದ ದೇವೇಗೌಡರು ರಣಘಟ್ಟ ಒಡ್ಡು ಬಳಿ ನೀರಾವರಿ ಹೋರಾಟ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸ್ಥಳದಲ್ಲಿ ಹೋರಾಟಗಾರರನ್ನು ಉದ್ದೇಶಿಸಿ ನೀರಾವರಿ ಹೋರಾಟದ ಬಗ್ಗೆ ದೇವೇಗೌಡರು ಮಾತನಾಡಿದರು.
ಈ ಸಂದರ್ಭದಲ್ಲೊ ರೈತ ಸಂಘದ ಮುಖಂಡರೊಬ್ಬರು ಸಭೆಯಲ್ಲಿ ಅಸಭ್ಯವಾಗಿ ನಡೆದುಕೊಂಡರು ಎಂಬುದು ಜೆಡಿಎಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು. ಇದರಿಂದ ದೇವೇಗೌಡರ ಮುಂದೆಯೇ ಜಗಳ ಶುರುವಾಗಿ ವಿಕೋಪಕ್ಕೆ ಹೋಗಿ ಕೈಕೈ ಮಿಲಾಯಿಸುವ ಮಟ್ಟಕ್ಕೆ ಬೆಳೆಯಿತು.
ಇನ್ನು ಸ್ಥಳದಲ್ಲೇ ಇದ್ದ ಪೊಲೀಸರು ಜೆಡಿಎಸ್ ಕಾರ್ಯಕರ್ತರ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವಲ್ಲಿ ಯಶಸ್ವಿಯಾದರು.