– ರಾಜಕೀಯಕ್ಕೆ ಹೋಗಲ್ಲ ಎಂದ ಡಾಕ್ಟರ್
ಬೆಂಗಳೂರು: ಜಯದೇವ ಆಸ್ಪತ್ರೆ (Jayadev Hospital) ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ (CN Manjunath) ಸೇವಾವಧಿ ಇದೇ ತಿಂಗಳ 31ರಂದು ಮುಕ್ತಾಯವಾಗಲಿದೆ. ಡಾ.ಸಿ.ಎನ್ ಮಂಜುನಾಥ್ ಅವರನ್ನು ಜಯದೇವ ಆಸ್ಪತ್ರೆ ನಿರ್ದೇಶಕ ಸ್ಥಾನದಲ್ಲಿ ಮುಂದುವರೆಸಲು ರಾಜ್ಯ ಸರ್ಕಾರ ಆಸಕ್ತಿ ತೋರಿಸಿಲ್ಲ. ಹೀಗಾಗಿ ಡಾ.ಸಿ.ಎನ್ ಮಂಜುನಾಥ್ ಅವರು ಜನವರಿ 31ರಂದು ನಿವೃತ್ತಿ ಪ್ರಕಟಿಸಲು ತಯಾರಿ ನಡೆಸಿದ್ದಾರೆ. ಅಲ್ಲದೇ, ತಮ್ಮನ್ನು ರಾಜ್ಯ ಸರ್ಕಾರ ಸರಿಯಾಗಿ ಬೀಳ್ಕೊಡದ ಬಗ್ಗೆ ಪರೋಕ್ಷವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಇನ್ನೂ ಚುನಾವಣೆಯಲ್ಲಿ (Election) ಸ್ಪರ್ಧೆ ಮಾಡುತ್ತಾರೆ ಎಂಬ ವದಂತಿಯನ್ನು ಮಂಜುನಾಥ್ ತಳ್ಳಿ ಹಾಕಿದ್ದಾರೆ. ಕಳೆದ ಬಾರಿ ಡಾ.ಮಂಜುನಾಥ್ ಸೇವಾವಧಿ ಮುಕ್ತಾಯವಾದ ಸಂದರ್ಭದಲ್ಲಿ ಸಿದ್ದರಾಮಯ್ಯ ಸರ್ಕಾರ ಆರು ತಿಂಗಳ ಕಾಲ ಅವರನ್ನು ಅದೇ ಸ್ಥಾನದಲ್ಲಿ ಮುಂದುವರೆಸಿತ್ತು. ಡಾ.ಮಂಜುನಾಥ್ ನಿವೃತ್ತಿ ಆಗುತ್ತಿರುವ ಹಿನ್ನೆಲೆ ಜಯದೇವ ಆಸ್ಪತ್ರೆ ನಿರ್ದೇಶಕರ ಹುದ್ದೆಗೆ ಪೈಪೋಟಿ ಆರಂಭವಾಗಿದೆ. ಈಗಾಗಲೇ 15ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಈ ನಡುವೆ ಸಿಎಂ ಆಪ್ತ, ಮೈಸೂರು ಮೂಲದ ವೈದ್ಯರೊಬ್ಬರನ್ನು ಜಯದೇವ ಆಸ್ಪತ್ರೆ ನಿರ್ದೇಶಕ ಸ್ಥಾನಕ್ಕೆ ತರಲು ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಒಂದೇ ದಿನ ಚುನಾವಣೆ, ರಾಜ್ಯ ಬಜೆಟ್ ಬೇಡ – ರಾಜ್ಯಪಾಲರಿಗೆ ಬಿಜೆಪಿ ದೂರು
ಈ ಕುರಿತು ಪ್ರತಿಕ್ರಿಯಿಸಿರುವ ಡಾ.ಮಂಜುನಾಥ್, ಕಲಬುರಗಿ ಜಯದೇವ ಕಂಪ್ಲೀಟ್ ಮಾಡಿ ನಿವೃತ್ತಿ ಆಗಬೇಕು ಎಂದು ಇದ್ದೆ. ಆದರೆ ಇಷ್ಟರ ಒಳಗಡೆ ಈ ರೀತಿ ನಿರ್ಧಾರ ಆಗಿದೆ. ಜನಸಾಮಾನ್ಯರು, ಜನರು ನನಗೆ ಗೌರವ ಕೊಡುತ್ತಾ ಇದ್ದಾರೆ. ಗೌರವಯುತವಾಗಿ ಕಳಹಿಸಿಕೊಡುತ್ತಿದ್ದಾರೆ. ರಾಜಕೀಯಕ್ಕೆ ನಾನು ಹೋಗಲ್ಲ. ನನ್ನ ಮೊದಲ ಆಯ್ಕೆ ನನ್ನ ವೃತ್ತಿ. ಇಲ್ಲಿಂದ ಹೊರ ಹೋದ ಮೇಲೂ ನಾನು ನನ್ನ ವೃತ್ತಿಯಲ್ಲಿ ಮುಂದುವರೆಯುತ್ತೇನೆ. ರಾಜಕೀಯ ಇದೆಲ್ಲ ಗಾಳಿ ಸುದ್ದಿ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ತಿಂಗಳ ಅಂತ್ಯದಲ್ಲಿ ಜಾತಿ ಜನಗಣತಿ ವರದಿ ಸರ್ಕಾರಕ್ಕೆ ಕೊಡುತ್ತೇವೆ: ಜಯಪ್ರಕಾಶ್ ಹೆಗ್ಡೆ