ನವದೆಹಲಿ: ಬಹುಭಾಷಾ ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಅವರು ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದು, ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿದಿದ್ದಾರೆ.
ಈ ಬಾರಿ ಲೋಕಸಭೆ ಚುನಾವಣೆಗೆ ಉತ್ತರ ಪ್ರದೇಶದ ರಾಮ್‍ಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಜಯಪ್ರದಾ ಸ್ಪರ್ಧಿಸಲಿದ್ದಾರೆ. 2014ರ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿಯ ಡಾ.ನೇಪಾಳ್ ಸಿಂಗ್ ಗೆಲುವು ಸಾಧಿಸಿದ್ದರು. ಈ ಬಾರಿ ಬಿಎಸ್ಪಿ-ಎಸ್ಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಇಲ್ಲಿ ಸಮಾಜವಾದಿ ಪಕ್ಷದ ಅಜಮ್ ಖಾನ್ ಸ್ಪರ್ಧಿಸಲಿದ್ದಾರೆ. ಆದರಿಂದ ಜಯಪ್ರದಾ ಹಾಗೂ ಅಜಮ್ ಖಾನ್ ನಡುವೆ ಭಾರಿ ಸ್ಪರ್ಧೆ ನಡೆಯುವ ಸಾಧ್ಯತೆಯಿದೆ.
Advertisement
Advertisement
ಮೂಲತಃ ಆಂಧ್ರಪ್ರದೇಶದ ರಾಜಮುಂಡ್ರಿಯವರಾದ ಜಯಪ್ರದಾ ಅವರು 1994ರಲ್ಲಿ ತೆಲುಗು ದೇಶಂ ಪಾರ್ಟಿ ಮೂಲಕ ರಾಜಕೀಯಕ್ಕೆ ಕಾಲಿಟ್ಟಿದ್ದರು. ಬಳಿಕ 1996ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ಅವರು ಟಿಡಿಪಿಯ ಮಹಿಳಾ ಘಟಕದ ಅಧ್ಯಕ್ಷೆ ಆಗಿಯೂ ಸೇವೆ ಸಲ್ಲಿಸಿದ್ದರು. ನಂತರ 2004ರಲ್ಲಿ ತೆಲುಗು ದೇಶಂ ಪಾರ್ಟಿ ಬಿಟ್ಟು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಹಾಗೆಯೇ ಉತ್ತರ ಪ್ರದೇಶದ ರಾಮ್‍ಪುರ ಲೋಕಸಭಾ ಕ್ಷೇತ್ರದಿಂದ 2004 ಹಾಗೂ 2009ರ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದ್ದರು. ತದನಂತರ 2014ರ ಲೋಕಸಭೆ ಚುನಾವಣೆ ವೇಳೆ ಅಮರ್ ಸಿಂಗ್ ಜತೆ ಆರ್‍ಎಲ್‍ಡಿ ಪಕ್ಷ ಸೇರಿ, ಬಿಜ್ನೂರ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.
Advertisement
Advertisement
ಜಯಪ್ರದಾ ಹಾಗೂ ಅಜಮ್ ಖಾನ್ ಇಬ್ಬರು ರಾಜಕೀಯ ವೈರಿಗಳು. ಜಯಪ್ರದಾ ಅವರು ಸಮಾಜವಾದಿ ಪಕ್ಷ ಬಿಟ್ಟು ಅಮರ್ ಸಿಂಗ್ ಅವರೊಂದಿಗೆ ಹೋದಾಗಿನಿಂದ ಅಜಮ್ ಖಾನ್ ಹಾಗೂ ಅವರ ನಡುವೆ ವೈರತ್ವ ಹೆಚ್ಚಾಗಿತ್ತು. ಅಲ್ಲದೆ 2009ರಲ್ಲಿ ಜಯಪ್ರದಾ ವಿರುದ್ಧ ಅಜಮ್ ಖಾನ್ ಬೆಂಬಲಿಗರು ಬಹಿರಂಗ ಪ್ರಚಾರವನ್ನು ಕೂಡ ಮಾಡಿದ್ದರು. ಅಲ್ಲದೆ ಅಶ್ಲೀಲ ಚಿತ್ರಗಳಿಗೆ ಜಯಪ್ರದಾ ಅವರ ಫೋಟೋ ಅಂಟಿಸಿ ಬಾರಿ ವಿವಾದವನ್ನು ಕೂಡ ಸೃಷ್ಟಿಸಿದ್ದರು. 2009ರಲ್ಲಿ ರಾಮ್‍ಪುರ ಕ್ಷೇತ್ರದಲ್ಲಿ ಜಯಪ್ರದಾ ಅವರು ಗೆದ್ದಿದ್ದರು. ಆದ್ರೆ ಅಜಮ್ ಖಾನ್ ಬೆಂಬಲಿಗರ ದುಷ್ಕೃತ್ಯದಿಂದ 30 ಸಾವಿರದಷ್ಟು ಮತಗಳು ಅವರ ಕೈತಪ್ಪಿತ್ತು.
Delhi: Veteran actor and former MP Jaya Prada joins Bharatiya Janata Party. pic.twitter.com/vmZD3H1PSL
— ANI (@ANI) March 26, 2019