ಬೆಂಗಳೂರು: ಅಪರೂಪದ ಕಂಕಣ ಸೂರ್ಯ ಗ್ರಹಣಕ್ಕೆ ಕ್ಷಣಗಣನೆ ಶುರುವಾಗಿದೆ. ನಾಳೆ (ಗುರವಾರ) ಬೆಳಗ್ಗೆ 8.06ಕ್ಕೆ ಸೂರ್ಯಗ್ರಹಣ ಆರಂಭವಾಗಲಿದ್ದು 11.01 ರಿಂದ 11.11 ಕ್ಕೆ ಅಂತ್ಯವಾಗಲಿದೆ. ಈಗಾಗಲೇ ಗ್ರಹಣ ವೀಕ್ಷಣೆಗೆ ಬೆಂಗಳೂರಿನ ನೆಹರು ತಾರಾಲಯ ಸಕಲ ಸಿದ್ದತೆ ಮಾಡಿಕೊಂಡಿದೆ. ಚಂದ್ರ ಕೇವಲ ಸೂರ್ಯನ ಶೇ.90 ಭಾಗ ಆವರಣವನ್ನು ಮಾತ್ರ ಮರೆ ಮಾಡುವುದರಿಂದ ಡಿಸೆಂಬರ್ 26 ರಂದು ಸಂಭವಿಸಲಿರುವ ಸೂರ್ಯ ಗ್ರಹಣವು ಬೆಂಗಳೂರಿನಲ್ಲಿ ಪಾಶ್ರ್ವ ಗ್ರಹಣವಾಗಿ ಕಾಣಲಿದೆ.
ಸೂರ್ಯ ಗ್ರಹಣವು ಸಂಪೂರ್ಣ ಅಥವಾ ಭಾಗಶಃವಾಗಿರಲಿ ಬರಿಗಣ್ಣಿನ ವೀಕ್ಷಣೆಯು ಹಾನಿಯುಂಟು ಮಾಡುತ್ತದೆ. ತಾರಾಲಯವು ಸುರಕ್ಷಿತ ಸೂರ್ಯ ಗ್ರಹಣ ವೀಕ್ಷಣೆಗೆ ಬೆಳಗ್ಗೆ 8 ರಿಂದ 11:15 ರವರೆಗೆ ಹಮ್ಮಿಕೊಂಡಿರುವ ಹಲವು ಸಿದ್ಧತೆಗಳ ಮಾಹಿತಿ ಇಲ್ಲಿದೆ.
ಜವಾಹರಲಾಲ್ ನೆಹರು ತಾರಾಲಯದಲ್ಲಿ ಡಿಸೆಂಬರ್ 26 ರಂದು ಬೆಳ್ಳಗ್ಗೆ 08 ಗಂಟೆಗೆ ಸೂರ್ಯ ಗ್ರಹಣ ವೀಕ್ಷಣೆ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಗ್ರಹಣ ವೀಕ್ಷಿಸಲು ಅನುಕೂಲಕರವಾಗಲೆಂದು ಟೆಲಿ ಸ್ಕೋಪ್ ಗಳನ್ನು ಅಳವಡಿಸಲಿದ್ದಾರೆ.
ಇದೇ ಮೊದಲ ಬಾರಿಗೆ ಗ್ರಹಣ ಸಂದರ್ಭದಲ್ಲಿ ಮಕ್ಕಳಿಗೆ ಗ್ರಹಣದ ವಿವಿಧ ಹಂತಗಳು, ಸೂರ್ಯ, ಚಂದ್ರನ ಗಾತ್ರ, ಗ್ರಹಣದ ಪರಿಣಾಮ, ಬೆಳಕಿನ ಮಟ್ಟ, ಉಷ್ಣಾಂಶ ಇತ್ಯಾದಿಗಳನ್ನು ಪರೀಕ್ಷಿಸಲು ಅವಕಾಶ ನೀಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ನೆಹರು ತಾರಾಲಯ ನಡೆಸುತ್ತಿದೆ.
2010 ಜನವರಿ 15 ರಂದು ಕಂಕಣ ಸೂರ್ಯ ಗ್ರಹಣ ಆಗಿತ್ತು. ಆ ಬಳಿಕ ಒಂಬತ್ತು ವರ್ಷಗಳ ನಂತರ ಡಿಸೆಂಬರ್ 26 ಕ್ಕೆ ಕಂಕಣ ಸೂರ್ಯ ಗ್ರಹಣ ಸಂಭವಿಸುತ್ತಿದೆ. ಪುನಃ 2020 ಜೂನ್ 21ರಂದು ಕಂಕಣ ಸೂರ್ಯ ಗ್ರಹಣ ಸಂಭವಿಸಲಿದ್ದು ಉತ್ತರ ಭಾರತದಲ್ಲಿ ಇದು ಕಾಣಲಿದೆ.