ರೋಚಕ ಹಂತಕ್ಕೆ ತಲುಪಿದ ಬಾಕ್ಸಿಂಗ್ ಡೇ ಟೆಸ್ಟ್- ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ

Public TV
2 Min Read
kohli bhumrah

ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ 3ನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು 54 ರನ್ ಗಳಿಸಿ 346 ರನ್ ಮುನ್ನಡೆಯನ್ನು ಪಡೆದುಕೊಂಡಿದೆ.

3ನೇ ದಿನದಾಟವನ್ನು 8 ರನ್ ಗಳಿಂದ ಆರಂಭಿಸಿದ ಆಸೀಸ್ ತಂಡ ಟೀಂ ಇಂಡಿಯಾ ವೇಗಿ ಬುಮ್ರಾ ದಾಳಿಗೆ ಸಿಲುಕಿ ತತ್ತರಿಸಿತು. ಪರಿಣಾಮವಾಗಿ 151 ರನ್ ಗಳಿಗೆ ಸರ್ವ ಪತನವಾಯಿತು. ಟೀಂ ಇಂಡಿಯಾ ಪರ ಬುಮ್ರಾ 33 ರನ್ ನೀಡಿ 6 ವಿಕೆಟ್ ಪಡೆದು ಮಿಂಚಿದರು. ಇತ್ತ 2 ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಕೂಡ 5 ವಿಕೆಟ್ ಕಳೆದುಕೊಂಡು ಸಂಕಷ್ಟ ಎದುರಿಸಿತು.

ಪಂದ್ಯದಲ್ಲಿ 6 ವಿಕೆಟ್ ಗಳಿಸಿದ ಬುಮ್ರಾ ವೃತ್ತಿ ಜೀವನದ ಉತ್ತಮ ಪ್ರದರ್ಶನ ನೀಡಿದರು. ಈ ಮೂಲಕ ಆಸೀಸ್, ಇಂಗ್ಲೆಂಡ್ ಮತ್ತು ಸೌತ್ ಆಫ್ರಿಕಾ ವಿರುದ್ಧ ಕ್ಯಾಲೆಂಡರ್ ವರ್ಷ ಒಂದರಲ್ಲಿ 5 ವಿಕೆಟ್ ಪಡೆದ ಮೊದಲ ಏಷ್ಯಾ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ಅಲ್ಲದೇ 2018 ರಲ್ಲಿ ಟೀಂ ಇಂಡಿಯಾ ಪರ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಶಮಿ ಅವರೊಂದಿಗೆ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ.

ಟೆಸ್ಟ್ ಕ್ರಿಕೆಟ್‍ಗೆ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ ವರ್ಷದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಸಾಧನೆಯನ್ನು ಬುಮ್ರಾ ಮಾಡಿದ್ದಾರೆ. 2018 ವರ್ಷದಲ್ಲಿ ಬುಮ್ರಾ 45 ವಿಕೆಟ್ ಪಡೆದಿದ್ದಾರೆ. 1979 ರಲ್ಲಿ ದಿಲೀಪ್ ದೋಷಿ ಪಾದಾರ್ಪಣೆ ಮಾಡಿದ ವರ್ಷದಲ್ಲಿ 40 ವಿಕೆಟ್ ಪಡೆದಿದ್ದರು.

ಇತ್ತ ಆಸೀಸ್ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಕಮ್ಮಿನ್ಸ್ 10 ರನ್ ನೀಡಿ 4 ಪಡೆದು ಮಿಂಚಿದರು. 2ನೇ ಇನ್ನಿಂಗ್ಸ್ ಆರಂಭದಲ್ಲಿ ಪಂದ್ಯದ ಮೇಲೆ ಬಿಗಿ ಹಿಡಿತ ಹೊಂದಿದ್ದ ಟೀಂ ಇಂಡಿಯಾ ಬಹುಬೇಗ ವಿಕೆಟ್ ಕಳೆದುಕೊಂಡು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ತಂಡದ ಪರ ಮೊದಲ ಇನ್ನಿಂಗ್ ಶತಕ ವೀರ ಚೇತೇಶ್ವರ ಪೂಜಾರ ಹಾಗೂ ನಾಯಕ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾದರು. ಇದರ ಬೆನ್ನಲ್ಲೇ ಅಜಿಂಕ್ಯ ರಹಾನೆ 1 ರನ್, ರೋಹಿತ್ ಶರ್ಮಾ 5 ರನ್ ಮಾತ್ರ ಗಳಿಸಿದರು. ಉಳಿದಂತೆ ಆರಂಭಿಕ ಹನುಮ ವಿಹಾರಿ 13 ರನ್ ಗಳಿಸಲು ಮಾತ್ರ ಶಕ್ತರಾದರು. ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ಕಳೆದು 447 ರನ್ ಗೆ ಡಿಕ್ಲೇರ್ ಘೋಷಿಸಿತ್ತು. 3ನೇ ದಿನದಾಟದಲ್ಲಿ ಒಟ್ಟು 15 ವಿಕೆಟ್ ಗಳನ್ನು ಪಡೆಯಲು ಇತ್ತಂಡಗಳ ಬೌಲರ್ ಗಳು ಯಶಸ್ವಿಯಾದರು.

ಮಯಾಂಕ್ ಭರವಸೆ : ಮೊದಲ ಇನಿಂಗ್ಸ್ ಅರ್ಧಶತಕ ಗಳಿಸಿ ದಾಖಲೆ ಬರೆದಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ 28* ರನ್ ಹಾಗೂ ಯುವ ಬ್ಯಾಟ್ಸ್ ಮನ್ ರಿಷಬ್ ಪಂತ್ 6 ರನ್ ಗಳಿಸಿ ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *