– ಜಪಾನ್‌ನಿಂದ Human Washing Machine ಆವಿಷ್ಕಾರ
-ಸ್ನಾನ ಮಾತ್ರವಲ್ಲದೇ ಮನಸ್ಸಿಗೂ ಮುದ
ಈಗಿನ ಯುಗ ತಂತ್ರಜ್ಞಾನದ ಯುಗವಾಗಿದೆ. ಪ್ರತಿನಿತ್ಯ ತಂತ್ರಜ್ಞಾನ ಕ್ಷೇತ್ರದಲ್ಲಿ ಒಂದಲ್ಲ ಒಂದು ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಹೊಸ ತಂತ್ರಜ್ಞಾನಗಳನ್ನು ಆವಿಷ್ಕರಿಸುವಲ್ಲಿ ಜಪಾನ್ ಮುಂದಿದೆ. ಬಟ್ಟೆ ಒಗೆಯಲು ಹೇಗೆ ವಾಷಿಂಗ್ ಮಷಿನ್ ಇದೆಯೋ ಅದೇ ರೀತಿಯಲ್ಲಿ ಮನುಷ್ಯರನ್ನೇ ಕ್ಲೀನ್ ಮಾಡಲು ಕೂಡ ಒಂದು ಯಂತ್ರ ಕಂಡುಹಿಡಿಯಲಾಗಿದೆ. ನೀವು ವಾಷಿಂಗ್ ಮಷಿನ್ ಒಳಗೆ ಬಟ್ಟೆ ಹಾಕಿ ನೀರು, ಪುಡಿ ಹಾಕಿದರೆ ಬಟ್ಟೆ ಎಲ್ಲಾ ಒಗೆದು ಒಣಗಿಸಿ ಕೊಡುತ್ತದೆ. ಅದೇ ರೀತಿ ಕೇವಲ 15 ನಿಮಿಷಗಳಲ್ಲಿ ಈ ಯಂತ್ರ ಕೂಡ ನಿಮ್ಮನ್ನೂ ಕ್ಲೀನ್ ಮಾಡುತ್ತದೆ. ಹಾಗಿದ್ರೆ ಈ ಯಂತ್ರ ಯಾವುದು? ಕೆಲಸ ಹೇಗೆ ಮಾಡುತ್ತದೆ? ಪ್ರಯೋಜನಗಳೇನು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
Advertisement
ಜಪಾನ್‌ನ ವಿಜ್ಞಾನಿಗಳ ತಂಡವು ಯಾರು ನಂಬಲಾಗದಂತಹ ಆವಿಷ್ಕಾರವೊಂದನ್ನು ಸಂಶೋಧನೆ ಮಾಡಿ, ಸೈ ಎನಿಸಿಕೊಂಡಿದೆ. ಅಲ್ಲಿನ ವಿಜ್ಞಾನಿಗಳು ಸ್ನಾನದ ಮಷಿನ್ ಒಂದನ್ನು ಕಂಡುಹಿಡಿದಿದ್ದಾರೆ. ಇದು AI ಚಾಲಿತ ಯಂತ್ರವಾಗಿದ್ದು, ಮನುಷ್ಯರನ್ನು 15 ನಿಮಿಷದಲ್ಲಿ ಸ್ನಾನ ಮಾಡಿಸಿ, ಕ್ಲೀನ್ ಮಾಡುತ್ತದೆ.
Advertisement
ಜಪಾನ್‌ನ ಎಂಜಿನಿಯರ್‌ಗಳು ‘ಹ್ಯೂಮನ್ ವಾಷಿಂಗ್ ಮೆಷಿನ್ ಆಫ್ ದಿ ಫ್ಯೂಚರ್ ‘ ಅಥವಾ ‘ಮಿರೈ ನಿಂಗೆನ್ ಸೆಂಟಕುಕಿ’ ಯನ್ನು ಅನಾವರಣಗೊಳಿಸಿದ್ದಾರೆ. ಜಪಾನಿನ ಶವರ್ ಹೆಡ್ ಕಂ. ಒಸಾಕಾದ ಸೈನ್ಸ್ ಕಂಪನಿ ಈ ಯಂತ್ರವನ್ನುಕಂಡುಹಿಡಿದಿದೆ. ಜಪಾನೀಸ್ ಪ್ರಕಟಣೆಯ ಅಸಾಹಿ ಶಿಂಬುನ್‌ನ ವರದಿಯ ಪ್ರಕಾರ, ಈ ಯಂತ್ರ AI (ಕೃತಕ ಬುದ್ಧಿಮತ್ತೆ) ಸಹಾಯದಿಂದ ಕೆಲಸ ಮಾಡುತ್ತದೆ ಎಂದು ತಿಳಿಸಿದೆ. ಯಂತ್ರದೊಳಗೆ ವ್ಯಕ್ತಿಯೊಬ್ಬ ಹೋದಾಗ ಮೊದಲು ಆತನ ದೇಹದ ಚರ್ಮದ ಬಗ್ಗೆ ತಿಳಿದುಕೊಳ್ಳುತ್ತದೆ. ಅದರ ಆಧಾರದ ಮೇಲೆ ಸೋಪ್ ಆಯ್ಕೆ ಮಾಡುತ್ತದೆ. ಬಳಿಕ ದೇಹಕ್ಕೆ ಸ್ನಾನ ಮಾಡಿಸಿ ದೇಹವನ್ನು ಒಣಗಿಸಿ ಆಚೆ ಕಳಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
Advertisement
Advertisement
ಈ ಯಂತ್ರವನ್ನು ವಿಶೇಷವಾಗಿ ಅಂಗವಿಕಲರಿಗೆ ಹಾಗೂ ವಯಸ್ಸಾದವರನ್ನು ಗಮನದಲ್ಲಿರಿಸಿಕೊಂಡು ಆವಿಷ್ಕಾರ ಮಾಡಲಾಗಿದೆ. ಈ ಯಂತ್ರ ಬಹಳ ಸರಳ ಸೆಟ್ಟಿಂಗ್ಸ್‌ಗಳನ್ನು ಹೊಂದಿದ್ದು, ಸುಲಭವಾಗಿ ಬಳಕೆ ಮಾಡಬಹುದಾಗಿದೆ. ಅಲ್ಲದೇ ಈ ಯಂತ್ರ ಸುರಕ್ಷತೆಯನ್ನೂ ಒದಗಿಸುತ್ತದೆ. ಇಷ್ಟು ಮಾತ್ರವಲ್ಲದೇ ಸೋಂಕುಗಳು ಮತ್ತು ಚರ್ಮದ ಕಿರಿಕಿರಿಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ವರದಿಗಳು ತಿಳಿಸಿವೆ.
ಕೆಲಸ ಹೇಗೆ?
*ವ್ಯಕ್ತಿ ಯಂತ್ರದ ಬಾತ್ ಟಬ್‌ನಲ್ಲಿ ಹೋಗಿ ಕುಳಿತರೆ ಮೊದಲು ಸ್ನಾನಕ್ಕೆ ಸೂಕ್ತವಾಗುವಷ್ಟು ಬೆಚ್ಚಗಿನ ನೀರಿನಿಂದ ಟಬ್ ತುಂಬಲು ಪ್ರಾರಂಭವಾಗುತ್ತದೆ.
*ಬಳಿಕ ಸಣ್ಣ ಗಾಳಿಯ ಗುಳ್ಳೆಗಳು ಶಕ್ತಿಯುತ ಒತ್ತಡದ ತರಂಗವನ್ನು ಉಂಟುಮಾಡುತ್ತವೆ. ಅದು ಚರ್ಮದ ಮೇಲಿರುವ ಕೊಳೆಯನ್ನು ತೆಗೆದುಹಾಕುತ್ತದೆ. ನೀರಿನಿಂದ ನೀವು ಶುದ್ಧವಾದ ಬಳಿಕ ನಿಮ್ಮನ್ನು ಒಣಗಿಸಲು ಮುಂದಾಗುತ್ತದೆ.
*ಇದರಲ್ಲಿ ನೀವು ಎಷ್ಟು ಬಿಸಿ ಗಾಳಿ ಬರಬೇಕು ಎಂಬುದನ್ನು ಕೂಡ ಆಯ್ಕೆ ಮಾಡಬಹುದು. ಇಲ್ಲವೆ ಎಐ ಮೂಲಕ ಹೊರಗಿನ ತಾಪಮಾನಕ್ಕೆ ಸರಿಯಾಗಿ ಅದಾಗಿಯೇ ಹೊಂದಿಸಿಕೊಳ್ಳುತ್ತದೆ. ಇದರ ಮಾಹಿತಿಯನ್ನು ಒದಗಿಸುತ್ತವೆ.
*ಅಲ್ಲದೇ ಈ ಯಂತ್ರವು ದೇಹವನ್ನು ಮಾತ್ರವಲ್ಲ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಮನಸ್ಸಿಗೂ ಆಹ್ಲಾದ ಉಂಟಾಗುವಂತೆ ಮಾಡುತ್ತದೆ.
*ಇದು ಮಾನವನ ಮನಸ್ಸನ್ನು ಶಾಂತಗೊಳಿಸಿ ಒತ್ತಡದಿಂದ ಮುಕ್ತಗೊಳಿಸುತ್ತದೆ. ಸ್ನಾನದ ಪ್ರಕ್ರಿಯೆ ಇದರಲ್ಲಿ ತ್ವರಿತವಾಗಿ ನಡೆಯುತ್ತದೆ. ಮಾತ್ರವಲ್ಲದೆ ಇದು ದೈಹಿಕ ಮತ್ತು ಮಾನಸಿಕವಾಗಿ ಮಾನವನಿಗೆ ಉಲ್ಲಾಸವನ್ನು ನೀಡುತ್ತದೆ.
ಮಾರುಕಟ್ಟೆಗೆ ಯಾವಾಗ?
ʼಹ್ಯೂಮನ್ ವಾಷಿಂಗ್ ಮಷಿನ್ʼನ ಮೊದಲ ಯಂತ್ರವನ್ನು 50 ವರ್ಷಗಳ ಹಿಂದೆಯೇ ನಿರ್ಮಿಸಲಾಗಿತ್ತು. ಇದನ್ನು ಮೊದಲ ಬಾರಿಗೆ 1970ರಲ್ಲಿ ಸ್ಯಾನ್ಯೊ ಎಲೆಕ್ಟ್ರಿಕ್ ಕಂ. ಪ್ಯಾನಾಸೋನಿಕ್ ಹೋಲ್ಡಿಂಗ್ಸ್ ಕಾರ್ಪೊರೇಷನ್ ನಿರ್ಮಿಸಿತ್ತು. ಜಪಾನ್ ವರ್ಲ್ಡ್ ಎಕ್ಸ್‌ಪೊಸಿಷನ್‌ನಲ್ಲಿ ಪ್ರದರ್ಶಿಸಲಾಗಿತ್ತು. ಇದು ಬಿಸಿ ನೀರು, ಸೂಕ್ಷ್ಮ ಬಬಲ್ ಗಳು, ಪ್ಲಾಸ್ಟಿಕ್ ಮಸಾಜ್ ಬಾಲ್‌ಗಳನ್ನು ಒಳಗೊಂಡಿತ್ತು. ಆದರೆ ಇದು ಕೆಲವೊಂದು ಕಾರಣಗಳಿಂದ ಮಾರುಕಟ್ಟೆಗೆ ಬರಲಿಲ್ಲ.
ಇದೀಗ ಹೊಸದಾಗಿ ಅನಾವರಣಗೊಳಿಸಲಾದ ʼಹ್ಯೂಮನ್ ವಾಷಿಂಗ್ ಮಷಿನ್ʼ ವಿಶ್ವದ ಗಮನ ಸೆಳೆದಿದೆ. ಈ ಯಂತ್ರವನ್ನು ಸಿದ್ಧಪಡಿಸಿರುವ ಜಪಾನ್‌ನ ಸೈನ್ಸ್ ಕೋ ಕಂಪನಿ, 2025ರಲ್ಲಿ ಒಸಾಕಾ ಕನ್ಸಾಯ್ನಲ್ಲಿ ನಡೆಯಲಿರುವ ಎಕ್ಸ್ಪೋದಲ್ಲಿ ಮೊದಲು 1,000 ಜನರಿಗೆ ಪ್ರಾಯೋಗಿಕವಾಗಿ ಸ್ನಾನ ಮಾಡಿಸುವ ಮೂಲಕ ಯಂತ್ರವನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. 1,000 ಜನರಿಗೆ ಸ್ನಾನ ಮಾಡಿಸಿ ಅವರಿಂದ ಬಂದ ಪ್ರತಿಕ್ರಿಯೆ ಆಧಾರದ ಮೇಲೆ ಮತ್ತಷ್ಟು ಯಂತ್ರಗಳನ್ನು ಮಾರುಕಟ್ಟೆಗೆ ತರಲು ಕಂಪನಿ ಯೋಚಿಸಿದೆ.
ಈ ಯಂತ್ರವು ವಯಸ್ಸಾದ ಮತ್ತು ಅಂಗವಿಕಲ ವ್ಯಕ್ತಿಗಳ ಜೀವನವನ್ನು ಸುಧಾರಿಸಲು ವಿನ್ಯಾಸಗೊಳಿಸಲಾದ ನವೀನ ತಂತ್ರಜ್ಞಾನದ ಗಮನಾರ್ಹ ಉದಾಹರಣೆಯಾಗಿದೆ. ಅದರ ಸ್ವಯಂಚಾಲಿತ ಸ್ನಾನದ ವ್ಯವಸ್ಥೆ, ಸೌಕರ್ಯ ಮತ್ತು ಸುರಕ್ಷತಾ ವೈಶಿಷ್ಟ್ಯಗಳು ಸ್ನಾನದ ಸಹಾಯದ ಅಗತ್ಯವಿರುವವರಿಗೆ ಅಮೂಲ್ಯವಾದ ಸಂಪನ್ಮೂಲವೆಂದರೆ ತಪ್ಪಾಗಲಾರದು.
ಹ್ಯೂಮನ್ ವಾಷಿಂಗ್ ಮಷಿನ್‌ನಲ್ಲಿ ಸ್ನಾನ ಮಾಡಲು ಇಚ್ಛಿಸುವವರಿಗೆ ಕಂಪನಿಯು ಈಗಾಗಲೇ ತನ್ನ ವೆಬ್‌ಸೈಟ್‌ನಲ್ಲಿ ಈ ಯಂತ್ರವನ್ನು ಕಾಯ್ದಿರಿಸುವ ಅವಕಾಶವನ್ನೂ ನೀಡುತ್ತಿದೆ.