ಹೆಚ್‍ಡಿ ಕುಮಾರಸ್ವಾಮಿಗೆ ಬಂಧನ ಭೀತಿ – ಕೋರ್ಟ್ ನಲ್ಲಿಂದು ಮಾಜಿ ಸಿಎಂ ಭವಿಷ್ಯ

Public TV
3 Min Read
hdk

ಬೆಂಗಳೂರು: ಜಂತಕಲ್ ಎಂಟರ್‍ಪ್ರೈಸಸ್‍ಗೆ ಮೈನಿಂಗ್ ಪರವಾನಗಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಬಡೇರಿಯಾ ಬಂಧನದ ಬಳಿಕ ಈಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬಂಧನದ ಭೀತಿ ಎದುರಾಗಿದೆ.

baderia

ನಿರೀಕ್ಷಣಾ ಜಾಮೀನು ಕೋರಿ ಮಂಗಳವಾರದಂದು ಕುಮಾರಸ್ವಾಮಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಸಿಸಿಎಚ್ 53 ಸೆಷನ್ಸ್ ನ್ಯಾಯಾಲಯದಲ್ಲಿ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ. ನ್ಯಾಯಾಧೀಶರಾದ ವೈ ವನಮಾಲ ರಂಗರಾಜನ್ ಅರ್ಜಿ ವಿಚಾರಣೆ ನಡೆಸಲಿದ್ದು ಇಂದಿನ ಆದೇಶ ಕುಮಾರಸ್ವಾಮಿ ಅವರ ರಾಜಕೀಯ ಭವಿಷ್ಯವನ್ನ ನಿರ್ಧರಿಸಲಿದೆಯಾ ಎಂಬ ಪ್ರಶ್ನೆ ಮೂಡಿದೆ.

ಈಗಾಗ್ಲೇ ಒಂದು ವರ್ಷದ ಹಿಂದೆ ನಿರೀಕ್ಷಣಾ ಜಾಮೀನನ್ನು ಪಡೆದು ಎಸ್‍ಐಟಿ ಮುಂದೆ ಮೂರು ಬಾರಿ ವಿಚಾರಣೆಗೆ ಹಾಜರಾಗಿದ್ದ ಕುಮಾರಸ್ವಾಮಿ ಬಂಧನದ ಭೀತಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮಧ್ಯಂತರ ನಿರೀಕ್ಷಣಾ ಜಾಮೀನಿನ ಮೊರೆ ಹೋಗಿದ್ದಾರೆ. ಇದೇ ಜಂತಕಲ್ ಮೈನಿಂಗ್ಸ್ ವಿಚಾರವಾಗಿ ಎರಡು ದಿನದ ಹಿಂದೆಯಷ್ಟೇ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಅವರನ್ನು ಬಂಧಿಸಿದ್ದು, ಒಂಭತ್ತು ಐಎಎಸ್ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ.

ಇದನ್ನೂ ಓದಿ: ಅಕ್ರಮ ಗಣಿಗಾರಿಕೆ: ಎಸ್‍ಐಟಿಯಿಂದ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಅರೆಸ್ಟ್

ಹೆಚ್‍ಡಿಕೆ ಸಿಎಂ ಆಗಿದ್ದ ಅವಧಿಯಲ್ಲಿ ಜಂತಕಲ್ ಮೈನಿಂಗ್‍ಗೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕುವಂತೆ ಸಿಎಂ ಕಚೇರಿಯಿಂದ ಒತ್ತಡ ಬಂದಿತ್ತು ಎಂದು ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಎಸ್‍ಐಟಿ ಮುಂದೆ ಹೇಳಿದ್ದಾರೆ ಎನ್ನಲಾಗಿದೆ. ಬಡೇರಿಯಾ ಹೇಳಿಕೆ ಹಿನ್ನೆಲೆಯಲ್ಲಿ ಹೆಚ್‍ಡಿ ಕುಮಾರಸ್ವಾಮಿಗೆ ನೋಟಿಸ್ ನೀಡಲು ಎಸ್‍ಐಟಿ ಸಜ್ಜಾಗಿದೆ. ಹೀಗಾಗಿ ನಿರೀಕ್ಷಣಾ ಜಾಮೀನು ಕೋರಿ ಹೆಚ್‍ಡಿಕೆ ಕೋರ್ಟ್ ಮೆಟ್ಟಿಲೇರಿದ್ದಾರೆ.

hdk 1

ಈ ಬಗ್ಗೆ ಯಾದಗಿರಿಯಲ್ಲಿ ಮಾತಾಡಿದ ಕುಮಾರಸ್ವಾಮಿ, ಜಂತಕಲ್ ಮೈನಿಂಗ್ ವಿಚಾರವಾಗಿ ಯಾವುದೇ ತಪ್ಪು ಮಾಡಿಲ್ಲ ಅಂದ್ರು. ಮಾಡದ ತಪ್ಪಿಗೆ ಹೆದರುವ ಅವಶ್ಯಕತೆ ಇಲ್ಲ. ಇದು ಕೆಲವರ ಹುನ್ನಾರ ಅಷ್ಟೇ. ಇದಕ್ಕೆಲ್ಲ ನಾನು ಬಗ್ಗಲ್ಲ ಅಂದ್ರು. ಇದೇ ವೇಳೆ ತಪ್ಪು ಮಾಡಿದ್ರೆ ಶಿಕ್ಷೆ ಆಗಲಿ. ತನಿಖೆಗೆ ನನ್ನ ಸಂಪೂರ್ಣ ಬೆಂಬಲವಿದೆ ಅಂತಾ ಹೇಳಿದ್ರು.

mining

ಏನಿದು ಜಂತಕಲ್ ಮೈನಿಂಗ್ ಪ್ರಕರಣ?: ಚಿತ್ರದುರ್ಗ ಜಿಲ್ಲೆಯ ಮೀಸಲು ಅರಣ್ಯದಲ್ಲಿ ಗಣಿಗಾರಿಕೆ ನಡೆಸಲು ವಿನೋದ್ ಗೋಯಲ್ ಮಾಲೀಕತ್ವದ ಜಂತಕಲ್ ಮೈನಿಂಗ್ ಎಂಟರ್ ಪ್ರೈಸಸ್‍ಗೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಪಾಕಿಸ್ತಾನಕ್ಕೆ ಅಕ್ರಮವಾಗಿ ಅದಿರು ಸಾಗಿಸಿ ಕಪ್ಪು ಪಟ್ಟಿಯಲ್ಲಿದ್ದ ವಿನೋದ್ ಗೋಯಲ್ ಮಾಲೀಕತ್ವದ ಕಂಪೆನಿಗೆ ಗಣಿ ಗುತ್ತಿಗೆ ಮಾಡಿದ ಪರಿಣಾಮ ರಾಜ್ಯದ ಬೊಕ್ಕಸಕ್ಕೆ 250 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಹಿಂದಿನ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ವರದಿ ನೀಡಿದ್ದರು. ಜಂತಕಲ್ ಮೈನಿಂಗ್ ಪರವನಾಗಿ ನೀಡುವ ವಿಚಾರದಲ್ಲಿ ಬಡೇರಿಯಾ ಅವರು ವಿನೋದ್ ಗೋಯಲ್ ಸಹಾಯ ಮಾಡಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ತನಿಖೆ ವೇಳೆ ಬಡೇರಿಯಾ ಮಗನ ಖಾತೆಗೆ ವಿನೋದ್ ಗೋಯಲ್ 10 ಲಕ್ಷ ರೂ. ಹಣ ಹಾಕಿದ್ದ ವಿಚಾರ ಬೆಳಕಿಗೆ ಬಂದಿತ್ತು. ಮಗನ ಅಕೌಂಟ್ ಪರಿಶೀಲನೆ ಮಾಡಿದಾಗ ಬಡೇರಿಯಾ ರೆಡ್‍ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದರು. ಈ ಹಿಂದೆ ಮೂರು ಬಾರಿ ಎಸ್‍ಐಟಿ ವಿಚಾರಣೆಗೆ ಹಾಜರಾಗಿದ್ದ ಬಡೇರಿಯಾ ನಾಲ್ಕನೇಯ ಬಾರಿಯ ವಿಚಾರಣೆ ವೇಳೆ ಅರೆಸ್ಟ್ ಆಗಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರು ಹಿಂದಿನ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗಡೆಯವರ ಈ ಕುರಿತ ವರದಿಯಲ್ಲಿದ್ದ ಹಲವಾರು ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಇನ್ನಿತರರ ವಿರುದ್ಧ ದೂರು ಸಲ್ಲಿಸಿದ್ದರು. ಅಪಾರ ಪ್ರಮಾಣದ ಅರಣ್ಯಭೂಮಿಯನ್ನು ಕಬಳಿಸಿ ಅಕ್ರಮ ಗಣಿಗಾರಿಕೆ ನಡೆಸಲು ಎಚ್.ಡಿ.ಕುಮಾರಸ್ವಾಮಿ ಹಾಗೂ ಎನ್.ಧರಂಸಿಂಗ್, ಎಸ್.ಎಂ.ಕೃಷ್ಣ ಅನುಮತಿ ನೀಡಿದ್ದಾರೆ ಎಂದು ಆರೋಪಿಸಿದ್ದರು. ಮಾರ್ಚ್ ನಲ್ಲಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಎಚ್.ಡಿ.ಕುಮಾರಸ್ವಾಮಿ ಹಾಗೂ ಎನ್.ಧರಂಸಿಂಗ್ ವಿರುದ್ಧ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಕರ್ನಾಟಕ ಪೊಲೀಸ್‍ನ ವಿಶೇಷ ತನಿಖಾ ತಂಡಕ್ಕೆ ಸೂಚಿಸಿತ್ತು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ವಿರುದ್ಧ ತನಿಖೆಗೆ ಸುಪ್ರೀಂ ತಡೆಯಾಜ್ಞೆ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *