Connect with us

Bengaluru City

ಅಕ್ರಮ ಗಣಿಗಾರಿಕೆ: ಎಸ್‍ಐಟಿಯಿಂದ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಅರೆಸ್ಟ್

Published

on

– ಸೇವೆಯಲ್ಲಿದ್ದಾಗಲೇ ಅರೆಸ್ಟ್ ಆದ ಮೊದಲ ಅಧಿಕಾರಿ
– ಗಣಿ ಇಲಾಖೆಯ ನಿರ್ದೇಶಕರಾಗಿದ್ದ ವೇಳೆ ಅಕ್ರಮ

ಬೆಂಗಳೂರು: ಜಂತಕಲ್ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಕಂದಾಯ ಇಲಾಖೆ ಕಾರ್ಯದರ್ಶಿಯಾಗಿರುವ ಗಂಗಾರಾಮ್ ಬಡೇರಿಯಾ ಅವರನ್ನು ವಿಶೇಷ ತನಿಖಾ ತಂಡದ(ಎಸ್‍ಐಟಿ) ಪೊಲೀಸರು ಬಂಧಿಸಿದ್ದಾರೆ.

ಈ ಹಿಂದೆ ಗಣಿ ಇಲಾಖೆಯ ನಿರ್ದೇಶಕರಾಗಿದ್ದ ಬಡೇರಿಯಾ ಅವಧಿಯಲ್ಲಿ ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟವಾಗಿತ್ತು. ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಎಸ್‍ಐಟಿ ಸಮನ್ಸ್ ಜಾರಿ ಮಾಡಿತ್ತು. ಇಂದು ಎಸ್‍ಪಿ ಅಣ್ಣಗಿರಿ ಮುಂದೆ ಬಡೇರಿಯಾ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಎಸ್‍ಐಟಿ ಪೊಲೀಸರ ತಂಡ ಬಡೇರಿಯಾ ಅವರನ್ನು ಬಂಧಿಸಿದೆ.

ಏನಿದು ಜಂತಕಲ್ ಮೈನಿಂಗ್ ಪ್ರಕರಣ?
ಚಿತ್ರದುರ್ಗ ಜಿಲ್ಲೆಯ ಮೀಸಲು ಅರಣ್ಯದಲ್ಲಿ ಗಣಿಗಾರಿಕೆ ನಡೆಸಲು ವಿನೋದ್ ಗೋಯಲ್ ಮಾಲೀಕತ್ವದ ಜಂತಕಲ್ ಮೈನಿಂಗ್ ಎಂಟರ್ ಪ್ರೈಸಸ್‍ಗೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಪಾಕಿಸ್ತಾನಕ್ಕೆ ಅಕ್ರಮವಾಗಿ ಅದಿರು ಸಾಗಿಸಿ ಕಪ್ಪು ಪಟ್ಟಿಯಲ್ಲಿದ್ದ ವಿನೋದ್ ಗೋಯಲ್ ಮಾಲೀಕತ್ವದ ಕಂಪೆನಿಗೆ ಗಣಿ ಗುತ್ತಿಗೆ ಮಾಡಿದ ಪರಿಣಾಮ ರಾಜ್ಯದ ಬೊಕ್ಕಸಕ್ಕೆ 250 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಹಿಂದಿನ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ವರದಿ ನೀಡಿದ್ದರು. ಜಂತಕಲ್ ಮೈನಿಂಗ್ ಪರವನಾಗಿ ನೀಡುವ ವಿಚಾರದಲ್ಲಿ ಬಡೇರಿಯಾ ಅವರು ವಿನೋದ್ ಗೋಯಲ್ ಸಹಾಯ ಮಾಡಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ತನಿಖೆ ವೇಳೆ ಬಡೇರಿಯಾ ಮಗನ ಖಾತೆಗೆ ವಿನೋದ್ ಗೋಯಲ್ 10 ಲಕ್ಷ ರೂ. ಹಣ ಹಾಕಿದ್ದ ವಿಚಾರ ಬೆಳಕಿಗೆ ಬಂದಿತ್ತು. ಮಗನ ಅಕೌಂಟ್ ಪರಿಶೀಲನೆ ಮಾಡಿದಾಗ ಬಡೇರಿಯಾ ರೆಡ್‍ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದರು. ಈ ಹಿಂದೆ ಮೂರು ಬಾರಿ ಎಸ್‍ಐಟಿ ವಿಚಾರಣೆಗೆ ಹಾಜರಾಗಿದ್ದ ಬಡೇರಿಯಾ ನಾಲ್ಕನೇಯ ಬಾರಿಯ ವಿಚಾರಣೆ ವೇಳೆ ಅರೆಸ್ಟ್ ಆಗಿದ್ದಾರೆ.

ಮೊದಲ ಅಧಿಕಾರಿ: ಸೇವೆಯಲ್ಲಿ ಇದ್ದಾಗಲೇ ಇದೂವರೆಗೆ ಕರ್ನಾಟಕದಲ್ಲಿ ಯಾವೊಬ್ಬ ಐಎಎಎಸ್ ಅಧಿಕಾರಿಯ ಬಂಧನವಾಗಿರಲಿಲ್ಲ. ಆದರೆ ಈಗ ಬಡೇರಿಯಾ ಅರೆಸ್ಟ್ ಆಗುವ ಮೂಲಕ ಸೇವೆಯಲ್ಲಿರುವಾಗಲೇ ಬಂಧನಕ್ಕೊಳಗಾದ ಮೊದಲ ಐಎಎಸ್ ಅಧಿಕಾರಿ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರು ಹಿಂದಿನ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗಡೆಯವರ ಈ ಕುರಿತ ವರದಿಯಲ್ಲಿದ್ದ ಹಲವಾರು ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಇನ್ನಿತರರ ವಿರುದ್ಧ ದೂರು ಸಲ್ಲಿಸಿದ್ದರು. ಅಪಾರ ಪ್ರಮಾಣದ ಅರಣ್ಯಭೂಮಿಯನ್ನು ಕಬಳಿಸಿ ಅಕ್ರಮ ಗಣಿಗಾರಿಕೆ ನಡೆಸಲು ಎಚ್.ಡಿ.ಕುಮಾರಸ್ವಾಮಿ ಹಾಗೂ ಎನ್.ಧರಂಸಿಂಗ್, ಎಸ್.ಎಂ.ಕೃಷ್ಣ ಅನುಮತಿ ನೀಡಿದ್ದಾರೆ ಎಂದು ಆರೋಪಿಸಿದ್ದರು. ಮಾರ್ಚ್ ನಲ್ಲಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಎಚ್.ಡಿ.ಕುಮಾರಸ್ವಾಮಿ ಹಾಗೂ ಎನ್.ಧರಂಸಿಂಗ್ ವಿರುದ್ಧ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಕರ್ನಾಟಕ ಪೊಲೀಸ್‌ನ ವಿಶೇಷ ತನಿಖಾ ತಂಡಕ್ಕೆ ಸೂಚಿಸಿತ್ತು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ವಿರುದ್ಧ ತನಿಖೆಗೆ ಸುಪ್ರೀಂ ತಡೆಯಾಜ್ಞೆ ನೀಡಿದೆ.

Click to comment

Leave a Reply

Your email address will not be published. Required fields are marked *