ಎಲ್ಲಿದ್ದಾರೆ ಎಸ್ಕೇಪ್ ರೆಡ್ಡಿಗಾರು? ಕೋಟಿ-ಕೋಟಿ ಡೀಲ್‍ನ ರೆಡ್ಡಿಗಾಗಿ ಸಿಸಿಬಿ ಪೊಲೀಸರ ತಲಾಶ್

Public TV
4 Min Read
reddy a

ಬೆಂಗಳೂರು: ಬಳ್ಳಾರಿ ಉಪಚುನಾವಣೆ ವೇಳೆ ವೀರಾವೇಶದ ಮಾತುಗಳನ್ನು ಆಡಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಇಂದು ದೀಪಾವಳಿಯ ಕರಾಳ ಅಮಾವಾಸ್ಯೆ. ಜಾರಿ ನಿರ್ದೇಶನಾಲಯದ ಗಾಳಕ್ಕೆ ಸಿಕ್ಕಿರೋ ಆಂಬಿಡೆಂಟ್ ಮಾರ್ಕೆಟಿಂಗ್ ಕಂಪನಿಯನ್ನ ರಕ್ಷಿಸಲು 20 ಕೋಟಿ ಡೀಲ್ ಮಾಡಿದ್ದ ಗಣಿಧಣಿ ಜನಾರ್ದನ ರೆಡ್ಡಿ ಈಗ ಮತ್ತೆ ಜೈಲಿಗೆ ಹೋಗುವ ಸ್ಥಿತಿ ಬಂದೊಂದಗಿದೆ.

ಈಗ ಜನಾರ್ದನ ರೆಡ್ಡಿ ವಿರುದ್ಧ ಮನಿ ಲಾಂಡರಿಂಗ್ ಅಡಿ ಕೇಸ್ ಬಿದ್ದಿದೆ. ಬೆಂಗಳೂರಿನ ಕಾವಲ್‍ಭೈರಸಂದ್ರದ ಕನಕನಗರದಲ್ಲಿರೋ ಆಂಬಿಡೆಂಟ್ ಅನ್ನೋ ಕಂಪನಿ ಸಾರ್ವಜನಿಕರಿಗೆ ವಂಚನೆ ಮಾಡಿ ಸುಮಾರು 600 ಕೋಟಿಗೂ ಅಧಿಕ ಹಣವನ್ನ ಸಂಗ್ರಹ ಮಾಡಿತ್ತು. ಈ ಬಗ್ಗೆ ಸರ್ಫರಾಜ್ ಸೇರಿದಂತೆ ಕೆಲವರು ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದು, ಇದು ಇತ್ತೀಚೆಗೆ ಸಿಸಿಬಿಗೆ ವರ್ಗಾವಣೆಯಾಗಿತ್ತು. ವಂಚಕ ಕಂಪನಿಯ ಮಾಲೀಕ ಫರೀದ್, ಇಡಿ ಕೇಸ್‍ನಿಂದ ಬಚಾವ್ ಆಗಲು ಮಾಸ್ಟರ್ ಪ್ಲಾನ್ ಮಾಡಿದ್ದ. ಆಗ ಫರೀದ್‍ಗೆ ಸಿಕ್ಕವನೇ ಮಾಜಿ ಸಚಿವ ಜನಾರ್ದನ ರೆಡ್ಡಿಯ ಪಿಎ ಅಲಿಖಾನ್.

Gali Janardhan Reddy 1

ಈ ವೇಳೆ ಫರೀದ್‍ನನ್ನು ಇ.ಡಿ ಪ್ರಕರಣದಿಂದ ಬಚಾವ್ ಮಾಡೋಕೆ 20 ಕೋಟಿ ಕೊಡುವಂತೆ ಕೇಳಿದ್ದ ರೆಡ್ಡಿ, ಚಿನ್ನದ ರೂಪದಲ್ಲಿ ಹಣ ಕೊಡುವಂತೆ ಷರತ್ತು ವಿಧಿಸಿದ್ರು. ಬಳಿಕ ರೆಡ್ಡಿ, ಫರೀದ್ ಹಾಗೂ ಬಿಸಿನೆಸ್ ಮೆನ್ ಬ್ರಿಜೇಶ್ ರೆಡ್ಡಿ, ತಾಜ್‍ವೆಸ್ಟೆಂಡ್ ಹೋಟೆಲ್‍ನಲ್ಲಿ ಮೀಟಿಂಗ್ ಕೂಡ ಮಾಡ್ತಾರೆ. ಆಗ ಅಲಿಖಾನ್‍ಗೆ ಪರಿಚಯವಿದ್ದ ಬಳ್ಳಾರಿಯ ರಾಜ್‍ಮಹಲ್ ಫ್ಯಾನ್ಸಿ ಜ್ಯುವೆಲರ್ಸ್‍ನ ಮಾಲೀಕ ರಮೇಶ್ ಮೂಲಕ ಬೆಂಗಳೂರಿನ ಅಂಬಿಕಾ ಸೇಲ್ಸ್ ಕಾರ್ಪೊರೇಷನ್‍ನ ಮಾಲೀಕ ರಮೇಶ್ ಕೊಠಾರಿಯವರ ಖಾತೆಗೆ 18 ಕೋಟಿ ಹಣವನ್ನ ಆರ್‍ಟಿಜಿಎಸ್ ಮಾಡಿದ್ದ ಫರೀದ್. ಹಾಗೇ ಕೊರಿಯರ್ ಮೂಲಕ 57 ಕೆ.ಜಿ. ಚಿನ್ನದ ಗಟ್ಟಿಗಳು ಗಣಿಧಣಿಯ ಮನೆ ಸೇರಿತ್ತು.

ಸಿಸಿಬಿಗೆ ಪ್ರಕರಣ ಕೈ ಸೇರುತ್ತಿದ್ದಂತೆ, ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹಾಗೂ ಡಿಸಿಪಿ ಗಿರೀಶ್ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ರು. ಆಂಬಿಡೆಂಟ್ ಮಾಲೀಕ ಹಾಗು ರಾಜಮಹಲ್ ಜ್ಯುವೆಲರ್ಸ್ ನ ಮಾಲೀಕ ರಮೇಶ್‍ನನ್ನ ಅರೆಸ್ಟ್ ಮಾಡಿ, ಬೆಂಡೆತ್ತಿದಾಗ ಜನಾರ್ದನ ರೆಡ್ಡಿ ಹಾಗು ಅಲಿಖಾನ್ ಪಾತ್ರದ ಬಗ್ಗೆ ಬಾಯಿ ಬಿಟ್ಟಿದ್ರು. ಬೈ ಎಲೆಕ್ಷನ್ ಮುಗಿಯೋದಕ್ಕು ಮುಂಚೆ ರೆಡ್ಡಿಯನ್ನ ಅರೆಸ್ಟ್ ಮಾಡಿದ್ರೆ, ರಾಜಕೀಯ ಮೇಲಾಟಗಳು ನಡೆಯಬಹುದು ಅನ್ನೋ ಕಾರಣಕ್ಕೆ ಸಿಸಿಬಿ ರೆಡ್ಡಿಯನ್ನ ಟಚ್ ಮಾಡೋದಕ್ಕೆ ಹೋಗಿರಲಿಲ್ಲ. ಆದರೆ ಬುಧವಾರ ರಾತ್ರಿ ಎಲ್ಲಾಕಡೆ ರೆಡ್ಡಿಗಾಗಿ ಹುಡುಕಾಟ ನಡೆಸಲಾಯ್ತು. ಅಷ್ಟರಲ್ಲಾಗಲೇ ಅರೆಸ್ಟ್ ಆಗೋ ವಾಸನೆ ತಿಳಿದಿದ್ದ ರೆಡ್ಡಿ, ಅಬ್‍ಸ್ಕ್ಯಾಂಡ್ ಆಗಿದ್ರು.

Gali Janardhan Reddy Ramesh

ಆಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಕೋಟ್ಯಾಂತರ ರೂಪಾಯಿ ಡೀಲ್ ಮಾಡಿ ಗಣಿಧಣಿ ರೆಡ್ಡಿಗಾರು ನಾಟ್‍ರಿಚಬಲ್ ಆಗಿದ್ದಾರೆ. ಮಾಜಿ ಸಚಿವ ಜನಾರ್ಧನ ರೆಡ್ಡಿಯನ್ನ ಖೆಡ್ಡಾಗೆ ಕೆಡವಲೇ ಬೇಕು ಅಂತಾ ತೀರ್ಮಾನಿಸಿರೊ ಸಿಸಿಬಿ ಅಧಿಕಾರಿಗಳು ದೀಪಾವಳಿ ಹಬ್ಬವನ್ನೇ ತೊರೆದಿದ್ದಾರೆ. ರೆಡ್ಡಿಗಾಗಿ ಬಲೆ ಬೀಸಿರೊ ಸಿಸಿಬಿ, ಮೂವರು ಎಸಿಪಿಗಳ ನೇತೃತ್ವದಲ್ಲಿ ಹುಡುಕಾಟ ನಡೆಸ್ತಿದೆ. ಎಸಿಪಿ ವೆಂಕಟೇಶ್ ಪ್ರಸನ್ನ ನೇತೃತ್ವದ ತಂಡ ಬೆಂಗಳೂರಲ್ಲಿ ಹುಡುಕಾಟ ನಡೆಸಿದ್ರೆ , ಎಸಿಪಿ ಸುಬ್ರಮಣಿ ಹೈದರಾಬಾದ್ ನಲ್ಲಿ ತಡಕಾಡ್ತಿದ್ದಾರೆ.. ಇನ್ನು ಎಸಿಪಿ ಮಂಜುನಾಥ್ ಚೌದರಿ ನೇತೃತ್ವದ ತಂಡ ಬಳ್ಳಾರಿ ಸುತ್ತಮುತ್ತ ಹುಡುಕಾಟ ನಡೆಸ್ತಿದೆ.. ರೆಡ್ಡಿ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಯಾವ ಕಡೆ ತಲೆ ಮರೆಸಿಕೊಂಡಿದ್ದಾರೆ ಅಂತಾ ಗೊತ್ತಿಲ್ಲ. ಆದರೆ ರೆಡ್ಡಿ ಜೊತೆ ಪಿಎ ಅಲಿಖಾನ್ ಇರೋದನ್ನ ಅಧಿಕಾರಿಗಳು ಕನ್ಫರ್ಮ್ ಮಾಡ್ತಿದ್ದಾರೆ. ಇಂದು ಗಣಿಧಣಿಯನ್ನ ಅರೆಸ್ಟ್ ಮಾಡೋ ಭರವಸೆಯಲ್ಲಿದೆ ಸಿಸಿಬಿ ತಂಡ

ನಾಲ್ಕು ತಂಡಗಾಗಿ ಸಿಸಿಬಿ ಪೊಲೀಸರು ಬೆಂಗಳೂರು, ಬಳ್ಳಾರಿ, ಹೈದರಾಬಾದ್ ನಲ್ಲಿ ಹುಡುಕಾಡುತ್ತಿದ್ದಾರೆ. ಈಗಾಗಲೇ ರೆಡ್ಡಿ ಎಲ್ಲಿದ್ದಾರೆ ಅನ್ನೋ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿದ್ದು, ಇಂದು ಎಲ್ಲೇ ಇದ್ರು ಬಂಧಿಸೋದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ರೆಡ್ಡಿಗಾಗಿ ಸಿಸಿಬಿ ಪೊಲೀಸರು ಬೆಳಗ್ಗೆಯಿಂದಲೇ ತೀವ್ರ ಬೇಟೆ ಆರಂಭಿಸಿದ್ರು. ಕೋರ್ಟ್ ನಿಂದ ಸರ್ಚ್ ವಾರೆಂಟ್ ಪಡೆದು ಮಧ್ಯಾಹ್ನ ಎರಡು ಗಂಟೆ ವೇಳೆಗೆ ನಗರದ ಚಾಲುಕ್ಯ ಸರ್ಕಲ್ ಬಳಿಯಿರುವ ರೆಡ್ಡಿ ಮನೆ ಮೇಲೆ ದಾಳಿ ನಡೆಸಿದರು. ಮನೆಯ ಕೀ ಇಲ್ಲದ ಕಾರಣ, ನಕಲಿ ಕೀ ಮೇಕರ್‍ನ ಕರೆಸಿ ಸತತ ಎರಡು ಗಂಟೆಗಳ ಕಾಲ ಸರ್ಕಸ್ ಮಾಡಿ ಬಾಗಿಲು ಓಪನ್ ಮಾಡಲಾಯ್ತು. ಮನೆ ಒಳಗೆ ಎಂಟ್ರಿಕೊಟ್ಟ ಪೋಲೀಸರು, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದರು. ಇದರ ಜೊತೆಗೆ ಪಾರಿಜಾತ ಅಪಾರ್ಟ್ ಮೆಂಟ್‍ನ ಹೊರಗಡೆಯಿದ್ದ ಸಿಸಿಟಿವಿ ಪರಿಶೀಲನೆ ನಡೆಸಿ ಡಿವಿಆರ್ ವಶಕ್ಕೆ ಪಡೆದಿದ್ದಾರೆ.

REDDY 1

ಸಿಸಿಬಿಯ ಮತ್ತೊಂದು ತಂಡ ರೆಡ್ಡಿ ಪಿಎ ಅಲಿಖಾನ್‍ನ ಆರ್‍ಟಿ ನಗರದ ಮನೆ ದಾಳಿ ಮಾಡಿ ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದಿದೆ. ದಾಳಿ ಮುಗಿಸಿ ಒಂದು ತಂಡ ತೆರಳುತ್ತಿದ್ದಂತೆ ಆಲಿಖಾನ್ ತಂದೆ ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನಿಸಿ ರಂಪಾಟ ಮಾಡಿದರು.

ಜನಾರ್ದನ್ ರೆಡ್ಡಿ ವಿರುದ್ಧ ಸಿಸಿಬಿ ಪೊಲೀಸರು ಮನಿಲ್ಯಾಂಡ್ರಿಂಗ್ ಕೇಸ್ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ವಿಚಾರಣೆ ವೇಳೆ ಸಿಕ್ಕ ಮಾಹಿತಿ ಮೇಲೆ ಸಿಸಿಬಿ ಪೊಲೀಸರು ಈ ಕೇಸ್ ದಾಖಲಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಫ್ರಾರ್ಡ್ ಕಂಪನಿ ಆಂಬಿಡೆಂಟ್ ಸಹಾಯಕ್ಕೆ ನಿಂತು ಡೀಲ್ ಮಾಡಿ ಸಿಕ್ಕಿಬಿದ್ದಿರುವ ರೆಡ್ಡಿಗಾರು, ಸದ್ಯ ರಾಜ್ಯದಿಂದಲೇ ಎಸ್ಕೇಪ್ ಆಗೋ ಪರಿಸ್ಥಿತಿ ಬಂದಿರೋದು ದುರಂತ. ಸದ್ಯ ಆರೋಪಿ ಜನಾರ್ದನ ರೆಡ್ಡಿಗೆ ಬಲೆ ಬೀಸಿರೋ ಸಿಸಿಬಿ ಪೊಲೀಸರು ಲುಕ್‍ಔಟ್ ನೋಟಿಸ್ ಸಹ ಜಾರಿ ಮಾಡಿದ್ದಾರೆ. ಮಾಡಬಾರದ ಕೆಲಸ ಮಡಲು ಹೋಗಿ ರೆಡ್ಡಿ ಮತ್ತೊಮ್ಮೆ ಜೈಲು ದಾರಿ ನೋಡಬೇಕಾದಂತ ಪರಿಸ್ಥಿತಿ ಬಂದೊದಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

CCB Bengaluru 1 1

Share This Article
Leave a Comment

Leave a Reply

Your email address will not be published. Required fields are marked *