-ಸ್ಫೋಟಕ ಮಾಹಿತಿ ಹೊರಹಾಕಿದ ರೆಡ್ಡಿ
-ಇನ್ಮುಂದೆ ನಾನು ಸುಮ್ಮನೆ ಕುಳಿತುಕೊಳ್ಳಲ್ಲ
ಬೆಂಗಳೂರು: ಭಾನುವಾರ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಕೋರ್ಟ್ ಇಂದು ಜಾಮೀನು ನೀಡಿತ್ತು. ಸಂಜೆ ಪರಪ್ಪನ ಅಗ್ರಹಾರದಿಂದ ಹೊರ ಬಂದ ಜನಾರ್ದನ ರೆಡ್ಡಿ ನೇರವಾಗಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಪರಪ್ಪನ ಅಗ್ರಹಾರದ ಮುಂದೆ ಮಾಧ್ಯಮಗಳ ಜೊತೆ ಮಾತನಾಡಿದ ಜನಾರ್ದನ ರೆಡ್ಡಿ, ಮೊದಲಿಗೆ ಬಿಜೆಪಿ ಹಿರಿಯ ನಾಯಕ ಅನಂತಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದರು. ನನಗೆ ರಾಜಕೀಯ ಜನ್ಮ ನೀಡಿದ ಅನಂತಕುಮಾರ್ ಅವರ ಸಾವು ನನಗೆ ದುಃಖ ತಂದಿದೆ. ಅನಂತಕುಮಾರ್ ಅವರ ಸಾವಿನ ಸುದ್ದಿ ವೇಳೆ ಕಣ್ಣೀರಲ್ಲೇ ನಾನು ಇದ್ದೆ. ಹಲವರು ವಿಚಾರದಲ್ಲಿ ನನಗೆ ತೊಂದರೆ ಕೊಟ್ಟರು ಕೊನೆಯ ಬಾರಿಗೆ ನನಗೆ ಅಣ್ಣನ ಮುಖ ನೋಡಲು ಸಾಧ್ಯವಾಗದಂತೆ ಮಾಡಿದರು ಎಂದು ಭಾವುಕರಾದರು.
Advertisement
Advertisement
ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡುತ್ತಿದ್ದರು. ಅನಂತಕುಮಾರ್ ಅವರು ಒಂದು ಸಾರಿ ನಮ್ಮ ಮನೆಗೆ ಆಗಮಿಸಿದ್ದರು. ಅಂದು ನನ್ನ ಮೊದಲ ಬ್ಯುಸಿನೆಸ್ ಎನೋಬೆಲ್ ಸಂಸ್ಥೆಯಿಂದ ಹೊರ ಬಂದ ನಂತರ ಬಳಿಕ ವಿಮಾನಯಾನ ಸೇವೆ ನಡೆಸಲು ತೀರ್ಮಾನಿಸಿದ್ದೆ. ಆದರೆ ಅವರು ಬೇಡ ಎಂದು ಸಲಹೆ ನೀಡಿದ ಬಳಿಕ ಗಣಿಗಾರಿಕೆ ಆರಂಭ ಮಾಡಿದೆ. ಆ ಬಳಿಕವೇ ನಾನು ಇಷ್ಟು ದೊಡ್ಡ ವ್ಯಕ್ತಿಯಾದೆ. ಅವರ ನೇತೃತ್ವದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷನಾದೆ. ಆ ಬಳಿಕ ಶ್ರಮವಹಿಸಿ ಬಳ್ಳಾರಿಯಲ್ಲಿ ಪಕ್ಷ ನಿರ್ಮಾಣ ಮಾಡಿದೆ. ಅವರು ರಾಜ್ಯಾಧ್ಯಕ್ಷರಾಗಿದ್ದರು ಎಂದು ನೆನೆದುಕೊಂಡರು.
Advertisement
ಅನಂತ್ ಕುಮಾರ್ ಅವರು ನೀಡಿದ ಸ್ಫೂರ್ತಿಯಿಂದ ನನ್ನ ಸಹೋದರ ಮೊದಲ ಬಾರಿಗೆ ಎಂಪಿ ಆಗಿ ಆಯ್ಕೆ ಆಗಿದ್ದರು. ಗಣಿ ಹಗರಣದ ಬಳಿಕವೂ ಅವರು ನನಗೆ ಆರೋಪ ಮುಕ್ತರಾದ ಬಳಿಕ ಮತ್ತೆ ಪಕ್ಷಕ್ಕೆ ಕರೆತರುವ ಮಾತು ಹೇಳಿದ್ದರು. ಅವರು ಇನ್ನು 10 ವರ್ಷ ಇದ್ದಿದ್ದರೆ ಪ್ರಧಾನಿ ಆಗುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಅವರನ್ನು ಕಳೆದು ಕೊಂಡಿದ್ದೇವೆ ಎಂದು ಬೇಸರ ವ್ಯಕ್ತಡಿಸಿದರು. ಇಂದು ನನಗೆ ಬಂಧನ ಆಗಿರುವ ಬಗ್ಗೆ ನನಗೆ ದುಃಖ ಇಲ್ಲ. ಆದರೆ ಅಣ್ಣನ ಮುಖ ನೋಡದಂತೆ ಮಾಡಿರುವುದು ನನಗೆ ಬೇಸರ ಆಗಿದೆ.
Advertisement
ಸಿಎಂಗೆ ಹಾವಿನ ದ್ವೇಷ:
ಸಿಎಂ ಕುಮಾರಸ್ವಾಮಿ ಅವರು 12 ವರ್ಷಗಳ ಹಿಂದಿನ ತಮ್ಮ ಹಾವಿನ ದ್ವೇಷವನ್ನು ತೀರಿಸಿಕೊಂಡಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಸಿಎಂ ನನ್ನ ಜೈಲಿಗೆ ಕಳುಹಿಸುವ ಹುನ್ನಾರ ನಡೆಸಿದರು. 2006ರಲ್ಲಿ 1500 ಪೊಲೀಸರನ್ನು ಕಳುಹಿಸಿ ನನ್ನನ್ನು ಬಂಧಿಸಲು ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಅದೇ ದ್ವೇಷವನ್ನು ಮುಂದುವರೆಸಿಕೊಂಡ ಬಂದ ಸಿಎಂ ಇಂದು ನನ್ನನ್ನು ಜೈಲಿಗೆ ಕಳುಹಿಸಿದರು ಎಂದು ಆರೋಪಿಸಿದರು.
ಅಂಬಿಡೆಂಟ್ ಸಂಸ್ಥೆಯಲ್ಲಿ ಅಲಿಖಾನ್ ಲಕ್ಷಾಂತರ ಕೋಟಿ ಹೂಡಿಕೆ ಮಾಡಿದ್ದಾರೆ. ಇದು ಹೇಗೆ ಡೀಲ್ ಮಾಡಲು ಸಾಧ್ಯ. ಅಂಬಿಡೆಂಟ್ ವಿರುದ್ಧ ದೂರು ಕೊಟ್ಟ ವೇಳೆ ಆಗಿನ ಸಿಎಂ, ಪೊಲೀಸ್ ಆಧಿಕಾರಿಗಳು ಏಕೆ ಕ್ರಮಕೈಗೊಳ್ಳಲಿಲ್ಲ. ಆ ವೇಳೆ ಅಂಬಿಡೆಂಟ್ ಕಂಪನಿ ಜೊತೆ ಅಲಿಖಾನ್ ಜಗಳ ಮಾಡಿಕೊಂಡಿದ್ದರು. ಬಳಿಕವಷ್ಟೇ ಫರೀದ್ ನನ್ನ ಭೇಟಿ ಮಾಡಿದ್ದು ಅಷ್ಟೇ. ಆ ವೇಳೆ ಗೃಹ ಸಚಿವರು ರಾಮಲಿಂಗ ರೆಡ್ಡಿ ಆಗಿದ್ದರು. ಅವರಿಗೆ ಮಾಹಿತಿ ನೀಡಿದ ಬಳಿಕವೇ ಘಟನೆ ನಡೆದಿದೆ. ಅದ್ದರಿಂದ ಅವರನ್ನು ಬಂಧನ ಮಾಡಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದರು.
ಜನಾರ್ದನ ರೆಡ್ಡಿ ಅವರಿಂದ ಬಿಜೆಪಿ ಪಕ್ಷಕ್ಕೆ ಕೆಟ್ಟ ಹೆಸರು ಬಂದಿಲ್ಲ. ಇದನ್ನು ಹಿರಿಯ ನಾಯಕರೇ ಹೇಳುತ್ತಾರೆ. ಜನಾರ್ದನ ರೆಡ್ಡಿ ಎಂದಿಗೂ ಕೊಡುವ ಕೈ ಆಗುತ್ತದೆ ವಿನಃ ತೆಗೆದುಕೊಳ್ಳುವ ಕೈ ಆಗುವುದಿಲ್ಲ. ಆದ್ದರಿಂದ ಮಾಧ್ಯಮಗಳು ನನ್ನ ಮೇಲಿನ ವಿರುದ್ಧ ವರದಿ ಮಾಡುವುದು ಬೇಸರ ತಂದಿದೆ. ಆದರೆ ನಾನು ಆತ್ಮೀಯ ಸ್ನೇಹಿತನ ವಿಚಾರಕ್ಕಾಗಿ ಮಾತ್ರ ಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿದ್ದೇನೆ ಅಷ್ಟೇ.
ಕಳೆದ 4 ವರ್ಷ ಜೈಲಿನಲ್ಲಿ ಇದ್ದ ವೇಳೆ ನನ್ನ ಕುಟುಂಬ ಪಟ್ಟ ಕಷ್ಟ ದೂರ ಮಾಡಲು ಜೈಲಿನಿಂದ ಬಂದ ಬಳಿಕ ಸುಮ್ಮನೆ ಇದ್ದೆ. ಆದರೆ ನನ್ನ ಮೇಲೆ ಸುಮ್ಮನೆ ಇದ್ದರು ಈ ರೀತಿ ಆರೋಪ ಮಾಡುತ್ತಿದ್ದಾರೆ. ಅಧಿಕಾರ ಬಳಕೆ ಮಾಡಿ ನನ್ನ ಮೇಲೆ ದ್ವೇಷ ಸಾಧನೆ ಮಾಡುತ್ತಿದ್ದಾರೆ. ಸಿಸಿಬಿ ಅಧಿಕಾರಿಗಳ ಮೇಲೆ ಒತ್ತಡ ಇದ್ದಿದ್ದರಿಂದ ಈ ರೀತಿ ವರ್ತನೆ ಮಾಡಿದ್ದಾರೆ. ಆದರೆ ಮಾಧ್ಯಮಗಳು ನೀಡಿದ ಕೆಲ ವರದಿಗಳು ನನ್ನ ನೋವನ್ನು ಸ್ವಲ್ಪ ದೂರ ಮಾಡಿವೆ ಅಂತಾ ಅಂದ್ರು.
ಬೆಂಗ್ಳೂರಿನಿಂದ ನನ್ನನ್ನು ಓಡಿಸುವ ಪ್ರಯತ್ನ:
ಉಪಚುನಾವಣೆ ವೇಳೆಯೇ ನನ್ನ ಮೇಲೆ ಸಂಚು ರೂಪಿಸಲಾಗಿತ್ತು. ಇದನ್ನು ನಾನು ಅಂದೇ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೆ. ನನಗೆ ಜೀವ ಭಯವಿದೆ ಎಂದು ಭದ್ರತೆ ನೀಡಿ ಎಂದು ಮನವಿ ಮಾಡಿಕೊಂಡರು ನಿರ್ಲಕ್ಷ್ಯ ಮಾಡಿದ್ದಾರೆ. ನಾನೋರ್ವ ಮಾಜಿ ಸಚಿವನಾಗಿದ್ದು, ಭದ್ರತೆ ನೀಡಬೇಕೆಂದು ಕೇಳಿದ್ರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇಂದು ನಾನು ಬಳ್ಳಾರಿಗೆ ಹೋಗುವಂತಿಲ್ಲ. ಹಾಗಾಗಿ ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಇಲ್ಲಿಂದಲೂ ನನ್ನನ್ನು ಹೊರಹಾಕುವ ಪ್ರಯತ್ನ ಮಾಡಲಾಗ್ತಿದೆ ಎಂದು ಗರಂ ಆದ್ರು.
ಲಾಟರಿ ಹೊಡೆದು ಅಧಿಕಾರ:
ಕುಮಾರಸ್ವಾಮಿ ಅವರು ಲಾಟರಿ ಹೊಡೆದು ಅಧಿಕಾರಕ್ಕೆ ಬಂದಿದ್ದಾರೆ. ಆದರೆ ನನ್ನನ್ನು ಬೆಂಗಳೂರು ಬಿಟ್ಟು ಕಳುಹಿಸಲು ಸಾಧ್ಯವಿಲ್ಲ. ನನ್ನ ಜೀವಕ್ಕೆ ಅಪಾಯ ಇದೆ ಎಂಬ ವಾತಾವರಣ ನಿರ್ಮಾಣ ಆಗುತ್ತಿದೆ. ಈ ಹಿಂದೆಯೂ ರಕ್ಷಣೆಗೆ ಮನವಿ ಸಲ್ಲಿಸಿದ್ದೆ. ಇಂದು ಕೂಡ ಮನವಿ ಸಲ್ಲಿಸುತ್ತೇನೆ. ಆದರೆ ನಿಮ್ಮ ಭದ್ರತೆಯನ್ನು ನಂಬುವುದಿಲ್ಲ. ಆದರೆ ಇನ್ನು ನನ್ನ ಮೇಲಿನ ಆರೋಪದ ಬಳಿಕ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಇನ್ನು ನಿಮ್ಮ ಅಧಿಕಾರ 6 ತಿಂಗಳ ಅಥವಾ 5 ವರ್ಷ ಎಷ್ಟು ಅಂತಾ ದೇವರು ನಿರ್ಧಾರ ಮಾಡುತ್ತಾನೆ. ಆಂಧ್ರಪ್ರದೇಶದಲ್ಲಿ ನನಗೆ ಭದ್ರತೆ ಇದೆ, ಆದರೆ ರಾಜ್ಯದಲ್ಲಿ ಇಲ್ಲ ಏಕೆ ಎಂದು ಪ್ರಶ್ನೆ ಮಾಡಿದರು.
ಮುಂದಿನ ಹಂತದಲ್ಲಿ ನಾನು ಕಾನೂನು ಹೋರಾಟ ಮಾಡುತ್ತೇನೆ. ಕರ್ನಾಟಕದ ಹೈಕೋರ್ಟ್ ನನ್ನ ಮೇಲಿನ ಎಲ್ಲಾ ಆರೋಪಗಳನ್ನು ದೂರು ಮಾಡಿದೆ. ಆದರೆ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಕೆ ಮಾಡಲಾಗಿದೆ. ಅದನ್ನು ಎದುರಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ರಾಜ್ಯದಲ್ಲಿ ಕೋಟಿ ಕೋಟಿ ಹೂಡಿಕೆ ಮಾಡಲು ಸಿದ್ಧತೆ ಸಿದ್ಧನಿದ್ದೇನೆ. ಆದರೆ ನನ್ನನ್ನು 8-10 ಕೋಟಿ ರೂ. ಆರೋಪದಲ್ಲಿ ಬಂಧಿಸಿರುವುದು ನನಗೆ ಅನುಮಾನ ಆಗುತ್ತಿದೆ. ಪುಣ್ಯಕೋಟಿ ಪದ್ಯದಲ್ಲಿ ಹೇಳಿರುವಂತೆ ನಾನು ನನ್ನ ಮಾಂಸಖಂಡ, ಹೃದಯ ಎಲ್ಲವನ್ನು ನೀಡುವುದಕ್ಕೆ ಸಿದ್ಧನಿದ್ದು. ಈ ಸರ್ಕಾರದ ದುರಾಡಳಿತ ಇನ್ನು ಹೆಚ್ಚು ದಿನ ನಡೆಯಲು ಸಾಧ್ಯವಿಲ್ಲ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews