ಉಗ್ರರನ್ನ ಚೆಂಡಾಡಿದ ಸೇನೆ- ಮನೆಯಿಂದ ಹೊರಬರದೇ ಸತ್ತೇ ಹೋದ ಹಿಜ್ಬುಲ್ ಕಮಾಂಡರ್

Public TV
2 Min Read
riyaz ahmed naikoo

– ತಾಯಿಯನ್ನ ಭೇಟಿಯಾಗಲು ಬಂದು ಸೇನೆಯ ಬೇಟೆಗೆ ಬಲಿ
– ಭಾರತೀಯ ಸೇನೆಗೆ ಹೆದರಿ ಮನೆಯಲ್ಲಿ ಅಡಗಿ ಕುಳಿತಿದ್ದ ಉಗ್ರರು
– ನಾಯ್ಕು ತಲೆಗೆ 12 ಲಕ್ಷ ರೂ. ಬೆಲೆ ಕಟ್ಟಿದ್ದ ಸೇನೆ

ಶ್ರೀನಗರ: ಕಾಶ್ಮೀರದ ಭಯೋತ್ಪಾದನೆ ಸಂಘಟನೆಯ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ರಿಯಾಜ್ ನಾಯ್ಕುನನ್ನು ಭಾರತೀಯ ಭದ್ರತಾ ಪಡೆ ಬುಧವಾರ ಹತ್ಯೆಗೈದಿದೆ.

ಪುಲ್ವಾಮಾದ ಬೈಗ್‍ಪೂರಾ ಗ್ರಾಮದ ಸಮೀಪದಲ್ಲಿ ನಡೆದ ದಾಳಿಯಲ್ಲಿ ಭಾರತೀಯ ಭದ್ರತಾ ಪಡೆ ಉಗ್ರ ರಿಯಾಜ್‍ನನ್ನು ಕೊಂದು ಹಾಕಿದೆ. ಬೈಗ್‍ಪೂರಾದಲ್ಲಿ ರಿಯಾಜ್ ನಾಯ್ಕು ಮತ್ತು ಅವನ ಕೆಲವು ಸಹಚರರು ಇರುವ ಬಗ್ಗೆ ಭದ್ರತಾ ಪಡೆಗೆ ಮಾಹಿತಿ ಲಭ್ಯವಾಗಿತ್ತು. ಆದರೆ ನಾಯ್ಕು ತಲೆಮರೆಸಿಕೊಂಡಿದ್ದಾನೆ ಎಂದು ಹೇಳುತ್ತಿದ್ದಂತೆ ಮಂಗಳವಾರ ಉಗ್ರರಿದ್ದ ಮನೆಗೆ ಭದ್ರತಾ ಪಡೆ ಮುತ್ತಿಗೆ ಹಾಕಿತ್ತು. ಆರಂಭದಲ್ಲಿ ಸೇನೆಯ ಮೇಲೆ ಉಗ್ರರು ಯಾವುದೇ ಗುಂಡಿನ ದಾಳಿ ನಡೆಸಲಿಲ್ಲ. ಜೊತೆಗೆ ಮನೆಗೆ ಹಾಕಿದ್ದ ಮುತ್ತಿಗೆಯನ್ನು ತೆಗೆದು ಹಾಕದೇ ದಿನವಿಡೀ ಕಾರ್ಯಾಚರಣೆ ಮುಂದುವರಿಸಿತ್ತು.

ಬಹಳ ಸಮಯ ಕಳೆದರೂ ಉಗ್ರರು ಮನೆಯಿಂದ ಆಚೆಗೆ ಬರಲೇ ಇಲ್ಲ. ಉಗ್ರರು ಬುಧವಾರ ಬೆಳಗ್ಗೆ ಗುಂಡು ಹಾರಿಸಲಾರಂಭಿಸಿದ್ದರು. ನಾಯ್ಕುನನ್ನು ಮೊದಲು ಮನೆಯ ಛಾವಣಿಯ ಮೇಲೆ ನಿರ್ಮಿಸಲಾದ ಅಡಗುತಾಣದಲ್ಲಿ ಮರೆಮಾಡಲಾಗಿತ್ತು. ನಂತರ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ಆರಂಭಿಸಿದರು. ಹೀಗಾಗಿ ಭದ್ರತಾ ಪಡೆಯು 40 ಕೆಜಿ ಸುಧಾರಿತ ಸ್ಫೋಟಕ ಸಾಮಗ್ರಿ ಬಳಿಸಿ ಸ್ಫೋಟಿಸಿತು. ಇದರಲ್ಲಿ ರಿಯಾಜ್ ಮತ್ತು ಆತನ ಸಹಚರ ಆದಿಲ್ ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿಯಾಗಿದೆ.

ಉಗ್ರ ರಿಯಾಜ್‍ನ ಹತ್ಯೆ ಭದ್ರತಾ ಪಡೆಗೆ ದೊಡ್ಡ ಯಶಸ್ಸು ತಂದುಕೊಟ್ಟಿದೆ. ಇದು ಕಾಶ್ಮೀರದಲ್ಲಿ ಭಯೋತ್ಪಾದನೆ ವಿರುದ್ಧದ ಅಭಿಯಾನದ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ. ರಿಯಾಜ್ ನಾಯ್ಕು ಕಾಶ್ಮೀರದಲ್ಲಿ ಅತ್ಯಂತ ಸಕ್ರಿಯ ಭಯೋತ್ಪಾದಕನಾಗಿದ್ದ. ಅವನು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಪರ ಕೆಲಸ ಮಾಡುತ್ತಿದ್ದ. ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಎ++ ವಿಭಾಗದಲ್ಲಿ ಅವನ ಹೆಸರಿತ್ತು. ಅಷ್ಟೇ ಅಲ್ಲದೆ ಅವನನ್ನು ಹತ್ಯೆಗೈದವರಿಗೆ ಇಲ್ಲವೆ ಅವನ ಬಗ್ಗೆ ಸುಳಿವು ನೀಡಿದವರಿಗೆ 12 ಲಕ್ಷ ರೂಪಾಯಿ ಬಹುಮಾನ ಕೂಡ ಭದ್ರತಾ ಪಡೆ ಘೋಷಿಸಿತ್ತು. ಕ್ರೂರಿ ರಿಯಾಜ್ ಅನೇಕ ಪೊಲೀಸರನ್ನು ಅಪಹರಿಸಿ ಕೊಲೆ ಮಾಡಿದ್ದ.

army 1

ಕಾಶ್ಮೀರದ ಪುಲ್ವಾಮಾ ನಿವಾಸಿ 35 ವರ್ಷದ ನಾಯ್ಕು ಗಣಿತ ಶಿಕ್ಷಕನಾಗಿದ್ದ. ನಂತರ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಘಟನೆಯ ಕಮಾಂಡರ್ ಆಗಿ ಸಕ್ರಿಯನಾಗಿದ್ದ. 2016ರಲ್ಲಿ ಬುರ್ಹಾನ್ ವಾನಿ ಸಂಘಟನೆ ಸೇರಿದ ನಂತರ ಹಿಜ್ಬುಲ್‍ನ ಕಮಾಂಡರ್ ಆಗಿದ್ದ. ಭಯೋತ್ಪಾದನೆಯನ್ನು ಹರಡಲು ಸಾಮಾಜಿಕ ಜಾಲತಾಣವನ್ನು ವ್ಯಾಪಕವಾಗಿ ಬಳಸಿಕೊಂಡ. ಹೀಗಾಗಿ ಭದ್ರತಾ ಪಡೆಯ ಹಿಟ್‍ಲಿಸ್ಟ್ ನಲ್ಲಿ ಟಾಪ್‍ನಲ್ಲಿದ್ದ.

ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು ನೋಡಲು ನಾಯ್ಕು ತನ್ನ ಗ್ರಾಮಕ್ಕೆ ಬಂದಿದ್ದ. ಈ ವೇಳೆ ತಾನು ಆಯ್ಕೆ ಮಾಡಿದ ಆಪ್ತರನ್ನು ಹೊರತುಪಡಿಸಿ ಯಾರನ್ನೂ ನಂಬಲಿಲ್ಲ ಎಂದು ಹೇಳಲಾಗುತ್ತಿದೆ. ಒಂದು ವೇಳೆ ತಾನು ಎಲ್ಲರನ್ನೂ ಪರಿಗಣನೆ ತೆಗೆದುಕೊಂಡು ತಾಯಿಯ ಭೇಟಿಗೆ ಬಂದಿದ್ದರೆ ಬಹುಶಃ ಆತ ಪರಾರಿಯಾಗುವ ಸಾಧ್ಯತೆಯಿತ್ತು. ಗ್ರಾಮಕ್ಕೆ ಬಂದಿದ್ದ ನಾಯ್ಕು ಅಲ್ಲಿನ ಸ್ಥಳೀಯ ಜನರಿಗೆ ಭೀತಿ ಮೂಡಿಸಿದ್ದ. ಇದೇ ಆತನಿಗೆ ಮಾರಕವಾಯಿತು ಎಂದು ವರದಿಯಾಗಿದೆ.

ಕಾಶ್ಮೀರದಲ್ಲಿ 35 ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿವೆ. ಈ ವರ್ಷ 10ಕ್ಕೂ ಹೆಚ್ಚು ಜನರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸೇರಿದ್ದಾರೆ ಎಂದು ವರದಿಯಾಗಿದೆ.

ನಾಯ್ಕು 2018-19ರ ನಡುವೆ ಎನ್‍ಕೌಂಟರ್ ವೇಳೆ ನಾಯ್ಕು ಅನೇಕ ಬಾರಿ ತಪ್ಪಿಸಿಕೊಂಡಿದ್ದ. ಈ ವೇಳೆ ತಪ್ಪಿಸಿಕೊಳ್ಳಲು ಅವಕಾಶ ನೀಡದೇ ಭಾರತೀಯ ಸೇನೆಯು ಉಗ್ರನನ್ನು ಎನ್‍ಕೌಂಟರ್ ಮಾಡಿ ಬಿಸಾಕಿದೆ.

army

Share This Article