ನವದೆಹಲಿ: ಮೋದಿ ಸರ್ಕಾರದ ಅವಧಿಯಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಲ್ಲೆಗಳ ಕುರಿತು ನಿಮ್ಮ ಅಭಿಪ್ರಾಯ ತಿಳಿಸುವಂತೆ ದೆಹಲಿಯ ಜಮ್ಮಾ ಮಸೀದಿಯ ಇಮಾಮ್ ಬುಖಾರಿಯವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ.
ಇಮಾಮ್ ಬುಖಾರಿಯವರ ಪತ್ರದಲ್ಲಿ, ಭಾರತದಲ್ಲಿ ಕಳೆದ 70 ವರ್ಷಗಳಿಗೆ ಹೋಲಿಸಿದರೆ, ಮೋದಿ ಸರ್ಕಾರದಲ್ಲಿ ಮುಸ್ಲಿಮರು ಭಯದ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದಾರೆ. ದೇಶದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ಮಾರಣಾಂತಿಕ ಹಲ್ಲೆಗಳಿಂದ 64 ಮಂದಿ ಅಮಾಯಕ ಮುಸ್ಲಿಮರು ಸಾವನ್ನಪ್ಪಿದ್ದಾರೆ. ಈ ಘಟನೆಗಳ ಕುರಿತು ನೀವೇಕೆ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಿಲ್ಲವೆಂದು ರಾಹುಲ್ ಗಾಂಧಿಯವರಿಗೆ ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ಮುಸ್ಲಿಂ ಯುವಕರು ಮನೆಯಿಂದ ಹೊರಗೆ ಟೋಪಿ ಧರಿಸಿ ಹಾಗೂ ಗಡ್ಡ ಬಿಟ್ಟು ಓಡಾಡುವುದೂ ಸಹ ಕಷ್ಟವಾಗಿದೆ. ಜವಾಬ್ದಾರಿಯುತ ಪ್ರತಿಪಕ್ಷವಾಗಿ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಲ್ಲೆಗಳನ್ನು ತಡೆಗಟ್ಟುವುದಕ್ಕಾಗಿ ಸರ್ಕಾರದ ಮೇಲೆ ನೀವು ಒತ್ತಡ ಹಾಕಬೇಕು. ಈ ವಿಚಾರದಲ್ಲಿ ನಿಮ್ಮ ನಿಲುವು ಸ್ಪಷ್ಟಪಡಿಸಿ ಎಂದು ಬರೆದಿದ್ದಾರೆ.
ಕೆಲ ದಿನಗಳ ಹಿಂದೆ ಮುಸ್ಲಿಮ್ ಬುದ್ಧಿಜೀವಿಗಳ ಜೊತೆಗಿನ ಸಂವಾದ ವೇಳೆ ರಾಹುಲ್ ಗಾಂಧಿ “ಕಾಂಗ್ರೆಸ್ ಮುಸ್ಲಿಮರ ಪಕ್ಷ” ಎಂದು ಹೇಳಿದ್ದಾಗಿ ಉರ್ದು ಪತ್ರಿಕೆಯೊಂದು ವರದಿ ಮಾಡಿತ್ತು. ರಾಹುಲ್ ಈ ಹೇಳಿಕೆ ಪ್ರಕಟಗೊಂಡ ಬೆನ್ನಲ್ಲೇ ಬುಖಾರಿಯವರು ಭಾರತದಲ್ಲಿನ ಮುಸ್ಲಿಂ ಮೇಲಿನ ದಾಳಿಗಳ ಕುರಿತು ಸಮಗ್ರವಾದ ಪತ್ರ ಬರೆದಿದ್ದಾರೆ.