ಕರ್ನಾಟಕದಲ್ಲಿ ಜಲ ಜೀವನ್ ಮಿಷನ್ ಅನುದಾನ ಬಳಕೆ ಕುರಿತಾದ ಸುಳ್ಳು ಆರೋಪಗಳು ನಿರಾಧಾರ: ಪ್ರಿಯಾಂಕ್‌ ಖರ್ಗೆ

Public TV
2 Min Read
Priyank kharge

ಬೆಂಗಳೂರು: ಜಲ ಜೀವನ್ ಮಿಷನ್ (ಜೆಜೆಎಂ) ಅಡಿಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಬಿಡುಗಡೆ ಮಾಡಿರುವ ಅನುದಾನ ಬಳಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಕೇಂದ್ರ ಜಲಶಕ್ತಿ ರಾಜ್ಯ ಸಚಿವರು ಮಾಡಿರುವ ಆರೋಪ ನಿರಾಧಾರ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ನಿಧಿ ಬಳಕೆಯಲ್ಲಿ ವಿಫಲ ಎಂಬ ಆರೋಪ ಸಂಪೂರ್ಣವಾಗಿ ತಪ್ಪು ಎಂದಿರುವ ಸಚಿವರು 2019-20ರಿಂದ 2024-25ರ ಅವಧಿಗೆ 28,623.89 ಕೋಟಿ ರೂ. ಸೂಚಕ ಹಂಚಿಕೆಯಾಗಿದ್ದು ವಾಸ್ತವವಾಗಿ ಅಷ್ಟು ಗಾತ್ರದ ಅನುದಾನ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವುದಿಲ್ಲ, ಈ ಅವಧಿಯಲ್ಲಿ 2025ರ ಫೆಬ್ರವರಿ 10ರವರೆಗೆ ಕೇಂದ್ರ ಸರ್ಕಾರ 11,760.00 ಕೋಟಿ ರೂ.ಗಳನ್ನು ಮಾತ್ರ ಬಿಡುಗಡೆ ಮಾಡಿದೆ, ಈ ಅನುದಾನವನ್ನು ಕರ್ನಾಟಕ ರಾಜ್ಯ ಸರ್ಕಾರವು ಸಂಪೂರ್ಣವಾಗಿ (99.95%) ಬಳಸಿಕೊಂಡಿದೆ. ಆದ್ದರಿಂದ, ಕರ್ನಾಟಕ ರಾಜ್ಯವು ಜೆಜೆಎಂ ನಿಧಿಗಳನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದೆ ಎಂಬ ಆರೋಪವು ಸತ್ಯಕ್ಕೆ ದೂರವಾಗಿದೆ ಮತ್ತು ದಾರಿತಪ್ಪಿಸುವಂತಿದೆ ಎಂದಿರುವ ಸಚಿವರು ಕೇಂದ್ರ ಸಚಿವರು ಪೂರ್ವಗ್ರಹದಿಂದ ಮಾಡಿರುವ ಆರೋಪವನ್ನು ತೀವ್ರವಾಗಿ ಖಂಡಿಸಿದ್ದಾರೆ.

ಜಲಜೀವನ್ ಮಿಷನ್ ಉಯೋಜನೆಯ ಅನುಷ್ಠಾನದಲ್ಲಿ ಕರ್ನಾಟಕ ಬದ್ಧತೆಯನ್ನು ತೋರಿದ್ದರೂ ಕೇಂದ್ರ ಸಚಿವರು ಕರ್ನಾಟಕ ಸರ್ಕಾರ ಜೆಜೆಎಂ ಅನುಷ್ಠಾನದಲ್ಲಿ ಮಂದಗತಿಯನ್ನು ತೋರುತ್ತಿದೆ ಎಂದು ಆರೋಪಿಸಿದ್ದಾರೆ, ಆದರೆ ವಾಸ್ತವವಾಗಿ 2023-24ನೇ ಹಣಕಾಸು ವರ್ಷದಲ್ಲಿ, ಕರ್ನಾಟಕವು ಕೇಂದ್ರ ಸರ್ಕಾರ ನೀಡಿದ ಎಲ್ಲಾ ನಾಲ್ಕು ಕಂತುಗಳ ನಿಧಿಯನ್ನುಪೂರ್ಣವಾಗಿ ಬಳಸಿಕೊಂಡಿದೆ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ 5,767.12 ಕೋಟಿ ರೂ. ರೂಪಾಯಿಗಳಲ್ಲಿ ರಾಜ್ಯ ಸರ್ಕಾರವೂ 2023-24ನೆ ಸಾಲಿನಲ್ಲಿ5,563.38 ಕೋಟಿ ರೂ.ಗಳನ್ನು ವೆಚ್ಚ ಮಾಡಿ ಪ್ರಗತಿ ಸಾಧಿಸಿದೆ, ರಾಜ್ಯ ಸರ್ಕಾರವು ತನ್ನ ಪಾಲಿನ ನಿಗದಿತ ಮಿತಿಯನ್ನು ಮೀರಿ 9,310.00 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದೂ ಸಚಿವರು ಹೇಳಿದ್ದಾರೆ. ಅಲ್ಲದೆ, 21-03-2024ರ ಮಾರ್ಚ್‌ 21ರಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಹೆಚ್ಚುವರಿ ಅನುದಾನ ಕೇಳಿದ್ದರೂ, ಇದುವರೆವಿಗೂ ಪ್ರತಿಕ್ರಿಯೆ ನೀಡಿಲ್ಲ ಎಂದೂ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

2024-25ರ ಆರ್ಥಿಕ ವರ್ಷದಲ್ಲಿ ಕರ್ನಾಟಕ ಸರ್ಕಾರವು ಮೊದಲ ಕಂತಿನ ಅನುದಾನ ಮಂಜೂರು ಮಾಡುವಂತೆ 2024ರ ಏಪ್ರಿಲ್‌ 8ರಂದು ವಿನಂತಿ ಮಾಡಿತ್ತು, ಆದರೆ, ಕೇಂದ್ರ ಸರ್ಕಾರ ವಿಳಂಬ ಮಾಡಿ, 3,804.41 ಕೋಟಿ ರೂ. ಬೇಡಿಕೆಗೆ ಬದಲಾಗಿ ಕೇವಲ 570.66 ಕೋಟಿ ರೂ.ಗಳನ್ನು ಮಾತ್ರ 30-07-2024ರ ಜುಲೈ 30ರಂದು ಬಿಡುಗಡೆ ಮಾಡಿತು. ಹಲವು ಮನವಿಗಳ ಹೊರತಾಗಿಯೂ ಭಾರತ ಸರ್ಕಾರ ಸಮರ್ಪಕವಾಗಿ ಪ್ರತಿಕ್ರಿಯೆ ನೀಡಿಲ್ಲ ಎಂದೂ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ. ಕೇಂದ್ರ ಜಲಶಕ್ತಿ ಸಚಿವರನ್ನು ಕೇಂದ್ರದ ಪಾಲಿನ ಅನುದಾನ ಬಿಡುಗಡೆಗಾಗಿ ತಾವೇ ವೈಯಕ್ತಿಕವಾಗಿ 2024ರ ನವೆಂಬರ್‌ 16ರಂದು ವಿನಂತಿಸಿದ್ದರೂ, ಯಾವುದೇ ಪ್ರತಿಕ್ರಿಯೆ ನೀಡದೆ ಮಲತಾಯಿ ಧೋರಣೆ ತಳೆದಿದ್ದಾರೆ ಎಂದೂ ಸಚಿವರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ಭಾರತ ಸರ್ಕಾರ ನಿಧಿ ಬಿಡುಗಡೆ ವಿಳಂಬ ಮಾಡಿದ್ದರಿಂದಾಗಿ ಯೋಜನೆ ಅನುಷ್ಠಾನ ಕುಂಠಿತವಾಗಬಾರದು ಎಂಬ ಕಾರಣಕ್ಕೆ ಕರ್ನಾಟಕ ಸರ್ಕಾರವು 4,977.25 ಕೋಟಿ ರೂ.ಗಳನ್ನು ಮುಂಗಡವಾಗಿ ಬಿಡುಗಡೆ ಮಾಡಿದ್ದು. ಈ ಸಲುವಾಗಿ ರಾಜ್ಯ ಆಯವ್ಯಯದಲ್ಲಿ 7,652.99 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದೆ ಎಂದೂ ಸಚಿವರು ಮಾಹಿತಿ ನೀಡಿದ್ದಾರೆ.

ಕರ್ನಾಟಕ ಸರ್ಕಾರವು ಲಭ್ಯವಿರುವ ಹಣವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದೆ ಮತ್ತು ಜಲಜೀವನ ಮಿಷನ್‌ ಯೋಜನೆಯನ್ನು ಕಾರ್ಯಗತಗೊಳಿಸಲು ಪೂರ್ವಭಾವಿ ಆರ್ಥಿಕ ಬದ್ಧತೆಯನ್ನು ಪ್ರದರ್ಶಿಸಿದೆಯಲ್ಲದೆ, ಜೆಜೆಎಂ ಯೋಜನೆಯನ್ನು ಪೂರ್ಣಗೊಳಿಸಲು ತ್ವರಿತವಾಗಿ ಬಾಕಿ ಇರುವ ಅನುದಾನ ಬಿಡುಗಡೆ ಮಾಡಬೇಕೆಂದು ಕೇಂದಗ್ರ ಸರ್ಕಾರವನ್ನು ಸಚಿವ ಪ್ರಿಯಾಂಕ್‌ ಖರ್ಗೆ ಒತ್ತಾಯಿಸಿದ್ದಾರೆ.

Share This Article