ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ಹಿರೇಪಡಸಲಗಿ ಗ್ರಾಮದಲ್ಲಿ ನೆರೆ ಪರಿಹಾರ ತಾರತಮ್ಯ ಖಂಡಿಸಿ ಪ್ರತಿಭಟನೆಗೆ ಇಳಿದ ಸಂತ್ರಸ್ತರಿಗೆ ಜೈಲಿಗೆ ಕಳುಹಿಸುವ ಬೆದರಿಕೆ ಹಾಕಲಾಗಿದೆ.
ಹಿರೇಪಡಸಲಗಿ ಗ್ರಾಮದಲ್ಲಿ ಉಂಟಾಗಿದ್ದ ಪ್ರವಾಹದ ನಷ್ಟಕ್ಕೆ ಇನ್ನೂ ನೆರೆ ಪರಿಹಾರ ನೀಡಿಲ್ಲ. ಆದ್ದರಿಂದ ನೆರೆ ಪರಿಹಾರ ತಾರತಮ್ಯ ಖಂಡಿಸಿ ಸಂತ್ರಸ್ತರು ಗ್ರಾಮದಲ್ಲಿ ಪ್ರತಿಭಟನೆಗೆ ಇಳಿದಿದ್ದರು. ನೆರೆಗೆ ಬಿದ್ದ ಮನೆಯ ಪರಿಹಾರ ಆಯ್ಕೆ ಪಟ್ಟಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಆರೋಪಿಸಿ, ಸಂತ್ರಸ್ತರು ಗ್ರಾಮ ಪಂಚಾಯತ್ ಮುಂದೆ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಆದರೆ ಪ್ರತಿಭಟನಾಕಾರರ ವಿರುದ್ಧ ಪೊಲೀಸರಿಗೆ ದೂರು ನೀಡಿ, ಜೈಲಿಗೆ ಕಳಿಸುವುದಾಗಿ ಬೆದರಿಕೆ ಹಾಕಿ, ಹಿರೇಪಡಸಲಗಿ ಗ್ರಾಪಂ ಅಧ್ಯಕ್ಷ ಹಾಗೂ ಪಿಡಿಓ ಸಾವಳಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗ್ರಾಪಂ ಅಧ್ಯಕ್ಷ ಮಲ್ಲೇಶ್ ಹುಟಗಿ ಹಾಗೂ ಪಿಡಿಓ ಸಂಗಮೇಶ್ ಸೋರಗಾವಿ ಪ್ರತಿಭಟನೆ ಮಾಡುತ್ತಿದ್ದ ಸಂತ್ರಸ್ತರಿಗೆ ಜೈಲಿಗೆ ಕಳಿಸುವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ನೆರೆಗೆ ಬಿದ್ದ ಮನೆಯ ಪರಿಹಾರ ಆಯ್ಕೆ ಪಟ್ಟಿಯಲ್ಲಿ ಅಕ್ರಮ ಮಾಡಲಾಗಿದೆ. ಪರಿಹಾರ ಆಯ್ಕೆಯಲ್ಲಿ ಅಧಿಕಾರಿಗಳು ಗೋಲ್ಮಾಲ್ ಮಾಡಿದ್ದಾರೆ ಎಂದು ಸಂತ್ರಸ್ತರು ಪ್ರತಿಭಟನೆಗೆ ಇಳಿದಿದ್ದರು. ಇದರಿಂದ ಎಲ್ಲಿ ತಮ್ಮ ಬಣ್ಣ ಬಯಲಾಗುತ್ತೋ ಎಂದು ಹೆದರಿ ಗ್ರಾಪಂ ಅಧ್ಯಕ್ಷ ಹಾಗೂ ಪಿಡಿಓ ಪೊಲೀಸರಿಗೆ ದೂರು ನೀಡಿ, ನಮಗೆ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.