ತುಮಕೂರು: ಸುಮಧುರ ಕಂಠದಿಂದಲೇ ಖ್ಯಾತಿಗಳಿಸಿದ್ದ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಅಂಧ ಗಾನ ಕೋಗಿಲೆಗಳಿಗೆ ಚೆಂದದ ಮನೆಯ ಭಾಗ್ಯ ಒದಗಿಬಂದಿದೆ. ಕೇವಲ 35 ದಿನದಲ್ಲಿ, 8 ಲಕ್ಷ ರೂ. ವೆಚ್ಚದಲ್ಲಿ ಅಂಧ ಸಹೋದರಿಯರಿಗಾಗಿ ಮನೆಯನ್ನು ನಿರ್ಮಿಸಿಕೊಡಲಾಗಿದೆ.
ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡ ಬಳಿಕ ಅಂಧ ಕುಟುಂಬಕ್ಕೆ ನೆರವಿನ ಮಹಾಪೂರವೇ ಹರಿದು ಬಂದಿದೆ. ನವರಸನಾಯಕ ಜಗ್ಗೇಶ್ ಹಾಗೂ ಅವರ ಅಭಿಮಾನಿಗಳ ತಂಡ, ಫ್ರೆಂಡ್ಸ್ ಗ್ರೂಪ್ ಸಂಘದಿಂದ ಮನೆ ನಿರ್ಮಾಣವಾಗಿದೆ. ಇಂದು ಆ ಪುಟ್ಟ ಮನೆಯ ಗೃಹ ಪ್ರವೇಶ ನೇರವೇರಿದ್ದು, ಜಗ್ಗೇಶ್ ದಂಪತಿ ಈ ಶುಭಕಾರ್ಯದಲ್ಲಿ ಭಾಗಿಯಾಗಿ ಮನೆಯ ಉದ್ಘಾಟನೆ ಮಾಡಿದರು.
Advertisement
Advertisement
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಡಿ.ವಿ ಹಳ್ಳಿ ಗ್ರಾಮದ ಗಾನ ಕೋಗಿಲೆಗಳಾದ ಮಂಜಮ್ಮ ಮತ್ತು ರತ್ನಮ್ಮ ಸಹೋದರಿಯರಿಗೆ ಜಗ್ಗೇಶ್ ಅವರು ನಿರ್ಮಿಸಿಕೊಟ್ಟಿರುವ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ಇಂದು ಅದ್ಧೂರಿಯಾಗಿ ನಡೆದಿದೆ. ಇರಲು ಮನೆಯಿಲ್ಲದೆ ಈ ಅಂಧ ಸಹೋದರಿಯರ ಕುಟುಂಬಕ್ಕೆ ಜಗ್ಗೇಶ್‍ರವರ ಸೂಚನೆಯಂತೆ ಕೊರಟಗೆರೆಯ ಜಗ್ಗೇಶ್ ಅಭಿಮಾನಿ ಬಳಗ ಮತ್ತು ಫ್ರೆಂಡ್ಸ್ ಗ್ರೂಪ್ ವತಿಯಿಂದ ಡಿ.ವಿ ಹಳ್ಳಿ ಗ್ರಾಮದಲ್ಲಿ ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ಮನೆಯನ್ನು ನಿರ್ಮಿಸಲಾಗಿದೆ.
Advertisement
Advertisement
ಈ ಮನೆ ನಿರ್ಮಾಣದ ಜವಾಬ್ದಾರಿಯನ್ನ ಕೊರಟಗೆರೆ ತಾಲೂಕಿನ ಜಗ್ಗೇಶ್ ಅಭಿಮಾನಿ ಬಳಗ ಮತ್ತು ಫ್ರೆಂಡ್ಸ್ ಗ್ರೂಪ್ ವಹಿಸಿಕೊಂಡಿತ್ತು. ಅಂದ ಗಾಯಕಿಯರ ಹಳೆಯ ಮನೆಯನ್ನು ಕೆಡವಿ 9 ಚದರ ವಿಸ್ತೀರ್ಣದಲ್ಲಿ ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ನೂತನ ಮನೆಯನ್ನು ನಿರ್ಮಿಸಲಾಗಿದೆ. ಮನೆಯಲ್ಲಿ ಅಡುಗೆ ಮನೆ, ಒಂದು ಕೊಠಡಿ, ಸುಸಜ್ಜಿತವಾದ ಶೌಚಾಲಯ ಒಳಗೊಂಡಿದೆ. ಕೇವಲ 35 ದಿನದಲ್ಲಿ ಮನೆ ನಿರ್ಮಾಣವಾಗಿದೆ.
ತಮ್ಮ ಕಷ್ಟಕ್ಕೆ ಸ್ಪಂಧಿಸಿ ಮನೆ ನಿರ್ಮಿಸಿ ನೆರವಿಗೆ ಬಂದ ಜಗ್ಗೇಶ್ ದಂಪತಿಗೆ ವಂದಿಸಿದ ಮಂಜಮ್ಮ ಹಾಗೂ ರತ್ನಮ್ಮ, ಪರಿಮಳಾ ಅವರಿಗೆ ಉಡಿತುಂಬಿಸಿ ತಮ್ಮ ಧನ್ಯತಾ ಭಾವ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಂಧ ಗಾಯಕಿಯರಿಗೆ ಲೈಫ್ ಟೈಂ ಉಚಿತ ರೈಲು ಪ್ರಯಾಣದ ಪಾಸ್ ವಿತರಿಸಲಾಯಿತು. ಇಂಥಹ ಕಾರ್ಯಕ್ರಮದಲ್ಲಿ ತಮ್ಮ ಹೆತ್ತ ತಾಯಿಯನ್ನು ನೆನೆದು ಪರಿಮಳ ಅವರಿಗೆ ಮಡಿಲು ತುಂಬಿ ಸಹೋದರಿಯರು ಗೌರವ ಸಲ್ಲಿಸಿದರು.