ಬಳ್ಳಾರಿ: ಸಚಿವ ಡಿಕೆ ಶಿವಕುಮಾರ್ ಮೊದಲು ಸರಿಯಾಗಿ ಮಾತನಾಡುವುದು ಕಲಿಯಲಿ, ಸೊಕ್ಕಿನ ಮಾತುಗಳು ಬೇಡ. ಇನ್ನು ಮುಂದೆ ಅವರಿಗೆ ಹೆಣ ಹೊರುವುದು ಖಾಯಂ ಕೆಲಸವಾಗಲಿದೆ. ಮುಂದೊಂದು ದಿನ ಅವರು ಬಿಜೆಪಿ ಹಾಗೂ ನಮೋ ಪಲ್ಲಕ್ಕಿ ಹೊರಬೇಕಾಗುತ್ತದೆ ಅಂತ ಮಾಜಿ ಸಿಎಂ ಜಗದೀಶ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.
ಬಳ್ಳಾರಿಯಲ್ಲಿ ಇಂದು ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಪರವಾಗಿ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ಸಿನಲ್ಲಿ ನನ್ನ ಬಿಟ್ಟರೆ ಗತಿ ಯಾರೂ ಇಲ್ಲ ಅಂತ ದಿಮಾಕು. ಕಾಂಗ್ರೆಸ್ಸಿನಲ್ಲಿ ಪಲ್ಲಕ್ಕಿ ಹೊರುವುದಕ್ಕೂ ನಾನೇ, ಹೆಣ ಹೊರುವುದಕ್ಕೂ ನಾನೇ ಅಂತ ಬೀಗುತ್ತಾರೆ. ಆದ್ರೆ ಅವರ ಅಹಂಕಾರ, ದಿಮಾಕು, ಸೊಕ್ಕು ಬಹಳ ದಿನ ಇರಲ್ಲ. ಬಳ್ಳಾರಿಯ ಜನ ಸ್ವಾಭಿಮಾನಿಗಳಾಗಿದ್ದು ಒಂದು ಸಲ ಜನರು ಪಾಠ ಕಲಿಸಿದರೆ ಮತ್ತೆ ಕನಕಪುರದಿಂದ ಬಳ್ಳಾರಿಗೆ ಡಿಕೆಶಿ ವಾಪಸ್ ಬರಲ್ಲವೆಂದು ವ್ಯಂಗ್ಯವಾಡಿದರು.
ಮಾಧ್ಯಮಗಳ ಜೊತೆ ಮಾತನಾಡಿ, ಕಾಂಗ್ರೆಸ್ಸಿನಲ್ಲಿ ಅಭ್ಯರ್ಥಿಗಳಿಗೆ ಗತಿಯಿಲ್ಲ. ಹಲವು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸುತ್ತಿಲ್ಲ. ಅಂತವರು ನಮ್ಮ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಬಳ್ಳಾರಿಯಲ್ಲಿ ಸ್ಪರ್ಧಿಸಲು ಸ್ಥಳೀಯ ನಾಯಕರು ಸಿಗಲಿಲ್ಲವಾ? ದೂರದ ಬೆಂಗಳೂರಿನಿಂದ ಅಭ್ಯರ್ಥಿ ಕರೆಸಿ ಇಲ್ಲಿ ನಿಲ್ಲಿಸಿದ್ದಾರೆ. ಆದ್ರೆ ನಾವು ಸ್ಥಳೀಯ ನಾಯಕರಿಗೆ ಅವಕಾಶ ನೀಡಿದ್ದೇವೆ ಎಂದರು.