ಸುಕೇಶ್ ಚಂದ್ರಶೇಖರ್ (Sukesh Chandrasekhar) ಮಾಡಿದ್ದಾರೆ ಎನ್ನಲಾದ 200 ಕೋಟಿ ವಂಚನೆ (Fraud) ಪ್ರಕರಣದಲ್ಲಿ ಈವರೆಗೂ ಇಬ್ಬರ ನಟಿಯರ ಹೆಸರು ಮಾತ್ರ ಕೇಳಿ ಬಂದಿತ್ತು. ದೆಹಲಿ ಪೊಲೀಸರ ಆರ್ಥಿಕ ವಿಭಾಗವು ಇನ್ನೂ ನಾಲ್ವರ ನಟಿಯರ ಹೆಸರನ್ನು ಬಹಿರಂಗ ಪಡಿಸಿದೆ. ಸುಕೇಶ್ ಚಂದ್ರಶೇಖರ್ ನೀಡುತ್ತಿದ್ದ ಗಿಫ್ಟ್ ಆಸೆಗೆ ಕೇವಲ ಜಾಕ್ವೆಲಿನ್ ಫರ್ನಾಂಡಿಸ್ ಮಾತ್ರವಲ್ಲ, ಇನ್ನೂ ನಾಲ್ವರ ನಟಿಯರು ಕೂಡ ಫಲಾನುಭವಿಗಳು ಆಗಿದ್ದರು ಎಂದು ಹೇಳಲಾಗಿದೆ.
ತಾನು ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಂಬಂಧಿ ಎಂದು ಹೇಳಿಕೊಳ್ಳುವ ಮೂಲಕ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಗೆ ಸುಕೇಶ್ ಬಲೆ ಬೀಸಿದ್ದ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದ್ದು, ದುಬಾರಿ ಗಿಫ್ಟ್ ನೀಡುವ ಮೂಲಕ ಜಾಕ್ವೆಲಿನ್ ಸ್ನೇಹ ಬೆಳೆಸಿದ್ದ ಎಂದು ಉಲ್ಲೇಖಿಸಲಾಗಿದೆ. ಜಾಕ್ವೆಲಿನ್ ಸ್ನೇಹಕ್ಕೆ ಕೋಟಿ ಕೋಟಿ ಬೆಲೆಬಾಳುವ ಉಡೊಗೊರೆಯನ್ನು ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗಾಗಿ ದೆಹಲಿ (Delhi) ಪೊಲೀಸರ ಆರ್ಥಿಕ ವಿಭಾಗವು ಜಾಕ್ವೆಲಿನ್ ಗೆ ನೋಟಿಸ್ ನೀಡಿ ವಿಚಾರಣೆ (inquiry) ನಡೆಸುತ್ತಿದೆ. ಇದನ್ನೂ ಓದಿ:ಕ್ರಿಕೆಟಿಗ ರಿಷಭ್ ಪಂತ್ ಗೆ ನಾನು ಕ್ಷಮೆ ಕೇಳಿಲ್ಲ, ಕೇಳೋದು ಇಲ್ಲ: ನಟಿ ಊರ್ವಶಿ ರೌಟೇಲಾ
ಜಾಕ್ವೆಲಿನ್ ಸ್ನೇಹ ಬೆಳೆಸಲು ಜಯಲಲಿತಾ ಅವರ ಸಂಬಂಧಿ ಎಂದು ಸುಕೇಶ್ ನಾಟಕವಾಡಿದ್ದರೆ, ಮತ್ತೊಂದು ನಟಿಯ ಜೊತೆಗೆ ಸಲುಗೆಯಿಂದ ಇರಲು ಹೆಸರು ಕೂಡ ಬದಲಾಯಿಸಿಕೊಂಡಿದ್ದ ಎಂದು ಹೇಳಲಾಗುತ್ತಿದೆ. ಇವರಿಗೆಲ್ಲ ಕೊಂಡಿಯಾಗಿ ಪಿಂಕಿ ಇರಾನಿಯೇ (Pinky Irani) ಕೆಲಸ ಮಾಡಿದ್ದಾರೆ. ಜಾಕ್ವೆಲಿನ್ ಹತ್ತಿರವಾಗಲು ಇದೇ ಪಿಂಕಿ ಕಾರಣವಂತೆ. ಹಾಗಾಗಿ ಈಗಾಗಲೇ ಪಿಂಕಿ ಮತ್ತು ಜಾಕ್ವೆಲಿನ್ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.
ಜಾಕ್ವೆಲಿನ್ ಮಾತ್ರವಲ್ಲ ಇನ್ನೂ ನಾಲ್ವರು ನಟಿಯರಾದ ನಿಕಿತಾ ತಾಂಬೋಲಿ, ಚಾಹತ್ ಖನ್ನಾ, ಸೋಫಿಯಾ ಸಿಂಗ್ ಮತ್ತು ಅರುಷಾ ಪಾಟೀಲ್ ಇವರನ್ನು ಕೂಡ ಪಿಂಕಿಯೇ ಸುಕೇಶ್ ಮನೆಗೆ ಕರೆದುಕೊಂಡು ಹೋಗಿದ್ದರಂತೆ. ಅಲ್ಲದೇ, ಈ ನಾಲ್ವರು ನಟಿಯರು ಕೂಡ ಸುಕೇಶ್ ಇದ್ದ ಜೈಲಿಗೂ ಹೋಗಿ ಬಂದಿದ್ದಾರೆ ಎನ್ನಲಾಗುತ್ತಿದೆ. ಈ ನಾಲ್ವರಿಗೂ ಕೂಡ ಸುಕೇಶ್ ಭಾರೀ ಮೊತ್ತದ ಉಡುಗೊರೆಯನ್ನೇ ನೀಡಿದ್ದಾನೆ ಎಂದು ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ. ಕೆಲವರು ಅದನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.