ಬೆಂಗಳೂರು: ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಇವುಗಳು ಅಸಮಾನತೆ ಇರುವ ಧರ್ಮ. ವೀರಶೈವದಲ್ಲಿ ಲಿಂಗಬೇಧ, ದೇವಾಲಯದ ಆಚರಣೆ, ಜಾತಿ ಬೇಧ ಒಪ್ಪಿಕೊಂಡಿದ್ದಾರೆ. ಆದ್ರೇ ಇದು ಬಸವಣ್ಣ ಒಪ್ಪಲಿಲ್ಲ. ಲಿಂಗಾಯತ ವೀರಶೈವ ಧರ್ಮ ನಮಗೆ ಬೇಕಾಗಿಲ್ಲ. ನಮ್ಮ ಒಗ್ಗಟ್ಟು ಒಡೆಯಲು ಮುಂದಾಗಿದ್ದು ಹಿಂದೂ ಧರ್ಮ, ಸುತ್ತೂರು ಮಠ ಹಾಗೂ ಯಡಿಯೂರಪ್ಪ ಅಂತ ನಟ ಚೇತನ್ ಹೇಳಿದ್ದಾರೆ.
ನಗರದ ಬಸವ ಸಮಿತಿಯಲ್ಲಿ ನಡೆಯುತ್ತಿರುವ ಲಿಂಗಾಯತ ಧರ್ಮ- ಸ್ವತಂತ್ರ ಧರ್ಮ ನಿರ್ಣಾಯಕ ಸಭೆಯಲ್ಲಿ ಮಾತನಾಡಿದ ಚೇತನ್, ಬಸವಣ್ಣನವರ ಹೆಸರನ್ನು ರಾಜಕೀಯ ಪಕ್ಷದವರು ದುರುಪಯೋಗ ಮಾಡಿಕೊಳ್ಳುತ್ತಾರೆ. ಬಿಜೆಪಿ ಕಾರ್ಯಕ್ರಮದಲ್ಲಿ ಸಿನಿಮಾ ರಂಗದವರೊಬ್ಬರು ಆಭಿನವ ಬಸವಣ್ಣ ಅಂತ ವರ್ಣಿಸಿದ್ರು. ಭ್ರಷ್ಟಾಚಾರದ ಆರೋಪ ಹೊತ್ತಿರುವ ಯಡಿಯೂರಪ್ಪ, ದಲಿತರ ಮನೆಯಲ್ಲಿ ತಿಂಡಿ ತಿನ್ನೋ ಡ್ರಾಮಾ ಮಾಡುವ ಯಡಿಯೂರಪ್ಪ ಆಧುನಿಕ ಕೊಂಡಿ ಮನುಷ್ಯ ಅಂತ ಆಕ್ರೋಶ ವ್ಯಕ್ತಪಡಿಸಿದ್ರು.
12 ಶತಮಾನದ ಶರಣರ ತತ್ವ 21ನೇ ಶತಮಾನದಲ್ಲಿ ಪುರೋಹಿತ ಶಾಹಿಯಾಗಿ ಬದಲಾವಣೆ ಆಗಿದೆ. ಇದು ದೇಶಕ್ಕೆ, ರಾಜ್ಯಕ್ಕೆ ಒಳ್ಳೆಯದಲ್ಲ. ಇದು ದಶಕದ ಬೇಡಿಕೆ, ಸಂವಿಧಾನದಲ್ಲಿ ಪ್ರತ್ಯೇಕ ಧರ್ಮ ರಚನೆಗೆ ಅವಕಾಶವಿದೆ ಅಂತ ಅವರು ಹೇಳಿದ್ರು.
ನಟ ಚೇತನ್ ಅವರ ಈ ಹೇಳಿಕೆಗೆ ಸಭೆಯಲ್ಲಿ ಭಾಗಿಯಾಗಿದ್ದ ಶಿವಕುಮಾರ್ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ರು. ಈ ವೇಳೆ ಪೊಲೀಸರು ಬಂದು ಶಿವಕುಮಾರ್ ನನ್ನು ಕತ್ತು ಹಿಡಿದು ಹೊರ ದಬ್ಬಿದ್ರು. ಅಲ್ಲದೇ ಇದೇ ಸಂದರ್ಭದಲ್ಲಿ ಶಿವಕುಮಾರ್ ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು. ಸಿದ್ದರಾಮಯ್ಯ ಏನು ಮಾಡಿದ್ದಾರೆ ಹೇಳಿ? ಯಡಿಯೂರಪ್ಪ ಅವರನ್ನ ಪದೇ ಪದೇ ಯಾಕೆ ಬೈಯುತ್ತೀರಿ ಎಂದು ಶಿವಕುಮಾರ್ ಕೂಗಾಡಿದ್ರು. ಒಟ್ಟಿನಲ್ಲಿ ಯಡಿಯೂರಪ್ಪ ವಿರುದ್ಧ ನಟ ಚೇತನ್ ವಾಗ್ದಾಳಿ ಹಿನ್ನೆಲೆಯಲ್ಲಿ ಸಭೆಯಲ್ಲಿ ಕೊಂಚ ಗೊಂದಲ ಉಂಟಾಯಿತು.
ಇದೇ ಸಂದರ್ಭದಲ್ಲಿ ಬೇಲಿ ಮಠದ ಶಿವರುದ್ರ ಮಹಾಸ್ವಾಮಿ ಸ್ವಾಮಿ ಮಾತನಾಡಿ, ಲಿಂಗಾಯಿತ ಮಾತ್ರ ಧರ್ಮ, ಉಳಿದೆಲ್ಲವೂ ಮತ. ವೀರಶೈವ ದಲ್ಲಿ ಜಾತಿ ಆಧಾರದ ಮೇಲೆ ಲಿಂಗವನ್ನು ವಿಂಗಡನೆ ಮಾಡಿದರು. ಬ್ರಾಹ್ಮಣರಿಗೆ ಸ್ಫಟಿಕ, ಶೂದ್ರರಿಗೆ ಮಣ್ಣಿನ ಲಿಂಗ ಕೊಟ್ಟ ಅವಿವೇಕದ ಪರಮಾವಾಧಿಯನ್ನು ಹೇಳಿಕೊಟ್ಟಿದೆ. ಆದ್ರೆ ಬಸವಣ್ಣ ಕಾಯಕದಲ್ಲಿಯೇ ಶಿವಲಿಂಗವನ್ನು, ಬದುಕಿನಲ್ಲಿಯೇ ಶಿವಲಿಂಗವನ್ನು ಕಂಡುಕೊಳ್ಳುವ ಬಗ್ಗೆ ಹೇಳಿದ್ರು ಅಂತ ವಾಗ್ದಾಳಿ ನಡೆಸಿದ್ರು.
ಬ್ರಾಹ್ಮಣರು ಸ್ಫಟಿಕದ ಲಿಂಗ ಪೂಜಿಸಬೇಕು, ಕ್ಷತ್ರಿಯರು ಬಂಗಾರ, ಶೂದ್ರರು ತಾಮ್ರದ ಲಿಂಗ ಮತ್ತು ಅಸ್ಪೃಶ್ಯರು ಮಣ್ಣಿನ ಲಿಂಗ ಪೂಜಿಸಬೇಕು ಎನ್ನುವವರು ಅವರು. ಲಿಂಗ ಪೂಜೆಯಲ್ಲೂ ತಾರತಮ್ಯ ಮಾಡುವುದು ಅವಿವೇಕದ ಪರಮಾವಧಿ. ಹಿಂದೂ ಧರ್ಮದ ಅನುಯಾಯಿಗಳು ಅಂತಾ ಹೇಳಿಕೊಳ್ಳುವ ದರ್ದು, ಹಂಗು ನಮಗಿಲ್ಲ. ಜೈನ, ಬೌದ್ಧ, ಸಿಖ್‍ರಂತೆ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕತೆ ಕೊಡಿ. ಎಲ್ಲೋ ಏನೂ ಸಿಗತ್ತೆ ಅಂತಾ ತುಪ್ಪದ ಆಸೆಗೆ ಎಂಜಲು ನೆಕ್ಕುವವರಲ್ಲ ನಾವು. ಎಸ್‍ಸಿ-ಎಸ್‍ಟಿಗಳಂತೆ ಸ್ಥಾನಮಾನ ನಾವು ಕೇಳಲ್ಲ ಅಂತ ಕಿಡಿಕಾರಿದ್ರು.
ಇದೇ ವೇಳೆ ಮಾತೇ ಮಾದೇವಿ ಹಾಗೂ ರಂಭಾಪುರಿ ಶ್ರೀಗಳ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಶಿವರುದ್ರ ಸ್ವಾಮಿಗಳು, ಬಸವಣ್ಣನವರ ಬೆಳಕನ್ನು ಹಾಳು ಮಾಡಬೇಕು ಅಂತಾ ಸಾಕಷ್ಟು ಪುಸ್ತಕ ಬರೆದ್ರು. ಆದ್ರೆ ಬಸವಣ್ಣನ ಬೆಳಕು ಕಡಿಮೆಯಾಗಿಲ್ಲ. ಈಗ ಬಸವಣ್ಣ ವಿರೋಧಿ ಅಂತ ಹಣೆಪಟ್ಟಿ ಕಟ್ಟುತ್ತಿದ್ದಾರೆ ಅಂತ ಹೇಳುತ್ತಿದ್ದಾರೆ. ಈ ಬುದ್ಧಿ ಹಿಂದೆ ಎಲ್ಲಿ ಹೋಗಿತ್ತು ಅಂತ ಪ್ರಶ್ನಿಸಿದ್ರು.
ಸಭೆಯಲ್ಲಿ ಮುಸ್ಲಿಂ ಮುಖಂಡರು ಸೇರಿದಂತೆ ಸರ್ವಧರ್ಮಿಯರು, ರುದ್ರಾಕ್ಷಿ ಮಠದ ಸಿದ್ದರಾಮೇಶ್ವರ ಸ್ವಾಮೀಜಿ, ನಿಷ್ಕಲ ಮಂಟಪದ ನಿಜಗುಣಾನಂದ ತೊಂಟದಾರ್ಯ ಸ್ವಾಮೀಜಿ, ಬೇಲಿ ಮಠದ ಶಿವರುದ್ರ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಭಾಗಿಯಾಗಿದ್ದರು.
ಇತ್ತೀಚೆಗಷ್ಟೇ ಲಿಂಗಾಯತ-ವೀರಶೈವ ಎರಡು ಒಂದೇ ಎಂದು ಸಮಾವೇಶ ನಡೆಸಲಾಗಿತ್ತು. ರಂಭಾಪುರಿ ಶ್ರೀಗಳ ನೇತೃತ್ವದಲ್ಲಿ 500ಕ್ಕೂ ಹೆಚ್ಚು ಸ್ವಾಮೀಜಿಗಳು ಸಭೆ ನಡೆಸಿ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದ್ದರು.
https://www.youtube.com/watch?v=STXOtb7oEa0