ಚಿಕ್ಕಬಳ್ಳಾಪುರ: ಬೆಂಗಳೂರಿನಲ್ಲಿ ಮಾಜಿ ಡಿಸಿಎಂ ಜಿ.ಪರಮೇಶ್ವರ್ ನಿವಾಸದ ಮೇಲೆ ಐಟಿ ದಾಳಿ ನಡೆದರೆ ಇತ್ತ ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಂಸದ ಆರ್.ಎಲ್.ಜಾಲಪ್ಪ ಪುತ್ರ ರಾಜೇಂದ್ರ ಮತ್ತು ಸೋದರಳಿಯ ಜಿ.ಎಚ್ ನಾಗರಾಜ್ ಮನೆ ಮೇಲೆ ದಾಳಿ ನಡೆದಿದೆ. 10 ಮಂದಿ ಐಟಿ ಅಧಿಕಾರಿಗಳ ತಂಡದಿಂದ ಜಿ.ಎಚ್.ನಾಗರಾಜ್ ವಿಚಾರಣೆ ನಡೆಯುತ್ತಿದೆ.
ದೊಡ್ಡಬಳ್ಳಾಪುರದ ಸೋಮೇಶ್ಚರ ಬಡಾವಣೆಯಲ್ಲಿರುವ ರಾಜೇಂದ್ರ ನಿವಾಸದ ಮೇಲೆ ಐವರು ಅಧಿಕಾರಿಗಳಿಂದ ದಾಳಿ ನಡೆದಿದೆ. ರಾಜೇಂದ್ರ ದೊಡ್ಡಬಳ್ಳಾಪುರದಲ್ಲಿರುವ ಜಾಲಪ್ಪ ಇಂಜಿನಿಯರಿಂಗ್ ಕಾಲೇಜು ಮುಖ್ಯಸ್ಥರಾಗದ್ದಾರೆ. ಜಿ.ಎಚ್.ನಾಗರಾಜ್ ಹಾಲಿ ಕಾಂಗ್ರೆಸ್ ಮುಖಂಡರಾಗಿದ್ದು, ಆರ್ ಎಲ್ ಜಾಲಪ್ಪ ಆಸ್ಪತ್ರೆಯ ಕಾರ್ಯದರ್ಶಿಯೂ ಆಗಿದ್ದಾರೆ.
ಕೋಲಾರದ ಹೊರವಲಯದಲ್ಲಿರುವ ಆರ್.ಎಲ್.ಜಾಲಪ್ಪ ಆಸ್ಪತ್ರೆ ಮತ್ತು ದೇವರಾಜ ಅರಸು ಮೆಡಿಕಲ್ ಕಾಲೇಜುಗಳ ಮೇಲೆ ಹತ್ತಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಾಲೇಜು ಮತ್ತು ಆಸ್ಪತ್ರೆಯ ಕಚೇರಿಯ ಒಳಗಡೆ ಯಾರನ್ನು ಬಿಡದೇ ಅಧಿಕಾರಿಗಳು ದಾಖಲಾತಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.