ಚಾಮರಾಜನಗರ: ಸಿದ್ದರಾಮಯ್ಯ ರಾಜ್ಯದ ಸಿಎಂ ಆಗಿದ್ದವರು, ಅವರು ಚುನಾವಣೆಯಿಂದ ಚುನಾವಣೆಗೆ ಕ್ಷೇತ್ರ ಬದಲಿಸುವುದು ಸರಿಯಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಲಹೆ ಕೊಟ್ಟರು.
ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಅಗಿದ್ದ ಅವರನ್ನು 224 ಕ್ಷೇತ್ರದಲ್ಲೂ ಕರೆಯೋದು ಸರ್ವೇ ಸಾಮಾನ್ಯ. ಅವರು ಸಿಎಂ ಆಗಿದ್ದವರು, ಅವರ ಜಿಲ್ಲೆಯಲ್ಲಿ ಕೈ ಬಿಟ್ಟರೂ ಬೇರೆ ಜಿಲ್ಲೆಯವರು ಕೈ ಹಿಡಿದರು. ಈಗ ಬಾದಾಮಿಯಿಂದಲೂ ಬೇರೆ ಕಡೆ ಹೋಗ್ತೀನಿ ಅಂದ್ರೆ ಯಾವ ಸಂದೇಶ ಕೊಡ್ತಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಅಗ್ನಿಪಥ್ ಸೇರುವ ಯುವಕರಿಗೆ ದೈಹಿಕ ತರಬೇತಿ ಕೊಡಲು ನೆರವಾದ ಕೋಲಾರ ಕ್ರೀಡಾ ಸಂಸ್ಥೆ
ದೊಡ್ಡ ನಾಯಕರು, ಅಪಾರ ರಾಜಕೀಯ ಅನುಭವವುಳ್ಳವರು. ಇಂತವರು ಚುನಾವಣೆಯಿಂದ ಚುನಾವಣೆಗೆ ಬೇರೆ ಕ್ಷೇತ್ರ ಹುಡುಕುವುದು ಸರಿಯಲ್ಲ ಎಂದು ಟಾಂಗ್ ಕೊಟ್ಟರು. ಪಿಎಸ್‍ಐ ಅಕ್ರಮ ನೇಮಕಾತಿ ವಿಚಾರ ಸಂಬಂಧ ಗೃಹ ಸಚಿವರ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹದ ಬಗ್ಗೆ ಮಾತನಾಡಿದ ಅವರು, ಅನೇಕ ವರ್ಷಗಳಿಂದ ನೋಡಿದ್ದೇವೆ. ಈ ರೀತಿ ಗಂಭೀರ ತನಿಖೆಯಾಗಿಲ್ಲ. ಹಿರಿಯ ಅಧಿಕಾರಿಗಳನ್ನ ಅರೆಸ್ಟ್ ಮಾಡಿರುವ ಯಾವುದಾದರೂ ಸರ್ಕಾರ ಇದ್ದರೆ ಅದು ಬಿಜೆಪಿ ಸರ್ಕಾರ. ಈ ವಿಚಾರವಾಗಿ ಮಾತನಾಡಲು ಕಾಂಗ್ರೆಸ್ ಅವರಿಗೆ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.
ಎಲ್ಲ ತನಿಖೆ ಅಪಾದನೆ ಮುಚ್ಚಿ ಹಾಕ್ಕಿದ್ದು ಕಾಂಗ್ರೆಸ್ ಸರ್ಕಾರ. ಕೆಂಪಣ್ಣ ಆಯೋಗ, ರಿಡೋ ಏನಾಯ್ತು? ಈ ಬಗ್ಗೆ ಅವರು ಮಾತನಾಡದೆ ಇದ್ರೆ ಕಾಂಗ್ರೆಸ್ ಅವರಿಗೆ ಒಳ್ಳೆಯದು ಎಂದು ಎಚ್ಚರಿಕೆ ಕೊಟ್ಟರು.
ಕೋವಿಡ್ ನಂತರದ ಆರೋಗ್ಯ ಸಮಸ್ಯೆಯಲ್ಲಿ ಉಂಟಾಗುತ್ತಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೆಲವು ಕಡೆ ಹೃದಯ ಸಮಸ್ಯೆ ಕಂಡುಬಂದಿದೆ. ಅದು ಕೋವಿಡ್‍ನಿಂದಲೇ ಅಂತಾ ಹೇಳುವುದಕ್ಕಾಗಲ್ಲ. ಇದರ ಬಗ್ಗೆ ಸುದೀರ್ಘ ಅಧ್ಯಯನ ನಡೆಯಬೇಕಿದೆ. ಕೋವಿಡ್ ಬಂದು ಎರಡು ವರ್ಷವಾಗಿದೆ. ಅದರ ಬಗ್ಗೆ ಅಧ್ಯಯನ ಮಾಡಲು ಬಹಳ ವರ್ಷ ಬೇಕು ಎಂದು ವಿವರಿಸಿದರು. ಇದನ್ನೂ ಓದಿ: ಸಾವಿರದ ಗಡಿ ದಾಟಿದ ಕೊರೊನಾ ಪಾಸಿಟಿವ್ ಪ್ರಕರಣ – 1,044 ಮಂದಿ ಡಿಸ್ಚಾರ್ಜ್
ಆಯಾಸ, ಮರೆವು, ಹೃದಯ ಸಮಸ್ಯೆ, ರಕ್ತನಾಳದ ಸಮಸ್ಯೆ ಈ ರೀತಿಯ ಸಮಸ್ಯೆ ಕಂಡುಬಂದಿದೆ. ನೇರವಾಗಿ ಕೋವಿಡ್ ನಂತರ ಬಂದಿದೆ ಅಂತಾ ಹೇಳಲು ಸಾಧ್ಯವಿಲ್ಲ. ಅಧ್ಯಯನದ ಅಂತಿಮ ವರದಿ ಬಂದ ನಂತರ ಗೊತ್ತಾಗುತ್ತೆ ಎಂದರು.