ಚಾಮರಾಜನಗರ: ಈಗ ಮಳೆ ಬರ್ತಿದೆ. ಈಗಲೇ ಬಿತ್ತನೆ ಕಾರ್ಯ ಶುರು ಮಾಡಿ. ಒಂದು ವೇಳೆ ಬಿತ್ತನೆ ಮಾಡಿಲ್ಲ ಅಂದ್ರೆ ನಿಮ್ಮ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಚಾಮರಾಜನಗರದ ಜಿಲ್ಲಾಧಿಕಾರಿ ಬಿ.ರಾಮು ಆದೇಶ ಹೊರಡಿಸಿದ್ದಾರೆ.
ಬರಗಾಲದಲ್ಲಿ ರೈತರ ನೆರವಿಗೆ ಬಾರದ ಜಿಲ್ಲಾಡಳಿತ ಇದೀಗ ಎರಡು ಮೂರು ಬಾರಿ ಮಳೆ ಬಿದ್ದ ತಕ್ಷಣವೇ ಬಿತ್ತನೆ ಕಾರ್ಯದಲ್ಲಿ ತೊಡಗಿಕೊಳ್ಳಿ ಎಂದು ಆದೇಶ ನೀಡಿದೆ. ಒಂದು ವೇಳೆ ಬಿತ್ತನೆ ಕಾರ್ಯದಲ್ಲಿ ತೊಡಿಗಿಕೊಳ್ಳದಿದ್ದರೆ ರೈತರಿಗೆ ಭೂ ಸುಧಾರಣೆ ಕಾಯ್ದೆಯಡಿ ನೋಟಿಸ್ ಜಾರಿ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ರೈತರ ಮೇಲೆ ಜಿಲ್ಲಾಧಿಕಾರಿಗಳು ಹಕ್ಕು ಚಲಾವಣೆ ಮಾಡಿದ್ದಾರೆ.
ಡಿಸಿ ಒಬ್ಬ ಮೂರ್ಖ: ಇವಾಗ್ಲೇ ಬಿತ್ತನೆ ಮಾಡಿ ಎಂಬುವುದು ದುರಂಹಕಾರ ಆದೇಶ. ಬಿತ್ತನೆ ಮಾಡದೇ ಇದ್ದರೆ ಕ್ರಮ ತೆಗೆದುಕೊಳ್ಳುವುದಾಗಿ ಆದೇಶ ನೀಡಿದ್ದಾರೆ. ಕೂಡಲೇ ಅದನ್ನ ಹಿಂಪಡೆಯಬೇಕು. ಇದೊಂದು ನಾಚಿಕೆಗೇಡಿತನದ ಕೆಲಸ. ಡಿಸಿ ಒಬ್ಬ ಮೂರ್ಖ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರದಲ್ಲಿ ಕಳೆದ ಐದು ವರ್ಷಗಳಿಂದ ಭೀಕರ ಬರಗಾಲ ಆವರಿಸಿದ್ದು, ಇದರಿಂದ ಮಣ್ಣಿನ ಸತ್ವ ಸಂಪೂರ್ಣ ಕಳೆದುಕೊಂಡಿದೆ. ಇದೀಗ ಕಳೆದ ಒಂದು ತಿಂಗಳಿಂದ ಜಿಲ್ಲೆಯಲ್ಲಿ ತಕ್ಕ ಮಟ್ಟಿಗೆ ಮಳೆ ಆಗುತ್ತಿದೆ. ಹೀಗಾಗಿ ರೈತರು ತಮ್ಮ ಜಮೀನನ್ನು ಉತ್ತು ಹದ ಮಾಡಿಕೊಂಡು ಮಣ್ಣನ್ನು ಫಲವತ್ತುಗೊಳಿಸುತ್ತಿದ್ದಾರೆ. ಹೀಗಿರುವಾಗ ಏಕಾ ಏಕಿ ಜಿಲ್ಲಾಧಿಕಾರಿಗಳು ಹೊರಡಿಸಿರುವ ಈ ಆದೇಶದಿಂದ ರೈತರು ಆಕ್ರೋಶಗೊಂಡಿದ್ದು, ಡಿಸಿ ತಮ್ಮ ಆದೇಶವನ್ನು ವಾಪಸ್ಸು ಪಡೆದು ರೈತರ ಕ್ಷಮೆ ಯಾಚನೆ ಮಾಡಬೇಕೆಂದು ಜಿಲ್ಲೆಯ ರೈತರು ಆಗ್ರಹಿಸಿದ್ದಾರೆ.