ಹಾಸನ: ದ್ವಿಚಕ್ರ ವಾಹನದಲ್ಲಿ ಸುಮಾರು 25 ಲಕ್ಷ ರೂ. ಹಣದೊಂದಿಗೆ ತೆರಳುತ್ತಿದ್ದ ಯುವಕನನ್ನು ಐಟಿ ಅಧಿಕಾರಿಗಳು ಹೊಳೆನರಸೀಪುರ ಪಟ್ಟಣದಲ್ಲಿ ವಶಕ್ಕೆ ಪಡೆದಿದ್ದಾರೆ.
ಹಳೇ ಮೈಸೂರು ಕಡೆಯಿಂದ 30 ವರ್ಷದ ಯುವಕೊಬ್ಬ ಹೊಳೆನರಸೀಪುರ ಕಡೆಗೆ ಭಾರೀ ಹಣದೊಂದಿಗೆ ತೆರಳುತ್ತಿರುವ ಖಚಿತ ಮಾಹಿತಿ ಐಟಿ ಅಧಿಕಾರಿಗಳಿಗೆ ಲಭಿಸಿತ್ತು. ಮಾಹಿತಿ ಲಭಿಸುತ್ತಿದಂತೆ ಕಾರ್ಯಾಚರಣೆಗೆ ಇಳಿದ ಐಟಿ ಅಧಿಕಾರಿಗಳ ತಂಡ ಯುವಕನನ್ನು ಅಡ್ಡಗಟ್ಟಿ ವಶಕ್ಕೆ ಪಡೆದಿದೆ. ಆ ವೇಳೆ ಯುವಕನ ಬಳಿ 25 ಲಕ್ಷ ರೂ. ಹಣ ಪತ್ತೆಯಾಗಿದೆ.
ಬೆಂಗಳೂರು ಮೂಲದ ರಿಜಿಸ್ಟರ್ ನಂಬರ್ ಇರುವ ಬೈಕಿನಲ್ಲಿ ಯುವಕ ತೆರಳುತ್ತಿದ್ದ. ಸದ್ಯ ಯುವಕನನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಹಣದ ಮೂಲದ ಬಗ್ಗೆ ಪ್ರಶ್ನಿಸಿ ತನಿಖೆ ನಡೆಸುತ್ತಿದ್ದಾರೆ. ಆದರೆ ಯುವಕ ಇದು ಅಡಿಕೆ ಮಾರಾಟ ಮಾಡಿದ ಹಣ ಎಂದು ಮಾಹಿತಿ ನೀಡಿದ್ದಾನೆ. ಆದರೆ ಅದಕ್ಕೆ ಸೂಕ್ತ ದಾಖಲೆ ನೀಡಿಲ್ಲ. ಇಂದು ಬೆಳಗ್ಗೆ 11 ಗಂಟೆ ಸಮಯದಲ್ಲಿ ಘಟನೆ ನಡೆದಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹಾಸನ ಜಿಲ್ಲಾಧಿಕಾರಿ, ಎಸ್‍ಪಿ ವರ್ಗಾವಣೆ ಮಾಡಿದ ಬಳಿಕ ಜೆಡಿಎಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಅವರ ವಿರುದ್ಧ ಮಾತನಾಡುವ ನಾಯಕರನ್ನೇ ಟಾರ್ಗೆಟ್ ಮಾಡಿ ಕೇಂದ್ರ ಸರ್ಕಾರದ ದಾಳಿ ನಡೆಸಿದೆ. ಬಿಜೆಪಿ ಹೇಳಿದಂತೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಇತ್ತ ಜೆಡಿಎಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕರು , ಹಾಸನದಲ್ಲಿ ರಾಜ್ಯ ಸರ್ಕಾರದ ಯೋಜನೆಗಳು ಪೂರ್ಣಗೊಳ್ಳದೆಯೇ ಹಣ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ಪಡೆದು ಐಟಿ ದಾಳಿ ನಡೆಸಿದೆ ವಿನಃ ಬಿಜೆಪಿ ಯಾವುದೇ ರೀತಿಯಲ್ಲಿ ಇದರಲ್ಲಿ ತೊಡಗಿಲ್ಲ. ಸಂಸ್ಥೆಗಳು ಸ್ವತಂತ್ರ ತನಿಖೆ ನಡೆಸಲು ಅರ್ಹವಾಗಿದೆ. ಅದರಂತೆ ದಾಳಿ ನಡೆದಿದೆ ಎಂದು ಅಷ್ಟೇ ಎಂದು ಹೇಳಿದ್ದರು.