– ಇಸ್ರೋ, ನಾಸಾ ಜಂಟಿಯಾಗಿ ಅಭಿವೃದ್ಧಿ ಪಡಿಸಿದ ಉಪಗ್ರಹ
– ಜಿಎಸ್‌ಎಲ್‌ವಿ- ಎಫ್16 ರಾಕೆಟ್ ಮೂಲಕ ಉಡಾವಣೆ
ಶ್ರೀಹರಿಕೋಟ: ಮೊದಲ ಬಾರಿಗೆ ಇಸ್ರೊ (ISRO) ಮತ್ತು ಅಮೆರಿಕದ ನಾಸಾ (NASA) ಜಂಟಿಯಾಗಿ ಅಭಿವೃದ್ಧಿಪಡಿಸಿದ ಭೂಮಿ ಸಮೀಕ್ಷೆಯ ಸಿಂಥೆಟಿಕ್ ಅಪರ್ಚರ್ ರೇಡಾರ್ ಉಪಗ್ರಹ ಉಡಾವಣೆ ಯಶಸ್ವಿಯಾಗಿದೆ.
ಇಂದು ಸಂಜೆ 5:40ಕ್ಕೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರಿಂದ ಜಿಎಸ್‌ಎಲ್‌ವಿ- ಎಫ್16 ರಾಕೆಟ್ ಮೂಲಕ ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರೇಡಾರ್ (NISAR) ಉಡಾವಣೆ ಮಾಡಲಾಯಿತು. ಉಪಗ್ರಹ ಯಶಸ್ವಿಯಾಗಿ ಕಕ್ಷೆಗೆ ತಲುಪುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮಹತ್ವದ ಮೈಲಿಗಲ್ಲು ನಿರ್ಮಿಸಿದೆ.
2,392 ಕೆಜಿ ತೂಕದ ಮತ್ತು ಡ್ಯುಯಲ್-ಫ್ರೀಕ್ವೆನ್ಸಿ ರೇಡಾರ್ ವ್ಯವಸ್ಥೆಗಳಿಂದ (L-ಬ್ಯಾಂಡ್ ಮತ್ತು S-ಬ್ಯಾಂಡ್) ಚಾಲಿತವಾಗಿರುವ NISAR ಉಪಗ್ರಹ ವಿಪತ್ತುಗಳು, ಹವಾಮಾನ ಬದಲಾವಣೆಗಳು ಮತ್ತು ಪರಿಸರ ಬದಲಾವಣೆಗಳ ಕುರಿತು ನೈಜ-ಸಮಯದ ಡೇಟಾವನ್ನು ನೀಡಲಿದೆ. ಎಲ್ಲಾ ಹವಮಾನದಲ್ಲಿ ಹಗಲು ಮತ್ತು ರಾತ್ರಿಯ ವೇಳೆ ಹೆಚ್ಚಿನ ರೆಸಲ್ಯೂಶನ್ ಇರುವ ಚಿತ್ರವನ್ನು ಸೆರೆ ಹಿಡಿಯಲಿದೆ.
ಎಲ್–ಬ್ಯಾಂಡ್ ಅನ್ನು ನಾಸಾ ತಯಾರಿಸಿದ್ದರೆ ಎಸ್–ಬ್ಯಾಂಡ್ ಅನ್ನು ಇಸ್ರೊ ತಯಾರಿಸಿದೆ. ಎಸ್–ಬ್ಯಾಂಡ್ ಅನ್ನು ಸಿಂಥೆಟಿಕ್ ಅಪರ್ಚರ್ ರೇಡಾರ್‌ನಲ್ಲಿ ಅಳವಡಿಸಲಾಗುತ್ತದೆ. ಇದರಿಂದ ಭೂಮಿಗೆ ಸಂಬಂಧಿಸಿದಂತೆ ದತ್ತಾಂಶ ಸಂಗ್ರಹ ಸಾಧ್ಯವಾಗಲಿದೆ.
13,000 ಕೋಟಿ ವೆಚ್ಚ:
ಇನ್ನೂ ನಿಸಾರ್ ಭೂಸರ್ವೇಕ್ಷಣಾ ಉಪಗ್ರಹಕ್ಕೆ 13,000 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ವಿಶ್ವದ ಅತ್ಯಂತ ದುಬಾರಿ ಕಣ್ಗಾವಲು ಉಪಗ್ರಹವಾಗಿ ಗುರುತಿಸಿಕೊಂಡಿದೆ. ಅಲ್ಲದೇ ನಿಸಾರ್ ಉಪಗ್ರಹವು ಒಂದು ಬಾರಿಗೆ 242 ಕಿಮೀ ಭೂವಿಸ್ತೀರ್ಣವನ್ನು ನೋಡುವ ಸಾಮರ್ಥ್ಯ ಹೊಂದಿದೆ. 97 ನಿಮಿಷಕ್ಕೆ ಭೂಮಿಗೆ ಒಂದು ಸುತ್ತು ಬರಲಿದೆ. ಮುಖ್ಯವಾಗಿ ನಿಸಾರ್ ಉಪಗ್ರಹವು ಕಳುಹಿಸುವ ಎಲ್ಲ ಮಾಹಿತಿಗಳು ಹಾಗೂ ದತ್ತಾಂಶಗಳನ್ನು ಉಚಿತವಾಗಿ ಎಲ್ಲಾ ದೇಶಗಳು ಅಧ್ಯಯನಕ್ಕೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದನ್ನೂ ಓದಿ: ಭಾರತದ ಮೇಲೆ ಟ್ರಂಪ್ ತೆರಿಗೆ ಸಮರ : ಆ.1 ರಿಂದಲೇ 25% ಸುಂಕ
ಉಪಹ್ರಹದಿಂದ ಏನು ಲಾಭ?
ಅರಣ್ಯ ಮತ್ತು ಜೀವವೈವಿಧ್ಯ ಸಂರಕ್ಷಣೆ: ದಟ್ಟವಾದ ಸಸ್ಯವರ್ಗವನ್ನು ಭೇದಿಸುವ ಸಾಮರ್ಥ್ಯವನ್ನು NISAR ಹೊಂದಿರುವುದು ವಿಶೇಷ. ಅರಣ್ಯನಾಶ, ಅರಣ್ಯದಲ್ಲಿ ಆಗುವ ಬದಲಾವಣೆಯನ್ನು ನಕ್ಷೆ ಮಾಡುವಲ್ಲಿ ಪ್ರಬಲ ಸಾಧನವಾಗಿ ಬಳಕೆಯಾಗಲಿದೆ. ಅಕ್ರಮ ಮರ ಕಡಿಯುವಿಕೆಯನ್ನು ಪತ್ತೆಹಚ್ಚಲು, ಅಳಿವಿನಂಚಿನಲ್ಲಿರುವ ಪರಿಸರ ವ್ಯವಸ್ಥೆಗಳನ್ನು ರಕ್ಷಿಸಲು ಡೇಟಾವನ್ನು ಬಳಸಬಹುದು.
ವಿಪತ್ತು ನಿರ್ವಹಣೆ: ಭೂಕಂಪಗಳು, ಭೂಕುಸಿತಗಳು, ಪ್ರವಾಹಗಳು, ಜ್ವಾಲಾಮುಖಿ ಚಟುವಟಿಕೆಗಳು ಮತ್ತು ಇತರ ನೈಸರ್ಗಿಕ ವಿಕೋಪಗಳ ಬಗ್ಗೆ NISAR ರಿಯಲ್ ಟೈಂ ಡೇಟಾವನ್ನು ಒದಗಿಸಲಿದೆ.ಅಧಿಕಾರಿಗಳು ಈ ಡೇಟಾವನ್ನು ಬಳಸಿಕೊಂಡು ಹಾನಿಯನ್ನು ನಕ್ಷೆ ಮಾಡಲು, ವಿಪತ್ತಿನ ಪ್ರಗತಿಯನ್ನು ಪತ್ತೆಹಚ್ಚಲು ಸಹಕಾರಿಯಾಗಲಿದೆ. ಇದನ್ನೂ ಓದಿ: ಉಗ್ರರ ಸಂಹಾರಕ್ಕೆ ಭಾರತೀಯ ಸೇನೆಗೆ ನೆರವಾಗಿದ್ದು ಬೆಂಗಳೂರಿನ ʻಇಸ್ರೋʼ
ಹವಾಮಾನ ಮೇಲ್ವಿಚಾರಣೆ: ಉಪಗ್ರಹವು ಹಿಮನದಿ ಕರಗುವಿಕೆ, ಸಮುದ್ರ ಮಟ್ಟ ಏರಿಕೆ, ಮಣ್ಣಿನ ತೇವಾಂಶ ಟ್ರ್ಯಾಕ್ ಮಾಡುತ್ತದೆ. ವಿಜ್ಞಾನಿಗಳಿಗೆ ಜಾಗತಿಕ ತಾಪಮಾನ ಏರಿಕೆಯ ವೇಗ ಮತ್ತು ಅದರ ಪ್ರಾದೇಶಿಕ ಪರಿಣಾಮಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಕೃಷಿ ಮುನ್ಸೂಚನೆ: NISAR ಬೆಳೆ ಬೆಳವಣಿಗೆ, ಮಣ್ಣಿನ ಸ್ಥಳಾಂತರ, ನೀರಾವರಿ ಮಟ್ಟಗಳು ಮತ್ತು ಭೂ ಬಳಕೆಯ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಬಹುದು. ಇದು ಸರ್ಕಾರಗಳು ಇಳುವರಿಯನ್ನು ಊಹಿಸಲು, ನೀರಿನ ಬಳಕೆಯನ್ನು ನಿರ್ವಹಿಸಲು ಮತ್ತು ಬರ ಬರಬಹುದಾ? ಇಲ್ಲವೋ ಎಂಬುದನ್ನು ಮೊದಲೇ ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ.
ನಗರ ಮತ್ತು ಮೂಲಸೌಕರ್ಯ ಯೋಜನೆ: ವಿಶೇಷವಾಗಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಭೂ ಕುಸಿತ ಮತ್ತು ರಚನಾತ್ಮಕ ಬದಲಾವಣೆಗಳ ಮಾಹಿತಿ ಸಿಗಲಿದೆ. ಅಣೆಕಟ್ಟುಗಳು, ರಸ್ತೆಗಳು, ಸೇತುವೆಗಳು ಮತ್ತು ಕಟ್ಟಡಗಳ ಮೇಲ್ವಿಚಾರಣೆಯಲ್ಲಿ ಉಪಗ್ರಹ ಸಹಾಯ ಮಾಡಲಿದೆ.