– GTO ಕಕ್ಷೆಗೆ ಜಿಗಿದ ದೇಶದ ಪ್ರಥಮ ಇಮೇಜಿಂಗ್ ಸ್ಯಾಟಲೈಟ್
ಅಮರಾವತಿ: 7 ತಿಂಗಳ ವಿರಾಮದ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತೊಂದು ಉಪಗ್ರಹ ಉಡಾವಣೆ ಮಾಡಿದ್ದು, ಇದು ಭಾರತಕ್ಕೆ ಪ್ರಮುಖ ಮೈಲಿಗಲ್ಲಾಗಿದೆ. ಹೌದು. ಭಾರತದಲ್ಲಿ ಬಹುತೇಕರು ನಿದ್ರೆಗೆ ಜಾರಿದ್ದ ಸಮಯದಲ್ಲಿ ಇಸ್ರೋ ಈ ಅಭೂತಪೂರ್ವ ಸಾಧನೆ ಮಾಡಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭೂ ವೀಕ್ಷಣಾ ಉಪಗ್ರಹ EOS-05 ಅನ್ನು ಹೊತ್ತ GSLV-F17 ರಾಕೆಟ್ ಶುಕ್ರವಾರ ನಸುಕಿನ ಜಾವ 2:55ರ ಸುಮಾರಿಗೆ ಬಾಹ್ಯಾಕಾಶ ನಿಲ್ದಾಣದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ.
Mission Success!
GSLV-F17 has successfully accomplished its mission, placing EOS-05 into the intended orbit.
Sharing a few memorable moments from the lift-off.
For more information:https://t.co/VneB2jgZoY#GSLVF17 #EOS05 #ISRO pic.twitter.com/kv0zB6V5Vi
— ISRO (@isro) September 3, 2026
ಈ ಮೂಲಕ ಇಸ್ರೋ ಭಾರತದ ಮೊಟ್ಟಮೊದಲು EOS-05 ಇಮೇಜಿಂಗ್ ಉಪಗ್ರಹವನ್ನ ಯಶಸ್ವಿಯಾಗಿ ಉಡಾಯಿಸಿದ ಸಾಧನೆ ಮಾಡಿದೆ. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ 2ನೇ ಉಡಾವಣಾ ಪ್ಯಾಡ್ನಿಂದ ರಾಕೆಟ್ ಹಾರಿದ್ದು, ಭೂ ವೀಕ್ಷಣಾ ಸಾಟಲೈಟ್ (Geo Imaging Satellite) EOS-05 ಅನ್ನು ಸಬ್-ಜಿಯೋಸಿಂಕ್ರೋನಸ್ ವರ್ಗಾವಣೆ ಕಕ್ಷೆಗೆ ಯಶಸ್ವಿಯಾಗಿ ನಿಯೋಜನೆ ಮಾಡುವಲ್ಲಿ ಯಶಸ್ವಿಯಾಗಿದೆ.
ವಿಜ್ಞಾನಿಗಳು ಹೇಳೋದೇನು?
ಇನ್ನೂ ಈ ರಾಕೆಟ್ ಕಾರ್ಯಾಚರಣೆ ಕುರಿತು ಇಸ್ರೋದ GSLV-F15 ರಾಕೆಟ್ ಕಾರ್ಯಾಚರಣೆ ಮಿಷನ್ ನಿರ್ದೇಶಕ ಥಾಮಸ್ ಕುರಿಯನ್ ಮಾಹಿತಿ ನೀಡಿದ್ದು ಇದು GSLV ನಿಂದ GTO ಅಥವಾ ಸಬ್-GTO ಕಕ್ಷೆಗೆ ಉಡಾಯಿಸಲಾದ ಅತ್ಯಂತ ಭಾರವಾದ ಉಪಗ್ರಹವಾಗಿದೆ. ಇದು ನಮಗೆಲ್ಲರಿಗೂ ಬಹಳ ಹೆಮ್ಮೆ ಮತ್ತು ಸಂತೋಷದ ಕ್ಷಣ. ಈ ಬಾರಿ EOS-05 ಉಪಗ್ರಹ ಹೊತ್ತು ಉಡಾವಣೆಯಾಗುವ ಮೂಲಕ GSLV ರಾಕೆಟ್ ತನ್ನ 19ನೇ ಕಾರ್ಯಚರಣೆ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ EOS-05 ಉಪಗ್ರಹವು ಅನನ್ಯವಾಗಿ ಕಾನ್ಫಿಗರ್ ಮಾಡಲಾದ ಭೂ ವೀಕ್ಷಣಾ ಉಪಗ್ರಹವಾಗಿದ್ದು, ನೈಜ-ಸಮಯದ ಚಿತ್ರಣವನ್ನು ಹೊಂದಿದೆ. ಇದು GSLV ಯಿಂದ GTO ಅಥವಾ ಸಬ್-GTO ಕಕ್ಷೆಗೆ ಉಡಾಯಿಸಲ್ಪಟ್ಟ ಅತ್ಯಂತ ಭಾರವಾದ ಉಪಗ್ರಹವಾಗಿದೆ. ಈ ಕೆಲವು ನಿಮಿಷಗಳ ಉಡಾವಣೆಯ ಹಿಂದೆ ತಿಂಗಳುಗಳು ಮತ್ತು ವರ್ಷಗಳ ಕಠಿಣ ಪ್ರಯತ್ನವಿದೆ ಎಂದು ಶ್ಲಾಘಿಸಿದ್ದಾರೆ.
⏳ T–30 minutes
to the scheduled launch of GSLV-F17/EOS-05 at 02:55 AM IST
Livestreaming:https://t.co/uCaGCKcwuC
For more information:https://t.co/VneB2jgZoY#GSLVF17 #EOS05 #ISRO
— ISRO (@isro) September 3, 2026
ಜನವರಿ 12ರ ಉಡಾವಣೆ ವೇಳೆ ಏನಾಗಿತ್ತು? 7 ತಿಂಗಳ ವಿರಾಮಕ್ಕೆ ಕಾರಣವೇನು?
2026ರ ಜನವರಿ 12ರಂದು PSLV-C62/IOS-N1 ಮಿಷನ್ ಉಡಾವಣೆ ಮಾಡಲಾಗಿತ್ತು. ಆದರೆ, ರಾಕೆಟ್ನ PS3 ಹಂತದ ಕೊನೆಯಲ್ಲಿ ಅಸಹಜತೆ ಕಾಣಿಸಿಕೊಂಡು ಮಿಷನ್ ವಿಫಲವಾಗಿತ್ತು. ಈ ಘಟನೆ ಬಳಿಕ ಕಾರಣ ಪತ್ತೆಹಚ್ಚಲು ವಿವರವಾದ ಪರಿಶೀಲನೆ ಆರಂಭಿಸಲಾಗಿತ್ತು. ಆ ವೈಫಲ್ಯದ ಬಳಿಕ ಇಸ್ರೋ ಪ್ರಮುಖ ಉಡಾವಣೆಗಳಿಂದ ಸುಮಾರು 7 ತಿಂಗಳ ವಿರಾಮ ತೆಗೆದುಕೊಂಡಿತ್ತು. ಇದೀಗ ದೇಶದ ಮೊದಲ ಇಮೇಜಿಂಗ್ ಉಪಗ್ರಹವನ್ನ ಇಸ್ರೋ ಉಡಾವಣೆ ಮಾಡಿದ್ದು, ಹೊಸ ಮೈಲಿಗಲ್ಲು ಸಾಧಿಸಿದೆ.
ದೇಶದ ಮೊಟ್ಟ ಮೊದಲ ಇಮೇಜಿಂಗ್ ಉಪಗ್ರಹ ಎಂಬ ಹೆಗ್ಗಳಿಕೆ
ಇಓಎಸ್-05 ಸಾಮಾನ್ಯ ಭೂ ವೀಕ್ಷಣಾ ಉಪಗ್ರಹಕ್ಕಿಂತ ವಿಭಿನ್ನವಾಗಿದೆ. ಇದು ಭೂಸ್ಥಿರ ಕಕ್ಷೆಯಿಂದ ದೊಡ್ಡ ಪ್ರದೇಶವನ್ನು ನಿರಂತರವಾಗಿ ಗಮನಿಸುವ ಸಾಮರ್ಥ್ಯ ಹೊಂದಿರಲಿದೆ. ಅಂದರೆ ಒಂದೇ ಪ್ರದೇಶದ ಹವಾಮಾನ ಅಥವಾ ಪರಿಸರ ಬದಲಾವಣೆಗಳನ್ನು ಕಡಿಮೆ ಸಮಯದ ಅಂತರದಲ್ಲಿ ಗಮನಿಸಲು ಸಾಧ್ಯವಾಗಲಿದೆ. ಇದನ್ನು ಮೊದಲು ಜಿಐಸ್ಯಾಟ್-1ಎ ಎಂದು ಕರೆಯಲಾಗುತ್ತಿತ್ತು. 2021ರಲ್ಲಿ ಇದೇ ಸರಣಿಯ ಜಿಐಸ್ಯಾಟ್-1 ಮಿಷನ್ ಕಕ್ಷೆ ಸೇರುವಲ್ಲಿ ವಿಫಲವಾಗಿತ್ತು. ಇದೀಗ ಸುಧಾರಿತ ರೂಪದಲ್ಲಿ ಇಓಎಸ್-05 ಅನ್ನು ಉಡಾವಣೆ ಮಾಡಲಾಗುತ್ತಿದೆ.
ಈ ಉಪಗ್ರಹದಿಂದ ಸಾಮಾನ್ಯರು & ದೇಶಕ್ಕೆ ಸಿಗುವ ಪ್ರಯೋಜನಗಳೇನು?
ಉಪಗ್ರಹದಿಂದ ಸಿಗುವ ಚಿತ್ರಗಳು ಮತ್ತು ಮಾಹಿತಿ ನೇರವಾಗಿ ಜನರ ಮೊಬೈಲ್ಗೆ ಬರುವುದಿಲ್ಲ. ಆದರೆ ಅದರ ಮಾಹಿತಿಯನ್ನು ವಿವಿಧ ಸರ್ಕಾರಿ ವ್ಯವಸ್ಥೆಗಳು ಬಳಸುವುದರಿಂದ ಜನರಿಗೆ ಪರೋಕ್ಷವಾಗಿ ಸಾಕಷ್ಟು ಪ್ರಯೋಜನ ಸಿಗಬಹುದು. ಹವಾಮಾನ ಮುನ್ಸೂಚನೆ, ಕೃಷಿ ಮೇಲ್ವಿಚಾರಣೆ, ಪರಿಸರ ಬದಲಾವಣೆ, ಪ್ರಕೃತಿ ವಿಕೋಪ ನಿರ್ವಹಣೆ ಮತ್ತು ದೇಶದ ಯೋಜನೆ ರೂಪಿಸುವ ಕೆಲಸಗಳಲ್ಲಿ ಉಪಗ್ರಹ ಮಾಹಿತಿ ಬಳಸಬಹುದು. ಭಾರತದಲ್ಲಿ ಈಗಾಗಲೇ ಉಪಗ್ರಹ ತಂತ್ರಜ್ಞಾನವನ್ನು ಕೃಷಿ ಮತ್ತು ವಿಕೋಪ ನಿರ್ವಹಣೆಯಲ್ಲಿ ಬಳಸಲಾಗುತ್ತಿದೆ.
ರೈತರಿಗೆ ಬೆಳೆ ಮೇಲ್ವಿಚಾರಣೆಯಲ್ಲಿ ಇದು ಹೇಗೆ ಸಹಾಯ ಮಾಡಲಿದೆ?
ಹೊಲಗಳ ಮೇಲಿನ ಬದಲಾವಣೆಗಳನ್ನು ಉಪಗ್ರಹ ಚಿತ್ರಗಳ ಮೂಲಕ ಗಮನಿಸಬಹುದು. ಬೆಳೆ ಪ್ರದೇಶ, ಬರ ಪರಿಸ್ಥಿತಿ, ಬೆಳೆ ಬೆಳವಣಿಗೆ ಮತ್ತು ಹಾನಿಯಂತಹ ವಿಷಯಗಳನ್ನು ದೊಡ್ಡ ಪ್ರಮಾಣದಲ್ಲಿ ಅಂದಾಜಿಸಲು ಭೂ ವೀಕ್ಷಣಾ ತಂತ್ರಜ್ಞಾನ ಸಹಾಯ ಮಾಡುತ್ತದೆ. ಇದರ ಮೂಲಕ ಬೆಳೆ ಅಂದಾಜು, ಬರ ಮೇಲ್ವಿಚಾರಣೆ ಮತ್ತು ಬೆಳೆ ವಿಮೆಯಂತಹ ಕೆಲಸಗಳಲ್ಲೂ ಉಪಗ್ರಹ ಮಾಹಿತಿಯನ್ನು ಬಳಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ, ಸೆಪ್ಟೆಂಬರ್ 4ರ ಉಡಾವಣೆ ಕೇವಲ ಮತ್ತೊಂದು ರಾಕೆಟ್ ಉಡಾವಣೆ ಅಲ್ಲ. ಏಳು ತಿಂಗಳ ವಿರಾಮದ ಬಳಿಕ ಇಸ್ರೋ ಮತ್ತೆ ಉಡಾವಣಾ ಹಾದಿಗೆ ಮರಳುತ್ತಿರುವುದರ ಜೊತೆಗೆ, ಭಾರತದ ಭೂ ವೀಕ್ಷಣಾ ಸಾಮರ್ಥ್ಯಕ್ಕೆ ಹೊಸ ತಂತ್ರಜ್ಞಾನ ಸೇರ್ಪಡೆಯಾಗುತ್ತಿರುವ ಮಿಷನ್ ಇದಾಗಿದೆ.
