ಉಗ್ರರು ಅಮಾಯಕರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಆಗಲ್ಲ – ಆಪರೇಷನ್‌ ಸಿಂಧೂರ ಬೆಂಬಲಿಸಿದ ಇಸ್ರೇಲ್‌

Public TV
2 Min Read
Israel says it supports Indias right to defend itself and terrorists must know there is nowhere to hide. 1

ನವದೆಹಲಿ: ಭಾರತದ (India) ತನ್ನ ರಕ್ಷಣೆಯ ಹಕ್ಕನ್ನು ನಾವು ಬೆಂಬಲಿಸುತ್ತೇವೆ. ಉಗ್ರರು ಅಮಾಯಕರ ವಿರುದ್ಧ ನಡೆಸಿದ ಘೋರ ಅಪರಾಧಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಅವರ ಅರಿವಿಗೆ ಬರಬೇಕು ಎಂದು ಇಸ್ರೇಲ್‌ (Israel) ಹೇಳಿದೆ. ಈ ಬಗ್ಗೆ ಭಾರತದಲ್ಲಿರುವ ಇಸ್ರೇಲ್‌ ರಾಯಭಾರ ಕಚೇರಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ʻಆಪರೇಷನ್‌ ಸಿಂಧೂರʼ (Operation Sindoor) ಕಾರ್ಯಾಚರಣೆಯನ್ನು ಬೆಂಬಲಿಸಿದೆ.

ಭಾರತ – ಪಾಕ್‌ ನಡುವಿನ ಉದ್ವಿಗ್ನತೆಗೆ ಪ್ರತಿಕ್ರಿಯಿಸಿರುವ ಫ್ರಾನ್ಸ್, ಭಯೋತ್ಪಾದನೆಯ ಪಿಡುಗಿನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಭಾರತದ ಬಯಕೆಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಆದರೆ ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳು ಸಮಸ್ಯೆ ಉಲ್ಬಣಗೊಳ್ಳುವುದನ್ನು ತಪ್ಪಿಸಲು ಮತ್ತು ನಾಗರಿಕರನ್ನು ರಕ್ಷಿಸಲು ಸಂಯಮದಿಂದ ವರ್ತಿಸುವಂತೆ ಕರೆ ನೀಡುತ್ತೇವೆ ಎಂದು ಫ್ರೆಂಚ್ ವಿದೇಶಾಂಗ ಸಚಿವ ಜೀನ್-ನೋಯೆಲ್ ಬ್ಯಾರಟ್ ತಿಳಿಸಿದ್ದಾರೆ.

Operation Sindoor 4

ಭಾರತ – ಪಾಕ್‌ ನಡುವಿನ ಉದ್ವಿಗ್ನತೆ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದು ನಾಚಿಕೆಗೇಡಿನ ಸಂಗತಿ, ಈ ವಿವಾದ ಆದಷ್ಟು ಬೇಗ ಕೊನೆಗೊಳ್ಳಲಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಹಿಂದಿನ ಕೆಲವು ಘಟನೆಗಳ ಆಧಾರದ ಮೇಲೆ ಏನಾದರೂ ಸಂಭವಿಸಲಿದೆ ಎಂದು ತಿಳಿದಿತ್ತು. ಈ ಎರಡೂ ದೇಶಗಳು ಬಹಳ ಸಮಯದಿಂದ ಹೋರಾಡುತ್ತಿವೆ. ಇದು ಬಹಳ ಬೇಗ ಕೊನೆಗೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಪ್ರತಿಕ್ರಿಯಿಸಿ, ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅಮೆರಿಕ ಪರಮಾಣು ಶಸ್ತ್ರಸಜ್ಜಿತ ಏಷ್ಯಾದ ನೆರೆಹೊರೆಯ ದೇಶಗಳೊಂದಿಗೆ ಶಾಂತಿಯುತ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಮುಂದುವರೆಸುತ್ತದೆ ಎಂದದ್ದಾರೆ.

ಇದರ ಬೆನ್ನಲ್ಲೇ ಪಾಕಿಸ್ತಾನದ ಮೇಲಿನ ಭಾರತದ ದಾಳಿಯ ಬಗ್ಗೆ ಚೀನಾ ಕಳವಳ ವ್ಯಕ್ತಪಡಿಸಿದೆ. ಎರಡೂ ದೇಶಗಳೂ ಶಾಂತಿಯನ್ನು ಕಾಪಾಡಿಕೊಳ್ಳಬೇಕು ಎಂದು ಒತ್ತಾಯಿಸಿದೆ. ಅಲ್ಲದೇ ದಾಳಿಗಳು ಮುಂದುವರೆಯದಂತೆ ಉಭಯ ದೇಶಗಳು ಶಾಂತಿಯಿಂದ ಇರುವಂತೆ ಚೀನಾ ಮನವಿ ಮಾಡಿದೆ.

ಉದ್ವಿಗ್ನತೆ ವಿಚಾರವಾಗಿ ಪ್ರತಿಕ್ರಿಯಿಸಿರುವ ರಷ್ಯಾ, ನೆರೆಹೊರೆಯವರ ನಡುವಿನ ಅತ್ಯಂತ ಕೆಟ್ಟ ಹಿಂಸಾಚಾರವಾಗಿದೆ. ಮತ್ತಷ್ಟು ಉದ್ವಿಗ್ನತೆ ನಡೆಯದಂತೆ ಸಂಯಮವನ್ನು ಕಾಯ್ದುಕೊಳ್ಳುವಂತೆ ಎರಡೂ ದೇಶಗಳಿಗೂ ಕರೆ ನೀಡಿದೆ.

ಇಂಗ್ಲೆಂಡ್‌ ಈ ಬಗ್ಗೆ ಪ್ರತಿಕ್ರಿಯಿಸಿ, ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಾರತ ಮತ್ತು ಪಾಕಿಸ್ತಾನ ಎರಡನ್ನೂ ಬೆಂಬಲಿಸಲು ನಾವು ಸಿದ್ಧವಾಗಿದ್ದೇವೆ ಎಂದು ತಿಳಿಸಿದೆ. ನಾವು ಎರಡೂ ದೇಶಗಳಿಗೆ ಸ್ನೇಹಿತರಾಗಿದ್ದೇವೆ. ನಾವು ಎರಡೂ ದೇಶಗಳನ್ನು ಬೆಂಬಲಿಸಲು ಸಿದ್ಧರಿದ್ದೇವೆ. ಶಾಂತಿ ಸ್ಥಾಪನೆಗೆ ಎರಡೂ ದೇಶಗಳನ್ನು ಬೆಂಬಲಿಸುತ್ತೇವೆ ಎಂದಿದೆ.

ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಬುಧವಾರ ಭಾರತ ಪಾಕ್‌ನ 9 ಜಾಗದಲ್ಲಿದ್ದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪಾಕ್‌ ಘೋಷಿಸಿದೆ. ಅಲ್ಲದೇ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್‌ ಅಪ್ರಚೋದಿತ ದಾಳಿಗೆ 15 ಮಂದಿ ಬಲಿಯಾಗಿದ್ದಾರೆ.

Share This Article