ಒಂದು ಕಾಲದಲ್ಲಿ ಕುಚಿಕು ದೋಸ್ತಿಗಳಾಗಿದ್ದ ಇರಾನ್-ಇಸ್ರೇಲ್ ಈಗ ಬದ್ಧವೈರಿಗಳಂತೆ ಕಚ್ಚಾಡುತ್ತಿರೋದ್ಯಾಕೆ?

Public TV
6 Min Read
israel iran conflict 3

– ನಿನಗೆ ನಾನು.. ನನಗೆ ನೀನು.. ಎನ್ನುತ್ತಿದ್ದವರ ಮಧ್ಯೆ ಬ್ರೇಕಪ್‌ ಯಾಕಾಯ್ತು?

ಸ್ರೇಲ್ ಮತ್ತು ಇರಾನ್ (Israel Iran Conflict) ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಒಬ್ಬರ ಮೇಲೊಬ್ಬರು ವೈಮಾನಿಕ ದಾಳಿಗಳನ್ನು ನಡೆಸುತ್ತಿದ್ದಾರೆ. ಸಂಘರ್ಷದಲ್ಲಿ ಎರಡೂ ದೇಶಗಳಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ. ಲಕ್ಷಾಂತರ ಮಂದಿ ಪ್ರಾಣ ಭಯದಿಂದ ಉಟ್ಟ ಬಟ್ಟೆಯಲ್ಲೇ ಬೇರೆಡೆಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಸಂಭವನೀಯ ಯುದ್ಧ ಅಮೆರಿಕ ಸೇರಿದಂತೆ ಯುರೋಪ್ ರಾಷ್ಟ್ರಗಳು ಶತಪ್ರಯತ್ನ ನಡೆಸುತ್ತಿವೆ. ಆದರೆ, ಯಾರ ಮಾತನ್ನೂ ಕೇಳುವಂತಹ ಪರಿಸ್ಥಿತಿಯಲ್ಲಿ ಈ ಎರಡು ದೇಶಗಳು ಇದ್ದಂತೆ ಕಾಣುತ್ತಿಲ್ಲ. ಪರಸ್ಪರರ ಮೇಲೆ ಕ್ಷಿಪಣಿಗಳನ್ನು ಉಡಾಯಿಸಿ ಅಪಾರ ಹಾನಿಗೆ ಕಾರಣರಾಗಿದ್ದಾರೆ. ಕಳೆದೊಂದು ವಾರದಿಂದ ನಡೆಯುತ್ತಿರುವ ಇಬ್ಬರ ನಡುವಿನ ಸಂಘರ್ಷ ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ.

ಈ ಎರಡೂ ದೇಶಗಳ ಇತಿಹಾಸ ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ. ಒಂದು ಕಾಲದಲ್ಲಿ ಕುಚಿಕು ಗೆಳೆಯರಂತಿದ್ದ ಇಸ್ರೇಲ್ ಮತ್ತು ಇರಾನ್ ಈಗ ಬದ್ಧವೈರಿಗಳಂತೆ ಕಾದಾಡುತ್ತಿದ್ದಾರೆ. ಇಬ್ಬರ ನಡುವಿನ ಕಿತ್ತಾಟ ಯುದ್ಧಕ್ಕೆ ನಾಂದಿ ಹಾಡಬಹುದೆಂಬ ಆತಂಕ ಜಾಗತಿಕ ನಾಯಕರಲ್ಲಿ ಮೂಡಿದೆ. ಇತಿಹಾಸವನ್ನು ನೋಡಿದಾಗ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಬಂಧ ಹೇಗಿತ್ತು? ಕಾಲಾನಂತರದಲ್ಲಿ ಅದು ಹೇಗೆ ಬದಲಾಯಿತು? ಇಬ್ಬರ ಬ್ರೇಕಪ್‌ಗೆ ಕಾರಣ ಏನು? ಸಂಘರ್ಷದ ವಾತಾವರಣ ಏಕೆ ಸೃಷ್ಟಿಯಾಯಿತು ಎಂಬ ಪ್ರಶ್ನೆ ಮೂಡಬಹುದು. ಅದಕ್ಕೆ ವಿವರ ಇಲ್ಲಿದೆ. ಇದನ್ನೂ ಓದಿ: ಇರಾನ್‌ – ಇಸ್ರೇಲ್‌ ಯುದ್ಧ | ಭಾರತದ ಚಹಾ ಉದ್ಯಮಕ್ಕೆ ಹೊಡೆತ

iran israel war

ಇಸ್ರೇಲ್ ಉಗಮಕ್ಕೆ ಇರಾನ್ ಬೆಂಬಲ
ಅದು 1948ರ ಸಂದರ್ಭ. ಇಸ್ರೇಲ್ ಎಂಬ ಹೊಸ ದೇಶದ ಉಗಮಕ್ಕೆ ಪಶ್ಚಿಮ ಏಷ್ಯಾದ ಹೆಚ್ಚಿನ ಮುಸ್ಲಿಂ ಬಹುಸಂಖ್ಯಾತ ದೇಶಗಳು ನಿರಾಕರಿಸಿದ್ದವು. ಅಚ್ಚರಿ ಎಂಬಂತೆ ಶಿಯಾ ಬಹುಸಂಖ್ಯಾತ ಇರಾನ್ ಮತ್ತು ಟರ್ಕಿ ಮಾತ್ರ ಇಸ್ರೇಲ್ ಪರವಾಗಿ ನಿಂತವು. ಇಸ್ರೇಲ್ ಸಾರ್ವಭೌಮ ರಾಷ್ಟ್ರ ಎಂಬುದನ್ನು ಪ್ರತಿಪಾದಿಸಿದ ಇಸ್ಲಾಮಿಕ್ ರಾಷ್ಟ್ರಗಳು (ಇರಾನ್, ಟರ್ಕಿ) ಇವು. ಇವೆರಡು ದೇಶಗಳು ಆಗ ಅಮೆರಿಕ ಜೊತೆ ನಿಕಟ ಸಂಪರ್ಕ ಹೊಂದಿದ್ದವು.

ಆ ಸಂದರ್ಭದಲ್ಲಿ ಶಾ ಮೊಹಮ್ಮದ್ ರೆಜಾ ಪಹ್ಲವಿ ನೇತೃತ್ವದಲ್ಲಿ ಇರಾನ್ ರಾಷ್ಟ್ರ ಪಾಶ್ಚಿಮಾತ್ಯರಿಗೆ ಪ್ರಜ್ಞಾಪೂರ್ವಕವಾಗಿ ಹತ್ತಿರವಾಗಿತ್ತು. ಶೀತಲ ಸಮರದ ಸಮಯದಲ್ಲಿ ಅಮೆರಿಕದ ಪ್ರಮುಖ ಪ್ರಾದೇಶಿಕ ಮಿತ್ರನೆಂದೇ ಇರಾನ್ ಗುರುತಿಸಿಕೊಂಡಿತ್ತು. ಹೊಸದಾಗಿ ರೂಪುಗೊಂಡ ಇಸ್ರೇಲ್ ದೇಶಕ್ಕೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಅಮೆರಿಕದ ಬೆಂಬಲದ ಅಗತ್ಯವಿತ್ತು. ಇದರ ಜೊತೆಗೆ ಇರಾನ್ ಬೆಂಬಲ ಸಿಕ್ಕಿದ್ದು, ಇಸ್ರೇಲ್‌ಗೆ ಮತ್ತಷ್ಟು ಬಲ ತುಂಬಿತ್ತು. ತದನಂತರ, ಮುಂದಿನ ಒಂದೆರಡು ದಶಕಗಳಲ್ಲಿ ಮಾಜಿ ಇಸ್ರೇಲ್ ಪ್ರಧಾನಿ ಡೇವಿಡ್ ಬೆನ್ ಗುರಿಯನ್ ಅವರು ಅರಬ್ ಅಲ್ಲದ ರಾಷ್ಟ್ರಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಯತ್ನದಲ್ಲಿ ತಮ್ಮ ಪರಿಧಿಯ ಸಿದ್ಧಾಂತದ ಮೂಲಕ ದೇಶವನ್ನು ಮುನ್ನಡೆಸಿದರು. ಇದನ್ನೂ ಓದಿ: ದೊಡ್ಡಣ್ಣನ ಎಂಟ್ರಿಯಿಂದ 3ನೇ ಮಹಾಯುದ್ಧದ ಆತಂಕ – ಇರಾನ್ ಬೆಂಬಲಕ್ಕೆ ನಿಂತ ರಷ್ಯಾ

Iran Israel

ಕಚ್ಚಾ ತೈಲ ಪೂರೈಸಿದ್ದ ಇರಾನ್
ಇರಾನ್, ಟರ್ಕಿ ಮತ್ತು ಇಥಿಯೋಪಿಯಾ ದೇಶಗಳು ಇಸ್ರೇಲ್ ಜೊತೆ ಪ್ರಮುಖ ಪಾಲುದಾರರಾಗಿ ಗುರುತಿಸಿಕೊಂಡರು. ಈ ನಾಲ್ಕು ರಾಷ್ಟ್ರಗಳು ಪರಸ್ಪರ ಆರ್ಥಿಕ ಸಹಕಾರ ಪಡೆದವು. ವಿಶೇಷವಾಗಿ ಇಸ್ರೇಲ್‌ನ ಮೊಸಾದ್ ಮತ್ತು ಇರಾನ್‌ನ SAVAK ನಡುವಿನ ಶಸ್ತ್ರಾಸ್ತ್ರ ಮಾರಾಟ ಮತ್ತು ಗುಪ್ತಚರ ಮಾಹಿತಿ ಹಂಚಿಕೆಯಿಂದ ಪ್ರಯೋಜನ ಪಡೆದುಕೊಂಡವು. ಆರು ದಿನಗಳ ಯುದ್ಧದ ಪರಿಣಾಮವಾಗಿ ಅರಬ್ ರಾಷ್ಟ್ರಗಳು ಇಸ್ರೇಲ್ ಅನ್ನು ಬಹಿಷ್ಕರಿಸಿದವು. ಆ ಸಂದರ್ಭದಲ್ಲಿ ಇರಾನ್ ಇಸ್ರೇಲ್‌ಗೆ ಕಚ್ಚಾ ತೈಲವನ್ನು ಪೂರೈಸಿತು. ಇರಾನ್‌ನಲ್ಲಿ ವ್ಯಾಪಾರ ಮತ್ತು ಮೂಲಸೌಕರ್ಯ ಬೆಳವಣಿಗೆಗೆ ಇಸ್ರೇಲ್ ಕೂಡ ಬೆಂಬಲ ನೀಡಿತು. ಎಲ್ಲವೂ ಚೆನ್ನಾಗಿ ನಡೆಯುತ್ತಿರುವಂತೆ ಕಾಣುತ್ತಿತ್ತು. ಆದರೆ, 1979 ರಲ್ಲಿ ಇಸ್ಲಾಮಿಕ್ ಕ್ರಾಂತಿಯ ಗಾಳಿ ಇರಾನ್‌ನಲ್ಲೂ ಬೀಸಿತು. ಪರಿಣಾಮವಾಗಿ, ಇರಾನ್-ಇಸ್ರೇಲ್ ಸಂಬಂಧಗಳಲ್ಲಿ ಮೂಲಭೂತ ಬದಲಾವಣೆಯಾಯಿತು. ಷಾ ಅವರನ್ನು ಪದಚ್ಯುತಗೊಳಿಸಿ ಅಯತೊಲ್ಲಾ ರುಹೊಲ್ಲಾ ಖಮೇನಿ ನೇತೃತ್ವದಲ್ಲಿ ಇಸ್ಲಾಮಿಕ್ ಗಣರಾಜ್ಯ ಸ್ಥಾಪನೆಗೆ ಕಾರಣವಾಯಿತು. ಇದು ಬದಲಾವಣೆಗೆ ನಾಂದಿಹಾಡಿತು.

ಇರಾನ್-ಇಸ್ರೇಲ್ ಬ್ರೇಕಪ್
ಇರಾನ್‌ನಲ್ಲಿ ಇಸ್ಲಾಮಿಸ್ಟ್‌ಗಳು ಪ್ಯಾಲೆಸ್ತೀನಿಯನ್ನರ ಪರವಾಗಿ ವಕಾಲತ್ತು ವಹಿಸುತ್ತಿದ್ದರು. ಆಗಾಗ್ಗೆ ಅವರ ಬಳಕೆಗಾಗಿ ಹಣವನ್ನೂ ಸಂಗ್ರಹಿಸುತ್ತಿದ್ದರು. 1979 ರ ನಂತರ ಇಸ್ರೇಲ್ ಮತ್ತು ಇರಾನ್ ನಡುವೆ ಬ್ರೇಕಪ್ ಆಯಿತು. ಇರಾನ್, ಇಸ್ರೇಲಿ ಪಾಸ್‌ಪೋರ್ಟ್‌ಗಳನ್ನು ಸ್ವೀಕರಿಸಲು ನಿರಾಕರಿಸಿತು. ಇರಾನಿನ ಪಾಸ್‌ಪೋರ್ಟ್ ಹೊಂದಿರುವವರು ‘ಆಕ್ರಮಿತ ಪ್ಯಾಲೆಸ್ತೀನ್’ಗೆ ಪ್ರಯಾಣಿಸುವುದನ್ನು ನಿಷೇಧಿಸಲಾಯಿತು. ಇಸ್ರೇಲ್ ಅನ್ನು ‘ಇಸ್ಲಾಂನ ಶತ್ರು’ ಮತ್ತು ‘ಸೈತಾನ್’ ಎಂದು ಬಿಂಬಿಸಲಾಯಿತು. ಇದನ್ನೂ ಓದಿ: ‌ಇರಾನ್‌ನಿಂದ ಖಂಡಾಂತರ ಕ್ಷಿಪಣಿ ದಾಳಿ – ದಕ್ಷಿಣ ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆ ಉಡೀಸ್‌

Israel vs Hezbollah

1980 ಮತ್ತು 90ರ ದಶಕಗಳಲ್ಲಿ ಇರಾನ್ ಸಶಸ್ತ್ರ ಗುಂಪುಗಳ ಪ್ರಾಯೋಜಕರಾಗಿ ಹೊರಹೊಮ್ಮಿತು. 1982 ರಲ್ಲಿ ಇಸ್ರೇಲ್ ಆಕ್ರಮಣದ ನಂತರ ಲೆಬನಾನ್‌ನಲ್ಲಿ ಹಿಜ್ಬೊಲ್ಲಾ ಸಂಘಟನೆ ಸ್ಥಾಪನೆಯಾಯಿತು. ಯೆಮೆನ್‌ನಲ್ಲಿನ ಹೌತಿಗಳು ಮತ್ತು ಗಾಜಾದ ಹಮಾಸ್‌ನಂತಹ ಇತರ ಗುಂಪುಗಳಿಗೆ ಇರಾನ್ ನೆರವು ನೀಡಲು ಮುಂದಾಯಿತು. ಈ ಗುಂಪುಗಳ ಸಕ್ರಿಯ ತರಬೇತಿಗೆ ಹಣಕಾಸು ಹಾಗೂ ಇಸ್ರೇಲ್ ಮೇಲೆ ದಾಳಿ ಮಾಡಲು ಶಸ್ತ್ರಾಸ್ತ್ರಗಳನ್ನು ಒದಗಿಸಿತು. 1983 ರಲ್ಲಿ ಹಿಜ್ಬೊಲ್ಲಾ ಆತ್ಮಹತ್ಯಾ ಬಾಂಬ್ ದಾಳಿಗಳನ್ನು ನಡೆಸಿತು. ಅದೇ ವರ್ಷದ ನವೆಂಬರ್‌ನಲ್ಲಿ ಸ್ಫೋಟಕಗಳಿಂದ ತುಂಬಿದ ಕಾರು ಲೆಬನಾನ್‌ನಲ್ಲಿರುವ ಇಸ್ರೇಲಿ ಮಿಲಿಟರಿಯ ಪ್ರಧಾನ ಕಚೇರಿಗೆ ನುಗ್ಗಿತು. ಪಶ್ಚಿಮ ಮತ್ತು ಇಸ್ರೇಲ್ ಬಿಟ್ಟು ಹೊರಹೋಗುವಂತೆ ದಾಳಿಕೋರರು ಒತ್ತಾಯಿಸಿದರು.

ಮುಂದಿನ ಎರಡು ದಶಕಗಳಲ್ಲಿ ಇಬ್ಬರ ನಡುವಿನ ಸಂಘರ್ಷ ತೀವ್ರಗೊಂಡಿತು. 2000ರ ಡಿಸೆಂಬರ್‌ನಲ್ಲಿ ಅಯತೊಲ್ಲಾ ಅಲಿ ಖಮೇನಿ, ಇಸ್ರೇಲ್ ಅನ್ನು ‘ಕ್ಯಾನ್ಸರ್ ಗೆಡ್ಡೆ’ ಎಂದು ಕರೆದರು. ಅದನ್ನು ಈ ಪ್ರದೇಶದಿಂದ ತೆಗೆದುಹಾಕಬೇಕು. ಪ್ಯಾಲೆಸ್ತೀನ್ ಪ್ಯಾಲೆಸ್ತೀನಿಯನ್ನರಿಗೆ ಸೇರಿದ್ದು, ಈ ಭಾಗದ ಭವಿಷ್ಯವನ್ನು ಪ್ಯಾಲೆಸ್ತೀನಿಯನ್ ಜನರು ನಿರ್ಧರಿಸಬೇಕು ಎಂದು ಖಮೇನಿ ಪ್ರತಿಪಾದಿಸಿದರು. 2023 ರ ದಾಳಿಯ ನಂತರ ಇಸ್ರೇಲ್, ಹಿಜ್ಬೊಲ್ಲಾ ಮತ್ತು ಹಮಾಸ್ ಅನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು. ಹೀಗೆ ಪರಸ್ಪರ ಸ್ನೇಹಿತರಂತಿದ್ದ ಎರಡು ದೇಶಗಳು ಬದ್ಧವೈರಿಗಳಂತೆ ಕಿತ್ತಾಡಿಕೊಳ್ಳಲು ಶುರು ಮಾಡಿದರು. ಕಳೆದ ವರ್ಷ ಇಸ್ರೇಲ್ ಮೇಲೆ ಇರಾನ್ ಜೋಡಿ ಕ್ಷಿಪಣಿ ದಾಳಿಗಳನ್ನು ನಡೆಸಿತು. ಇಸ್ರೇಲ್ ತನ್ನದೇ ಆದ ದಾಳಿಗಳೊಂದಿಗೆ ಪ್ರತಿಕ್ರಿಯಿಸಿತು. ಇದರಲ್ಲಿ ಇರಾನಿನ ಕ್ಷಿಪಣಿ ನೆಲೆಗಳನ್ನು ನಾಶಪಡಿಸಿದ ಮತ್ತು ವಾಯು ರಕ್ಷಣೆಯನ್ನು ದುರ್ಬಲಗೊಳಿಸಿದ ಒಂದು ದಾಳಿಯೂ ಸೇರಿತ್ತು. ಇದನ್ನೂ ಓದಿ: Israel-Iran Conflict – ಇರಾನ್‍ನಿಂದ ದೆಹಲಿ ತಲುಪಿದ 110 ಭಾರತೀಯರು

Israeli Hospital 2

ಹಮಾಸ್ ದಾಳಿ
2023ರ ಅಕ್ಟೋಬರ್‌ನಲ್ಲಿ ಹಮಾಸ್ ಬಂಡುಕೋರರು ದಾಳಿ ನಡೆಸಿ 200 ಇಸ್ರೇಲಿ ಪ್ರಜೆಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ತನ್ನ ನಾಗರಿಕರ ಬಿಡುಗಡೆಗಾಗಿ ಇಸ್ರೇಲ್, ಹಮಾಸ್ ವಿರುದ್ಧ ಪ್ರತಿದಾಳಿ ನಡೆಸಿತು. ಪ್ಯಾಲೆಸ್ತೀನ್‌ನ ಗಾಜಾ ಪಟ್ಟಿ ಮತ್ತು ಲೆಬನಾನ್‌ನ ಉಗ್ರ ಸಂಘಟನೆ ಹಿಜ್ಬುಲ್ಲಾಗೆ ಸೇರಿದ ನೆಲೆಗಳ ಮೇಲೆ ಇಸ್ರೇಲ್ ತೀವ್ರ ದಾಳಿ ನಡೆಸಿತು. ಹಿಜ್ಬುಲ್ಲಾ ಕಮಾಂಡರ್‌ಗಳನ್ನು ಕೂಡ ಇಸ್ರೇಲ್ ಹತ್ಯೆ ಮಾಡಿತು. ದಾಳಿ-ಪ್ರತಿದಾಳಿಗಳು ತೀವ್ರಗೊಂಡು ನೂರಾರು ಜನರು ಸಾವನ್ನಪ್ಪಿದರು. ಲಕ್ಷಾಂತರ ಜನರು ಸಂಘರ್ಷಪೀಡಿತ ಪ್ರದೇಶಗಳನ್ನು ತೊರೆದು ಬೇರೆಡೆ ಸ್ಥಳಾಂತರಗೊಂಡರು. ‘ಗಾಜಾ ಪಟ್ಟಿ ಮೇಲೆ ಇಸ್ರೇಲ್ ವಾಯುದಾಳಿ ಮತ್ತು ಭೂಸೇನಾ ದಾಳಿ ತಡೆಯದಿದ್ದರೆ, ಮಧ್ಯಪ್ರಾಚ್ಯದ ಇತರ ರಾಷ್ಟ್ರಗಳು ಮೈದಾನಕ್ಕೆ ಇಳಿಯಬೇಕಾಗುತ್ತದೆ’ ಎಂದು ಇರಾನ್ ಎಚ್ಚರಿಕೆ ನೀಡಿತು.

ಇಸ್ರೇಲ್-ಇರಾನ್ ಯುದ್ಧ
ಕಳೆದೊಂದು ವಾರದಿಂದ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ತೀವ್ರಗೊಳ್ಳುತ್ತಿದೆ. ಪರಸ್ಪರರು ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದ್ದಾರೆ. ದಾಳಿಗೆ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಜಿ-7 ಶೃಂಗಸಭೆಯಲ್ಲಿ ಇಸ್ರೇಲ್ ಪರವಾದ ಅಭಿಪ್ರಾಯ ಕೇಳಿಬಂದಿದೆ. ಆದರೆ, ಇತ್ತ ಇರಾನ್‌ಗೆ ಮಿತ್ರರಾಷ್ಟ್ರಗಳಿಂದ ಯಾವುದೇ ಬೆಂಬಲ ಸಿಕ್ಕಿಲ್ಲ. ‘ಪರಮಾಣು ಯೋಜನೆ’ ಕೈಬಿಟ್ಟು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸುವಂತೆ ಇರಾನ್‌ಗೆ ಅಮೆರಿಕ ಒತ್ತಾಯಿಸಿದೆ. ಆದರೆ, ಇರಾನ್ ಸರ್ವೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿಲ್ಲ. ಇಸ್ರೇಲ್‌ಗೆ ತಕ್ಕ ಪಾಠ ಕಲಿಸುವುದಾಗಿ ಯುದ್ಧ ಮುಂದುವರಿಸಿದ್ದಾರೆ. ‘ಖಮೇನಿ ಹತ್ಯೆಯೊಂದಿಗೆ ಯುದ್ಧ ಕೊನೆಗೊಳ್ಳುತ್ತದೆ’ ಎಂದು ಇಸ್ರೇಲ್ ಶಪಥ ಮಾಡಿದೆ. ಎರಡೂ ದೇಶಗಳ ಹಠವನ್ನು ನೋಡಿದರೆ ಸಂಘರ್ಷ ನಿಲ್ಲುವ ಲಕ್ಷಣ ಗೋಚರಿಸುತ್ತಿಲ್ಲ. ಇದನ್ನೂ ಓದಿ: ದಾಳಿ ಮಾಡಿ ಇಸ್ರೇಲ್‌ ದೊಡ್ಡ ತಪ್ಪು ಮಾಡಿದೆ, ನಾವು ಶರಣಾಗಲ್ಲ: ಟ್ರಂಪ್‌ಗೆ ಖಮೇನಿ ವಾರ್ನಿಂಗ್‌

Share This Article