ಬೆಂಗಳೂರು: ಇಸ್ಕಾನ್ ದೇವಾಲಯದ ಅರ್ಚಕರೊಬ್ಬರನ್ನು ಕೈ-ಕಾಲು ಕಟ್ಟಿಹಾಕಿ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೆ.ಆರ್ ಪುರಂನ ಬೆತ್ತಲ್ ನಗರದಲ್ಲಿ ನಡೆದಿದೆ.
ಸಂಜಯ್ ಸತೀಶ್ ಕೊಲೆಯಾದ ಅರ್ಚಕ. ಇಸ್ಕಾನ್ ದೇವಾಲಯದಲ್ಲಿ ಅರ್ಚಕರಾಗಿದ್ದ ಸಂಜಯ್ ಸತೀಶ್ ಬೆತ್ತಲ್, ನಗರದ ಅಪಾರ್ಟ್ ಮೆಂಟ್‍ನಲ್ಲಿ ವಾಸವಾಗಿದ್ರು. 15 ದಿನಗಳಿಗೊಮ್ಮೆ ಅಪಾರ್ಟ್ ಮೆಂಟ್‍ಗೆ ಬಂದು ಒಂದೆರಡು ದಿನ ಉಳಿಯುತ್ತಿದ್ದ ಸಂಜಯ್, ಕಳೆದ ಬುಧವಾರದಂದು ಇಸ್ಕಾನ್‍ನಲ್ಲಿ ಪೂಜೆ ಮುಗಿಸಿಕೊಂಡು ಅಪಾರ್ಟ್ ಮೆಂಟ್‍ಗೆ ಬಂದಿದ್ದಾರೆ. ಈ ವೇಳೆಯಲ್ಲಿ ಅಪಾರ್ಟ್ ಮೆಂಟ್‍ಗೆ ಬಂದಿರೋ ಕೆಲವು ದುಷ್ಕರ್ಮಿಗಳು ಸಂಜಯ್ ಕೈ-ಕಾಲು ಕಟ್ಟಿ ಕೊಲೆ ಮಾಡಿದ್ದಾರೆ.
ಕೊಲೆಯಾಗಿ ಒಂದು ವಾರವಾದ್ರೂ ಅಕ್ಕಪಕ್ಕದ ಮನೆಯವರಿಗೆ ಈ ವಿಷಯ ಗೊತ್ತಿರಲಿಲ್ಲ. ಬುಧವಾರ ರಾತ್ರಿ ಸಂಜಯ್ ಫ್ಲಾಟ್‍ನಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಮನೆಯವರು ಕೆ.ಆರ್ ಪುರಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಬಾಗಿಲು ತೆಗೆದು ನೋಡಿದಾಗ ಸಂಜಯ್ ಕೊಲೆಯಾದ ವಿಷಯ ಬೆಳಕಿಗೆ ಬಂದಿದೆ.
ಪೊಲೀಸರು ಬೆರಳಚ್ಚು ತಜ್ಞರನ್ನು ಕರೆಸಿ ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಸಂಜಯ್ ಸತೀಶ್ ಸುಮಾರು ವರ್ಷಗಳಿಂದ ಒಬ್ಬರೇ ಫ್ಲಾಟ್‍ನಲ್ಲಿ ವಾಸವಾಗಿದ್ದು ಅವರ ಹಿನ್ನೆಲೆ ಗೊತ್ತಿಲ್ಲ ಅಂತ ಅಕ್ಕಪಕ್ಕದವರು ಅಂದಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೋರಿಂಗ್ ಆಸ್ಪತ್ರೆಗೆ ಕಳುಹಿಸಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.