ಬೆಂಗಳೂರು: ಆನೆ-ಮಾನವ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಆನೆ ವಿಹಾರಧಾಮ (Elephant Soft Release Center) ಸೂಕ್ತವೆಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ (Eshwar Khandre) ತಿಳಿಸಿದರು.
ಬೆಂಗಳೂರಿನಲ್ಲಿಂದು ವನ್ಯಜೀವಿ-ಮಾನವ ಸಂಘರ್ಷ ಹಾಗೂ ರೈಲ್ವೆ ಬ್ಯಾರಿಕೇಡ್ ಯೋಜನೆಗಳನ್ನು ಅಂತಿಮಗೊಳಿಸುವ ಸಂಬಂಧ ನಡೆದ ವೀಡಿಯೋ ಕಾನ್ಫರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಮಾತನಾಡಿದ ಅವರು ಚಿಕ್ಕಮಗಳೂರಿನ ಮುತ್ತೋಡಿಗಿಂತಲೂ ತಣಿಗೆಬೈಲು ಸೂಕ್ತ ಪ್ರದೇಶ ಎಂದು ತಜ್ಞರು ವರದಿ ನೀಡಿದ್ದು, ಈ ಕುರಿತಂತೆ ಸ್ಥಳೀಯರ ಸಭೆ ಕರೆದು ಚರ್ಚಿಸಲಾಗುವುದು ಎಂದರು. ಇದನ್ನೂ ಓದಿ: ಕುಟುಂಬ ರಾಜಕಾರಣದಲ್ಲಿ ದೇಶದಲ್ಲೇ ಕರ್ನಾಟಕಕ್ಕೆ ನಾಲ್ಕನೇ ಸ್ಥಾನ
ಆನೆಗಳ ಸಮಸ್ಯೆ ಯಾವ ವಲಯದಲ್ಲಿ ಹೆಚ್ಚಾಗಿದೆ. ಆನೆಗಳ ದಾಳಿ ನಡೆಯುತ್ತಿರುವ ಸಮಯ, ಕಾರಣ ಕುರಿತಂತೆ ಅಧ್ಯಯನ ನಡೆಸಿ, ಸ್ಥಳೀಯರಿಗೆ ಮುನ್ನೆಚ್ಚರಿಕೆ ನೀಡಬೇಕು. ಆನೆ ಧಾಮ ಬಹುಪಾಲು ಆನೆ-ಮಾನವ ಸಂಘರ್ಷ ತಗ್ಗಿಸುವ ಭರವಸೆ ಇದೆ. ಮುಂದಿನ ವಾರ ತಾವು ದೆಹಲಿಯಲ್ಲಿ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವರನ್ನು ಭೇಟಿ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಆನೆ ವಿಹಾರಧಾಮ ಕುರಿತಂತೆ ಸಮಗ್ರವಾಗಿ ಚರ್ಚಿಸಲಾಗುವುದು. ಕಾಂಪಾದಿಂದ ಹಣ ಬಿಡುಗಡೆ ಮಾಡುವಂತೆ ಕೋರಲಾಗುವುದು ಎಂದು ತಿಳಿಸಿದರು.
ಕಮಾಂಡ್ ಕೇಂದ್ರ:
ವನ್ಯಜೀವಿ-ಮಾನವ ಸಂಘರ್ಷ ತಡೆಗೆ ಸಮಗ್ರ ಕಮಾಂಡ್ ಸೆಂಟರ್ ಸ್ಥಾಪಿಸಲು ತಾವು ಸೂಚನೆ ನೀಡಿದ್ದರೂ, ವಿಳಂಬವಾಗುತ್ತಿದೆ. ಕೂಡಲೇ ಈ ಬಗ್ಗೆ ಕಾರ್ಯಯೋಜನೆ ರೂಪಿಸಿ, ಆನೆ ಸೇರಿದಂತೆ ವನ್ಯಜೀವಿಗಳ ಸಂಚಾರದ ಬಗ್ಗೆ ನಿಗಾ ಇಟ್ಟು ಸ್ಥಳೀಯರಿಗೆ ಕಾಲ ಕಾಲಕ್ಕೆ ಮುನ್ನೆಚ್ಚರಿಕೆ ನೀಡಲು ಮತ್ತು ವನ್ಯಮೃಗಗಳು ನಾಡಿಗೆ ಬಂದಿರುವ ಬಗ್ಗೆ ಸ್ವೀಕರಿಸುವ ದೂರಿಗೆ ತತ್ ಕ್ಷಣವೇ ಸ್ಪಂದಿಸಲಾಗಿದೆಯೇ ಇಲ್ಲವೇ ಎಂಬುದನ್ನು ಕೇಂದ್ರ ಸ್ಥಾನದಲ್ಲಿ ಕುಳಿತು ಮೇಲ್ವಿಚಾರಣೆ ನಡೆಸುವ ವ್ಯವಸ್ಥೆ ರೂಪಿಸುವಂತೆ ತಿಳಿಸಿದರು.
ಸನ್ನಾ, ಲ್ಯಾಂಟೆನ ಸಮಸ್ಯೆ ಪರಿಹರಿಸಿ:
ಸನ್ನಾ ಮತ್ತು ಲ್ಯಾಂಟೆನ ಕಳೆಗಳು ವಿಪರೀತವಾಗಿ ಕಾಡನ್ನು ಆವರಿಸುತ್ತಿವೆ. ನೆರೆಯ ತಮಿಳುನಾಡು ಮತ್ತು ಕೇರಳದಲ್ಲಿ ಇದನ್ನು ಹೇಗೆ ನಿರ್ವಹಿಸಲಾಗಿದೆ ಎಂಬ ಮಾಹಿತಿ ಪಡೆದು, ದೊಡ್ಡ ಪ್ರಮಾಣದಲ್ಲಿ ಈ ಕಳೆ ನಾಶಕ್ಕೆ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಇದನ್ನೂ ಓದಿ: ವಿಧಾನ ಮಂಡಲದಲ್ಲಿಯ ಆರೋಗ್ಯಪೂರ್ಣ ಚರ್ಚೆಗಳೇ ಪ್ರಜಾಪ್ರಭುತ್ವದ ಯಶಸ್ಸಿನ ಮೂಲಾಧಾರ: ಬಸವರಾಜ ಹೊರಟ್ಟಿ
ಹೊರಗುತ್ತಿಗೆ ಸಿಬ್ಬಂದಿ ಮಾಹಿತಿ ಕೇಳಿದ ಸಚಿವರು:
ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಸಾವಿನ ನಂತರ ಹೊರಗುತ್ತಿಗೆ ಸಿಬ್ಬಂದಿಗೆ ಸಕಾಲದಲ್ಲಿ ವೇತನ ಪಾವತಿ ಆಗುತ್ತಿಲ್ಲ. ನೌಕರರ ಭವಿಷ್ಯ ನಿಧಿ ಹಣವನ್ನು ಸಂದಾಯ ಮಾಡುತ್ತಿಲ್ಲ ಎಂಬ ದೂರುಗಳು ಬಂದಿದ್ದು, ರಾಜ್ಯದಲ್ಲಿ ಎಷ್ಟು ಹೊರಗುತ್ತಿಗೆ ಸಿಬ್ಬಂದಿ ಇದ್ದಾರೆ. ಅವರಿಗೆ ವೇತನ, ಭತ್ಯೆ ಎಷ್ಟು ತಿಂಗಳಿನಿಂದ ಪಾವತಿಯಾಗಿಲ್ಲ. ವಿಳಂಬಕ್ಕೆ ಕಾರಣ ಏನು, ಗುತ್ತಿಗೆದಾರ ಸಂಸ್ಥೆ ಇಪಿಎಫ್ ಪಾವತಿಸಿದೆಯೇ ಇತ್ಯಾದಿ ಎಲ್ಲ ಅಂಶಗಳ ವರದಿಯನ್ನು ವಿಳಂಬ ಮಾಡದೆ ಸಲ್ಲಿಸುವಂತೆ ಸೂಚಿಸಿದರು.
ವನ್ಯಜೀವಿ ಸಂರಕ್ಷಣೆಯೂ ಆಗಬೇಕು. ಅಮೂಲ್ಯವಾದ ಜೀವ ಹಾನಿ ಮತ್ತು ಬೆಳೆ ಹಾನಿ ಆಗಬಾರದು. ಈ ಬಗ್ಗೆ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಶಕ್ತಿ ಮೀರಿ ಶ್ರಮಿಸಬೇಕು. ಅರಣ್ಯ ನಾಶ ಆಗದಂತೆ ತಡೆಯಬೇಕು ಎಂದರು.
ವೀಡಿಯೋ ಕಾನ್ಫರೆನ್ಸ್ನಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ, ಹಾಗೂ ಆನೆ ಸಂಘರ್ಷ ಇರುವ ವಲಯಗಳ ಉನ್ನತಾಧಿಕಾರಿಗಳು ಪಾಲ್ಗೊಂಡಿದ್ದರು.