ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಮತ್ತು ಸಿಎಂ ಸಿದ್ದರಾಮಯ್ಯ ನಡುವೆ ಯಾವುದೇ ಮನಸ್ತಾಪವಿಲ್ಲ. ದೆಹಲಿಯಿಂದ ಎಲ್ಲರೂ ಒಟ್ಟಿಗೆ ಬಂದಿದ್ದೇವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಹೇಳಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಆಯೋಜಿಸಿಲಾಗಿರುವ ವಿವಿಧ ಘಟಕಗಳ ಸಭೆ ನಡೆಸಲು ವೇಣುಗೋಪಾಲ್ ನಗರಕ್ಕೆ ಆಗಮಿಸಿದ್ದಾರೆ. ಈ ವೇಳೆ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಬ್ಬರು ನಾಯಕರ ನಡುವೆ ಯಾವುದೇ ಮನಸ್ತಾಪವಿಲ್ಲ. ಆದರೆ ಸಾಮಾನ್ಯವಾಗಿ ಪಕ್ಷದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಇರುತ್ತವೆ. ಪಕ್ಷ ಅಂದ ಮೇಲೆ ಇವೆಲ್ಲಾ ಸಾಮಾನ್ಯವಾಗಿರುತ್ತದೆ ಎಂದರು.
ಸಿಎಂ ಸಿದ್ದರಾಮಯ್ಯ ಸರ್ಕಾರದ ವತಿಯಿಂದ ನಡೆಸುವ ಜನಾಶೀರ್ವಾದ ಯಾತ್ರೆಯಲ್ಲಿ ಪರಮೇಶ್ವರ್ ಭಾಗವಹಿಸುವುದಿಲ್ಲ. ಪಕ್ಷದ ವತಿಯಿಂದ ನಡೆಯುವ ಕಾರ್ಯಕ್ರಮಗಳಲ್ಲಿ ಮಾತ್ರ ಇಬ್ಬರು ಒಟ್ಟಾಗಿ ಪಾಲ್ಗೊಳ್ಳುತ್ತಾರೆ ಎಂದರು.
ಇನ್ನೂ ತಮ್ಮ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಕೇವಲ ರಾಜಕೀಯ ಪ್ರೇರಿತ ಆರೋಪವಾಗಿದೆ. ಬಿಜೆಪಿ ಅವರು ಪ್ರತಿಭಟನೆ ಮಾಡಿಕೊಳ್ಳಲಿ. ಆರೋಪದ ಕುರಿತು ಈಗಾಗಲೇ ಎರ್ನಾಕುಲಂ ಮ್ಯಾಜಿಸ್ಟ್ರೇಟ್ ಕೋರ್ಟ್‍ಲ್ಲಿ ಸರೀತಾ ನಾಯರ್ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ್ದೇನೆ. ಅಲ್ಲದೇ ಕೇರಳ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಮಾನಹಾನಿ ಪ್ರಕರಣದ ಆದೇಶದ ಪ್ರತಿ ಲಗತ್ತಿಸಿದ್ದಾರೆ. 40 ವರ್ಷಗಳ ನನ್ನ ಸಾರ್ವಜನಿಕ ರಾಜಕಾರಣದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ಕೇರಳದಲ್ಲಿ ಕಾಂಗ್ರೆಸ್ ಸರ್ಕಾರವಿಲ್ಲ, ಸಿಪಿಎಂ ಸರ್ಕಾರ ಅಧಿಕಾರ ನಡೆಸುತ್ತಿದೆ. ಸರ್ಕಾರ ಯಾವುದೇ ತನಿಖೆ ನಡೆಸಿದರೂ ಎದುರಿಸಲು ಸಿದ್ಧ. ಆರೋಪ ಸಾಬೀತಾದ್ರೆ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಸವಾಲು ಎಸೆದರು. ( ಇದನ್ನೂ ಓದಿ: ಕರ್ನಾಟಕ ಉಸ್ತುವಾರಿಯ ‘ಕೈ’ಚಳಕಕ್ಕೆ ಸರಿತಾಗೆ 5 ದಿನ ನಡೆಯೋಕೂ ಸಾಧ್ಯವಾಗಿಲ್ವಂತೆ! )
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡಲು ಬಿಜೆಪಿ ಪಕ್ಷ ಮುಂದಾಗಿದೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಈ ಕುರಿತು ಸಂಸದ ಪ್ರತಾಪ್ ಅವರ ವಿಡಿಯೋವನ್ನು ನೋಡಿದ್ದೇನೆ. ಕಾನೂನು ಸುವ್ಯವಸ್ಥೆ ಹಾಳು ಮಾಡಿ ಅಶಾಂತಿ ಉಂಟು ಮಾಡುವುದೇ ಅವರ ಸಿದ್ಧಾಂತ. ಕಾನೂನು ವ್ಯವಸ್ಥೆಯನ್ನು ಹದಗೆಡಿಸಲು ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ಪ್ರಚೋದನೆ ನೀಡುತ್ತಾರೆ ಎಂದರೇ ಅರ್ಥ ಏನು? ಬಿಜೆಪಿ ನಾಯಕರಿಗೆ ಅಭಿವೃದ್ಧಿ ವಿಚಾರದಲ್ಲಿ ಮಾತಾಡಲು ಅವಕಾಶವಿಲ್ಲ. ಹಾಗಾಗಿ ರಾಜ್ಯದಲ್ಲಿ ಕೋಮುಗಲಾಟೆ ವಿಚಾರಗಳನ್ನು ಟಾರ್ಗೆಟ್ ಮಾಡಿಕೊಂಡು ರಸ್ತೆಗಿಳಿದಿದ್ದಾರೆ ಎಂದು ಆರೋಪ ಮಾಡಿದರು.
https://www.youtube.com/watch?v=eWGguHNhwBQ