ಬೆಂಗಳೂರು: ಜಾರಿ ನಿರ್ದೇಶನಾಲಯ(ಇಡಿ) ಸಮನ್ಸ್ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಟ್ರಬಲ್ ಶೂಟರ್, ಮಾಜಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ಏಕಾಂಗಿಯಾದ್ರಾ ಅನ್ನೋ ಅನುಮಾನವೊಂದು ಎದ್ದಿದೆ.
ಇಡಿ ಸಮನ್ಸ್‍ಗೆ ತಲೆಕೆಡಿಸಿಕೊಂಡಿರೋ ಟ್ರಬಲ್ ಶೂಟರ್ ಸಮಾಧಾನ ಮಾಡಲು ಯಾವೊಬ್ಬ ಕಾಂಗ್ರೆಸ್ ನಾಯಕರು ಮನೆಗೆ ಬಂದಿಲ್ಲ. ಗುರುವಾರ ಡಿಕೆಶಿ ಅವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನು ಭೇಟಿ ಮಾಡಿದ್ದರು. ಆ ಬಳಿಕ ತಡರಾತ್ರಿ ಮಾಜಿ ಸಂಸದ ಶಿವರಾಮೇಗೌಡ ಅವರು ಭೇಟಿ ನೀಡಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿ ತೆರಳಿದ್ದಾರೆ.
ಬಳಿಕ ಮಾತನಾಡಿದ ಶಿವರಾಮೇ ಗೌಡ, ಡಿಕೆ ಶಿವಕುಮಾರ್ ಅವರು ನಮ್ಮ ನಾಯಕರು, ನಮ್ಮ ಬಂಧು. ಸೌಹಾರ್ದಯುತವಾಗಿ ಭೇಟಿ ಮಾಡಿದ್ದೇನೆ. ರಾಜಕೀಯ ವಿಚಾರ, ಇಡಿ ನೋಟಿಸ್ ವಿಚಾರ ಎಲ್ಲಾ ಚರ್ಚೆ ಆಯ್ತು. ಈ ಪ್ರಕ್ರಿಯೆ ಹೊಸದೇನಲ್ಲ ನಡೆಯುತ್ತಾನೇ ಇದೆ. ಬಿಜೆಪಿ ಅವರು ಕಿರುಕುಳ ಕೊಡುತ್ತಾನೆ ಇದ್ದಾರೆ. ಆದರೆ ಅವರು ಯಾವುದೇ ಆತಂಕದಲ್ಲಿ ಇಲ್ಲ. ಕಾನೂನು ತಜ್ಞರ ಜೊತೆ ಸಮಾಲೋಚನೆ ಮಾಡುತ್ತಿದ್ದಾರೆ. ಸಮನ್ಸ್ ಕೊಟ್ಟ ಮೇಲೆ ಕಾನೂನು ಹೋರಾಟ ಮಾಡಲೇ ಬೇಕಲ್ಲ ಮಾಡುತ್ತಾರೆ ಎಂದರು.
ತಡರಾತ್ರಿ ಆಪ್ತ ವಿಜಯ್ ಮುಳಗುಂದ ಅವರು ಕೂಡ ಡಿಕೆಶಿ ನಿವಾಸಕ್ಕೆ ಆಗಮಿಸಿದರು. ಈ ಹಿಂದೆ ಐಟಿ ರೇಡ್ ಆದಾಗ ಡಿಕೆಶಿ ಆಪ್ತ ಎಂದು ವಿಜಯ್ ಮುಳಗುಂದ ಮನೆಯ ಮೇಲೂ ದಾಳಿ ಮಾಡಲಾಗಿತ್ತು. ಈಗ ಇಡಿ ನೋಟಿಸ್ ಬೆನ್ನಲ್ಲೇ ಡಿಕೆಶಿ ನಿವಾಸಕ್ಕೆ ತಡರಾತ್ರಿ ಆಗಮಿಸಿದರು. ಡಿಕೆಶಿ ತಡರಾತ್ರಿವರೆಗೂ ಆಪ್ತರು ಮತ್ತು ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು.