ಹಾಸನದಲ್ಲಿ ಎ. ಮಂಜು ಸೋಲಿಸಲು ಪ್ರೀತಂ ಗೌಡ ಸ್ಕೆಚ್!- ಆಡಿಯೋ ವೈರಲ್

Public TV
3 Min Read
BJP

ಹಾಸನ: ಬಿಜೆಪಿ ಅಭ್ಯರ್ಥಿ ಸೋಲಿಗೆ ಕಮಲ ನಾಯಕರೇ ಸ್ಕೆಚ್ ಹಾಕುತ್ತಿದ್ದಾರಾ ಎಂಬ ಪ್ರಶ್ನೆಯೊಂದು ಮೂಡಿದೆ. ಯಾಕಂದ್ರೆ ಶಾಸಕ ಪ್ರೀತಂಗೌಡ ಹಾಗೂ ಬಿಜೆಪಿ ಕಾರ್ಯಕರ್ತ ಮಾತಾಡಿದ್ದಾರೆ ಎನ್ನಲಾದ ಆಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಆಡಿಯೋದಲ್ಲಿ ಮತನಾಡಿದ ಪ್ರಕಾರ ಹಾಸನ ಬಿಜೆಪಿ ಅಭ್ಯರ್ಥಿ ಎ ಮಂಜು ಪುಕ್ಸಟ್ಟೆ ಲೀಡ್ರಾ ಅನ್ನೋ ಪ್ರಶ್ನೆಯೂ ಮೂಡಿದೆ. ಏಳು ತಿಂಗಳ ಹಿಂದೆ ಎ.ಮಂಜು ಹಾಕಿಸಿದ ಪೊಲೀಸ್ ಕೇಸನ್ನು ಬಿಜೆಪಿ ಮರೆತಿಲ್ಲ ಎಂದು ಸಂಭಾಷಣೆ ನಡೆದಿದ್ದು, ಈ ಮೂಲಕ ಬಿಜೆಪಿ ಕಾರ್ಯಕರ್ತರೇ ಎ ಮಂಜು ವಿರುದ್ಧ ಮತ ಹಾಕ್ತಾರಾ ಅನ್ನೋ ಅನುಮಾನ ಬಿಜೆಪಿ ವಲಯದಲ್ಲಿ ಮೂಡಿದೆ.

PREETHAM GOWDA

ಎ ಮಂಜು ಎರಡು ಲಕ್ಷ ಎಂಬತ್ತು ಸಾವಿರ ಲೀಡ್‍ನಲ್ಲಿ ಸೋತ ಬಳಿಕ ಮತ್ತೆ ಸಿದ್ದರಾಮಯ್ಯನ ಹತ್ತಿರ ಹೋಗ್ತಾರೆ ಎಂದು ಆಡಿಯೋದಲ್ಲಿ ಹೇಳಲಾಗಿದೆ. ಹೀಗಾಗಿ ಹಾಸನ ಬಿಜೆಪಿ ಅಭ್ಯರ್ಥಿ ಸೋಲಿಗೆ ಶಾಸಕ ಪ್ರೀತಂಗೌಡ ಸ್ಕೆಚ್ ಹಾಕಿದ್ದಾರಾ ಎಂಬ ಪ್ರಶ್ನೆ ಕಾಡುತ್ತಿದೆ. ಆದ್ರೆ ಪ್ರೀತಂಗೌಡ ಹಾಗೂ ಬಿಜೆಪಿ ಕಾರ್ಯಕರ್ತ ಮಾತಾಡಿದ್ದಾರೆ ಎನ್ನಲಾದ ಈ ಆಡಿಯೋ ಅಸಲಿಯೋ ನಕಲಿಯೋ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

ಆಡಿಯೋದಲ್ಲೇನಿದೆ?
ಬಿಜೆಪಿ ಕಾರ್ಯಕರ್ತ: ಅಲ್ಲ ಹೋಗ್ಲಿ ಅವನಿಗೇನು ದರ್ದು.. ನಮ್ ಪಾರ್ಟಿಗೆ ಬಂದು ಕ್ಯಾಂಡಿಡೇಟ್ ಆಗೋಕೆ?
ಪ್ರೀತಂಗೌಡ: ಪುಕ್ಸಟ್ಟೆ ಲೀಡರ್ ಆಗ್ತಾನಲ್ಲ…
ಬಿಜೆಪಿ ಕಾರ್ಯಕರ್ತ: ಹೌದಣ್ಣ ಹೌದು..
ಪ್ರೀತಂಗೌಡ: ಇಲ್ಲೇನಾಗಿದೆ.. ಈಗ ಬಿಜೆಪಿ ಡೆವಲಪ್ ಆಗಿದೆ.. ಬೇಲೂರು ಸೆಕೆಂಡ್ ಪ್ಲೇಸು.. ಸಕಲೇಶಪುರ ಸೆಕೆಂಡ್ ಪ್ಲೇಸು.. ಇಲ್ಲಿ ಗೆದ್ದಿದ್ದಿವಿ.. ಅರಸೀಕೆರೆಲಿ ವೋಟ್ ಬ್ಯಾಂಕ್ ಇದೆ.. ಕಡೂರಲ್ಲೂ ಇದೆ..
ಬಿಜೆಪಿ ಕಾರ್ಯಕರ್ತ: ಒಂದ್ ನಿಮಿಷ ಅಣ್ಣ.. ನೀವು ಹೇಳಿದಂಗೆ ಪುಕ್ಸಟ್ಟೆ ಲೀಡರ್ ಆಗ್ತಾನೆ ನಿಜ.. ಆದರೆ ಕಾಂಗ್ರೆಸ್ ನಲ್ಲಿದ್ದುಕೊಂಡು ಬಿಜೆಪಿ ಕಾರ್ಯಕರ್ತರ ಮೇಲೆ ಕೇಸು ಹಾಕ್ಸಿದ್ದಾನಲ್ಲ.. ಜನ ಮರೆತು ಬಿಡ್ತಾರಾ..?

A MANJU

ಪ್ರೀತಂಗೌಡ: ಹಾ.. ನೆಗೆಟಿವಿಟಿ ಹತ್ತು ವರ್ಷದ ಹಿಂದೆ ಆಗಿದ್ದರೆ ಜನ ಮರೆತು ಬಿಡ್ತಾರೆ ಅನ್ಕೊಬಹುದು. ಅದರೆ ಏಳು ತಿಂಗಳ ಹಿಂದೆ ಮಂಜು ಮಾಡಿರುವ ಅವಾಂತರ ಮರಿಯೋಕೆ ಆಗಲ್ಲ.
ಬಿಜೆಪಿ ಕಾರ್ಯಕರ್ತ: ಹೌದಣ್ಣ.. ನಿಜ ನಿಜ..
ಪ್ರೀತಂಗೌಡ: ಹಂಗಾಗಿ ಜೆಡಿಎಸ್‍ಗೆ ವೋಟು ಹೋಗುತ್ತೆ.
ಬಿಜೆಪಿ ಕಾರ್ಯಕರ್ತ: ಅಲ್ಲಾ ಅಣ್ಣ.. ಜೆಡಿಎಸ್ ಗೆಲ್ಲುತ್ತೆ ಅಂತ ನೀವೇ ಹೇಳ್ತೀರಿ… ಹಾಗಾದ್ರೆ ನೀವು ಮಾಡುತ್ತಿರುವ ಶ್ರಮ ಎಲ್ಲ ವೇಸ್ಟ್ ಅಲ್ವೇನಣ್ಣ..?

ಪ್ರೀತಂ ಗೌಡ: ಹಾಂ… ನಾನು 20 ಗಂಟೆ ಕೆಲಸ ಮಾಡ್ತೀನಿ.. ಬಿಜೆಪಿಯವರು-ಸಂಘದವರು ಇವರಿಗೆ ಮಾಡಲ್ಲ. ಬಳ್ಳಾರಿ ಶ್ರೀರಾಮುಲು ಎಲೆಕ್ಷನ್ ರಿಪೀಟ್ ಆಗುತ್ತೆ. ಹೆಸರಿಗೆ ಮಾತ್ರ ಮಂಜು ಬಿಗ್ ಸ್ಟಾರ್.. ಬೂತ್ ತೆಗೆದು ನೋಡಿದರೆ ಎರಡು ಲಕ್ಷ ಎಂಬತ್ತು ಸಾವಿರ ವೋಟಿನಲ್ಲಿ ಜೆಡಿಎಸ್‍ನವರು ಗೆದ್ದರು ಅಂತಾರೆ… ಓಹ್… ದುಡ್ಡು ಹಂಚಿದ್ರು ಜೆಡಿಎಸ್‍ನವರು ಅಂತಾರೆ.
ಬಿಜೆಪಿ ಕಾರ್ಯಕರ್ತ: ಆಯ್ತು ಅಣ್ಣ.. ನೀವು ಹೇಳಿದ್ದನ್ನು ಒಪ್ಪಿಕೊಳ್ತಿನಿ ನಾನು.. ಒಕೆ.. ನೀವು ಹೇಳಿದಂಗೆ ಸೋಲ್ತಾನೆ.. ಒಂದು ಪಕ್ಷ ಗೆದ್ದರೆ ಅವನು, ಬಂದಿರುವ ವೋಟುಗಳನ್ನೆಲ್ಲ ಪ್ರೀತಂಗೌಡರಿಂದ ಬಂತು ಅಂತ ಹೇಳ್ತಾನಾ?

BJP SULLAI

ಪ್ರೀತಂಗೌಡ: ವೋಟು ಬಂದ್ರೆ ಮಂಜಣ್ಣ ನಾನು ತಂದಿದ್ದೆ ಅಂತಾರೆ. ಸೋತು ಬಿಟ್ಟರೆ ಆಮೇಲೆ ಓಡೋಗಿ ಬಿಡ್ತಾರೆ… ಸೋತರೆ ಮತ್ತೆ ಸಿದ್ದರಾಮಯ್ಯ ಅಂತ ಹೊರಟು ಬಿಡ್ತಾರೆ. ಅವರೇನು ಪಾರ್ಟಿಯಲ್ಲಿ ಇರೋರಲ್ಲ.. ಎರಡು ಸಾರಿ ಬಿಜೆಪಿಗೆ ಕೈಕೊಟ್ಟು ಹೋಗಿದ್ದಾರೆ.. ಆಪರೇಷನ್ ಕಮಲ ಲಾಸ್ಟ್ ಟೈಮ್ 2008ರಲ್ಲಿ ಬಂದು ಹೋದ್ರು.. ಅದಕ್ಕೂ ಮುಂಚೆ 99ರಲ್ಲಿ ಗೆದ್ದು ವಾಪಸ್ ಹೋದ್ರು… ಅವರು ಬಂದಾಗ ಏನೋ ಮಾಡ್ತಾರೆ.. ಆಮೇಲೆ ಏನ್ ಗೊತ್ತಾ ಈಗ ನಾವು ಸೆಕಂಡ್ ಪ್ಲೇಸಲ್ಲಿ ಇದ್ದೀವಿ. ಥರ್ಡ್ ಪ್ಲೇಸ್ ಇದ್ದೀವಿ.. ಅವರು ಬಂದು ಪಾರ್ಟಿನಾ ಗುಡಿಸಿಕೊಂಡು ಹೋದರೆ… ಮತ್ತೆ ನಾವು ಥರ್ಡ್ ಪ್ಲೇಸಿಗೆ ಹೋಗ್ಬೇಕಾಗುತ್ತೆ..
ಬಿಜೆಪಿ ಕಾರ್ಯಕರ್ತ: ಆಯ್ತು ಬಿಡಣ್ಣ.. ಅರ್ಥ ಆಯ್ತು.. ವಾಪಸ್ ಎಲ್ಲಿಗೆ ಕಳಿಸಬೇಕೋ ಅಲ್ಲಿಗೆ ಕಳಿಸ್ತೀವಿ..

Share This Article
Leave a Comment

Leave a Reply

Your email address will not be published. Required fields are marked *