ಬೆಂಗಳೂರು: ಇಡೀ ಕರ್ನಾಟಕ ವಿಧಾನಸಭಾ ಚುನಾವಣೆಯ ಬಿಸಿಯೇರಿಸಿಕೊಂಡಿದೆ. ಇಂಥಾ ವಾತಾವರಣದಲ್ಲಿ ರಾಜಕೀಯ ವಲಯದಲ್ಲಿ ಬಿರುಸಿನ ವಾತಾವರಣ ಇರೋದು ಸಹಜವೇ. ಆದರೆ ಈ ಸಲ ಚಿತ್ರರಂಗದಲ್ಲಿಯೂ ಚುನಾವಣಾ ಪ್ರಭಾವ ಬಲು ಜೋರಾಗಿದೆ. ಆ ಸ್ಟಾರ್ ರಾಜಕೀಯಕ್ಕಿಳೀತಾರೆ, ಮತ್ಯಾರಿಗೋ ಟಿಕೆಟು ಪಕ್ಕಾ ಆಗಿದೆ ಎಂಬೆಲ್ಲ ರೂಮರ್ ಮಾಮೂಲಿ. ಆದರೆ ಈ ಸಲ ಈ ರೇಸಿನಲ್ಲಿ ಕಿಚ್ಚ ಸುದೀಪ್ ಅವರ ಹೆಸರೂ ಚಾಲ್ತಿಯಲ್ಲಿರೋದು ನಿಜವಾದ ವಿಶೇಷ!
ಸುದೀಪ್ ರಾಜಕೀಯಕ್ಕೆ ಬರುತ್ತಾರೆಂಬ ಅಂತೆ ಕಂತೆಯಾಗಲಿ, ಅವರನ್ನು ಸೆಳೆದುಕೊಳ್ಳಲು ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಒಳಗೊಳಗೇ ಕಸರತ್ತು ನಡೆಸೋದಾಗಲಿ ಹೊಸದೇನೂ ಅಲ್ಲ. ಆದರೆ ಒಂದು ಮೂಲದ ಪ್ರಕಾರ ಈ ಸಲ ರಾಜಕೀಯಕ್ಕೆ ಅಡಿಯಿರಿಸಲು ತೀರ್ಮಾನ ಮಾಡಿಕೊಂಡಿರೋ ಸುದೀಪ್ ಅದಕ್ಕಾಗಿ ತಯಾರಾಗಲಾರಂಭಿಸಿದ್ದಾರಂತೆ!
Advertisement
Advertisement
ಹಾಗಾದರೆ ಅವರು ಯಾವ ಪಕ್ಷದಿಂದ ಸ್ಪರ್ಧಿಸ್ತಾರೆ, ಕ್ಷೇತ್ರ ಯಾವುದು ಅಂತೆಲ್ಲ ಸಾಲು ಸಾಲು ಪ್ರಶ್ನೆಗಳೇಳೋದು ಸಹಜವೇ. ಈ ನಿಟ್ಟಿನಲ್ಲಿ ನೋಡ ಹೋದರೆ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಲು ಸ್ವತಃ ಸುದೀಪ್ ಇಚ್ಛೆ ಹೊಂದಿದ್ದಾರೆ ಎಂಬ ಮಾತೂ ಕೇಳಿಬಂದಿತ್ತು. ಸುದೀಪ್ ಅವರ ರಾಜಕೀಯ ಎಂಟ್ರಿ ಮತ್ತು ಅವರು ಬಯಸೋ ಕ್ಷೇತ್ರವನ್ನು ನೀಡಲು ರಾಹುಲ್ ಗಾಂಧಿಯನ್ನು ಒಪ್ಪಿಸೋ ಜವಾಬ್ದಾರಿಯನ್ನು ನಟಿ ರಮ್ಯಾ ವಹಿಸಿಕೊಂಡಿದ್ದಾರಂತೆ ಎಂಬೆಲ್ಲಾ ಅಂತೆಕಂತೆಗಳೂ ಹರಿದಾಡಿದ್ದವು.
Advertisement
ಆದರೆ ದಿಢೀರ್ ಅಂತಾ ಇವತ್ತು ಬೆಳಬೆಳಿಗ್ಗೆಯೇ ಸುದೀಪ್ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರನ್ನು ಸ್ವತಃ ಕುಮಾರಣ್ಣನ ಮನೆಯಲ್ಲೇ ಭೇಟಿ ಮಾಡಿ ಸರಿಸುಮಾರು ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿರೋದು ರಾಜಕೀಯ ಪಂಡಿತರ ತಲೆ ಕೆಡಿಸಿದೆ. ಈ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಮತ್ತು ಶಾಸಕ ಸಾರಾ ಮಹೇಶ್ ಮುಂತಾದವರು ಹಾಜರಿದ್ದರು.
Advertisement
ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸುತ್ತಾರಾ?: ಈ ಕ್ಷೇತ್ರದಲ್ಲಿ 90 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನಾಯಕ ಸಮಾಜದ ಮತದಾರರಿದ್ದಾರೆ. ಇದೂ ಕೂಡಾ ಸುದೀಪ್ ಗೆಲುವಿಗೆ ಸಹಕಾರಿಯಾಗುತ್ತದೆ ಎಂಬ ಲೆಕ್ಕಾಚಾರ ಜೆಡಿಎಸ್ ಪಾಳೆಯದಲ್ಲಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮೂಲದ ನೇರಳಗುಂಟೆ ತಿಪ್ಪೇಸ್ವಾಮಿ ಕಳೆದ ಬಾರಿ ಬಿಎಸ್‍ಆರ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಬಾರಿ ಯೂಥ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಹಾಲಿ ಜಿಲ್ಲಾ ಪಂಚಾಯತ್ ಸದಸ್ಯರೋರ್ವರು ಈ ಬಾರಿ ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ಕ್ಷೇತ್ರಕ್ಕೆ ಅನೇಕರು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಅದರಲ್ಲಿ ಮಾಜಿ ಎಂಪಿ ನಟ ಶಶಿಕುಮಾರ್ ಕೂಡಾ ಒಬ್ಬರು. ಅವರೂ ಕೂಡಾ ಈ ಬಾರಿ ಹೇಗಾದರೂ ಮಾಡಿ ಕಾಂಗ್ರೆಸ್ ಟಿಕೆಟ್ ಪಡೆದು ಶಾಸಕನಾಗೋ ಹಂಬಲ ಹೊಂದಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಚಳ್ಳಕೆರೆ ಕ್ಷೇತ್ರದಿಂದ ಶಶಿಕುಮಾರ್ ಟಿಕೆಟ್ ಬಯಸಿದ್ದರಾದರೂ ಸಿಕ್ಕಿರಲಿಲ್ಲ. ಆಗ ಟಿಕೆಟ್ ರಘುಮೂರ್ತಿ ಪಾಲಾಗಿತ್ತು. ಹೀಗಾಗಿ ಕಿಚ್ಚ ಸುದೀಪ್ ಜೆಡಿಎಸ್ ನಿಂದ ಸ್ಪರ್ಧಿಸುತ್ತಾರಾ ಎಂಬ ಅನುಮಾನ ಮೂಡಿದೆ.
ಇನ್ನು ಇದೇ ಚಿತ್ರದುರ್ಗದಿಂದ ಮೊಗವೀರ ಸಮುದಾಯದ ನಟಿ ಭಾವನಾ ಕೂಡಾ ಆಕಾಂಕ್ಷಿಯಾಗಿದ್ದಾರಂತೆ. ಆದರೆ ಬೇರೆಲ್ಲರ ಕಥೆ ಏನೋ ಹೇಳಲು ಬರೋದಿಲ್ಲ. ಕಿಚ್ಚ ಸುದೀಪ್ ಮನಸು ಬದಲಾವಣೆ ಮಾಡಿಕೊಳ್ಳದೆ ರಾಜಕೀಯಕ್ಕಿಳಿದರೆ ಅವರು ಮೊಳಕಾಲ್ಮೂರು ಕ್ಷೇತ್ರದಿಂದಲೇ ಕಣಕ್ಕಿಳಿಯೋದು ಖಚಿತ ಅನ್ನೋದು ಕೆಲವರ ಅಭಿಪ್ರಾಯವಾದರೆ ಇನ್ನು ಕೆಲವರು ಜೆಡಿಎಸ್ ಪ್ರಚಾರಕ್ಕಷ್ಟೇ ಕಿಚ್ಚ ಒಪ್ಪಿದ್ದಾರೆ ಅನ್ನೋ ಮಾತುಗಳೂ ವ್ಯಕ್ತವಾಗುತ್ತಿವೆ. ಒಟ್ಟಾರೆ ಕಿಚ್ಚ ಕುಮಾರಣ್ಣ ಭೇಟಿಯ ಅಂತಿಮ ಸೀಕ್ರೆಟ್ ಏನೆನ್ನುವುದು ಶೀಘ್ರದಲ್ಲೇ ಹೊರಬೀಳಲಿದೆ.