ಬಾಗ್ದಾದ್: ಇರಾಕ್ (Iraq) ಸಂಸತ್ತಿನಲ್ಲಿ ಪ್ರಸ್ತಾವಿತ ಮಸೂದೆಯೊಂದು ವ್ಯಾಪಕ ಆಕ್ರೋಶ ಮತ್ತು ಕಳವಳ ಹುಟ್ಟುಹಾಕಿದೆ. ಈ ಮಸೂದೆ, ಹೆಣ್ಣುಮಕ್ಕಳ ವಿವಾಹದ ಕಾನೂನುಬದ್ಧ ವಯಸ್ಸನ್ನು ಕೇವಲ 9 ವರ್ಷಕ್ಕೆ ಇಳಿಸಲು ಪ್ರಯತ್ನಿಸುತ್ತಿದೆ.
ಇರಾಕ್ ನ್ಯಾಯ ಸಚಿವಾಲಯವು ಪರಿಚಯಿಸಿದ ವಿವಾದಾತ್ಮಕ ಶಾಸನವು, ದೇಶದ ವೈಯಕ್ತಿಕ ಸ್ಥಿತಿಯ ಕಾನೂನನ್ನು ತಿದ್ದುಪಡಿ ಮಾಡುವ ಗುರಿಯನ್ನು ಹೊಂದಿದೆ. ಈಗಾಗಲೇ ಇರುವ ಕಾನೂನು ಮದುವೆಗೆ ಕನಿಷ್ಠ ವಯಸ್ಸನ್ನು 18 ಕ್ಕೆ ನಿಗದಿಪಡಿಸುತ್ತದೆ.
Advertisement
Advertisement
ಕೌಟುಂಬಿಕ ವ್ಯವಹಾರಗಳನ್ನು ನಿರ್ಧರಿಸಲು ಧಾರ್ಮಿಕ ಅಧಿಕಾರಿಗಳು ಅಥವಾ ನಾಗರಿಕ ನ್ಯಾಯಾಂಗದ ನಡುವೆ ಆಯ್ಕೆ ಮಾಡಲು ಈ ಮಸೂದೆಯು ನಾಗರಿಕರಿಗೆ ಅವಕಾಶ ನೀಡುತ್ತದೆ. ಇದು ಉತ್ತರಾಧಿಕಾರ, ವಿಚ್ಛೇದನ ಮತ್ತು ಮಕ್ಕಳ ಪಾಲನೆಯ ವಿಷಯಗಳಲ್ಲಿ ಹಕ್ಕುಗಳ ಕಡಿತಕ್ಕೆ ಕಾರಣವಾಗುತ್ತದೆ ಎಂದು ಕೆಲ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
Advertisement
ಮಸೂದೆ ಅಂಗೀಕಾರವಾದರೆ, 9 ವರ್ಷ ವಯಸ್ಸಿನ ಹುಡುಗಿಯರು ಮತ್ತು 15 ವರ್ಷ ವಯಸ್ಸಿನ ಹುಡುಗರು ವಿವಾಹವಾಗಲು ಅವಕಾಶ ಇರುತ್ತದೆ. ಇದು ಹೆಚ್ಚಿನ ಬಾಲ್ಯ ವಿವಾಹ ಮತ್ತು ಹೆಣ್ಣಿನ ಶೋಷಣೆಗೆ ದಾರಿ ಮಾಡಿಕೊಡುತ್ತದೆ. ಈ ಪ್ರತಿಗಾಮಿ ಕ್ರಮವು ಮಹಿಳೆಯರ ಹಕ್ಕುಗಳು ಮತ್ತು ಲಿಂಗ ಸಮಾನತೆಯನ್ನು ದುರ್ಬಲಗೊಳಿಸುತ್ತದೆ ಎಂದು ವಿಮರ್ಶಕರು ವಾದಿಸುತ್ತಾರೆ.
Advertisement
ಮಾನವ ಹಕ್ಕುಗಳ ಸಂಘಟನೆಗಳು, ಮಹಿಳಾ ಗುಂಪುಗಳು ಮತ್ತು ನಾಗರಿಕ ಸಮಾಜದ ಕಾರ್ಯಕರ್ತರು ಈ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಯುವತಿಯರ ಶಿಕ್ಷಣ, ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಬೀರಬಹುದಾದ ಗಂಭೀರ ಪರಿಣಾಮಗಳ ಬಗ್ಗೆ ಎಚ್ಚರಿಸಿದ್ದಾರೆ.
ವಿಶ್ವಸಂಸ್ಥೆಯ UNICEF ಪ್ರಕಾರ, ಇರಾಕ್‌ನಲ್ಲಿ 28% ಹುಡುಗಿಯರು ಈಗಾಗಲೇ 18 ವರ್ಷಕ್ಕಿಂತ ಮುಂಚೆಯೇ ಮದುವೆಯಾಗಿದ್ದಾರೆ. ಈ ಕಾನೂನನ್ನು ಅಂಗೀಕರಿಸುವುದರಿಂದ ದೇಶವು ಮತ್ತೆ ಹಿಂದಿನ ಕಾಲದ ಸಂಪ್ರದಾಯಕ್ಕೆ ಜೋತುಬಿದ್ದಂತಾಗುತ್ತದೆ ಎಂದು ಹ್ಯೂಮನ್ ರೈಟ್ಸ್ ವಾಚ್ ಸಂಶೋಧಕಿ ಸಾರಾ ಸಾನ್ಬರ್ ಅಭಿಪ್ರಾಯಪಟ್ಟಿದ್ದಾರೆ.